ಕರ್ನಾಟಕಪ್ರಮುಖ ಸುದ್ದಿಮೈಸೂರು

ಜನರಲ್ಲಿ ಆತ್ಮವಿಶ್ವಾಸ ತುಂಬಲು ಪೊಲೀಸರಿಗೆ ಹೃದಯವಂತಿಕೆ ಬೇಕೇ ಹೊರತು ಕಠಿಣ ನಿರ್ಧಾರಗಳಲ್ಲ : ಗೃಹ ಸಚಿವ ಅರಗ ಜ್ಞಾನೆಂದ್ರ

6ನೇ ತಂಡದ ಮಹಿಳಾ ಪೊಲೀಸ್ ಕಾನ್ಸಟೇಬಲ್   ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನ

ಮೈಸೂರು,ಸೆ.28:-  ಜನರಲ್ಲಿ ಆತ್ಮವಿಶ್ವಾಸ ತುಂಬಲು ಪೊಲೀಸರಿಗೆ ಹೃದಯವಂತಿಕೆ ಬೇಕೇ ಹೊರತು ಕಠಿಣ ನಿರ್ಧಾರಗಳಲ್ಲ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ತಿಳಿಸಿದರು.

ಅವರಿಂದು ಪೊಲೀಸ್ ತರಬೇತಿ ಶಾಲೆ ಜ್ಯೋತಿ ನಗರ ಇಲ್ಲಿ  6ನೇ ತಂಡದ ಮಹಿಳಾ ಪೊಲೀಸ್ ಕಾನ್ಸಟೇಬಲ್   ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು  ಗೌರವ ವಂದನೆ ಸ್ವೀಕರಿಸಿ , ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮಹಿಳೆ ಅಬಲೆ ಅಂತ ಹೇಳಿದರು, ಯಾಕಾಗಿ ಹೇಳಿದರು ಅಂತ ಈ ಪರೇಡ್ ಸಂದರ್ಭದಲ್ಲಿ ಪ್ರಶ್ನಾರ್ಥಕ  ಚಿಹ್ನೆ ನನ್ನಲ್ಲಿ ಮೂಡಿತು, ನಾನು ಅಬಲೆಯಲ್ಲ, ಸಬಲೆ  ನನ್ನನ್ನು ನಾನು ರಕ್ಷಣೆ ಮಾಡಿಕೊಂಡು ಸಮಾಜವನ್ನು, ಸಮುದಾಯವನ್ನು ರಕ್ಷಣೆ ಮಾಡುವ ಯೋಗ್ಯತೆ ಪಡೆದಿದ್ದೇನೆಂದು ಎದೆ ತಟ್ಟಿ ಹೇಳುವ ವಾತಾವರಣ ಈ ಪರೇಡ್ ಮೈದಾನದಲ್ಲಿ ಕಂಡು ಬಂತು ಎಂದರು.

ವೈರಿ ರಾಷ್ಟ್ರಗಳಿಂದ ಬರುವ ನಮ್ಮ ಶತ್ರುಗಳನ್ನು ದಮನ ಮಾಡಲು ನಮ್ಮ ಮಿಲಿಟರಿ ಪಡೆ ಸನ್ನದ್ಧವಾಗಿದೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಮಿಲಿಟರಿ ಪಡೆ ಇರುವಂತದ್ದು ಭಾರತದಲ್ಲಿ.   ನಮ್ಮದು   ವಿಸ್ತಾರದಲ್ಲಿ ದೊಡ್ಡ ದೇಶ, 133ಕೋಟಿ ಜನಸಂಖ್ಯೆ ಇರತಕ್ಕ ಈ ದೇಶ  ವಿವಿಧ ಧರ್ಮ, ಮತ, ಪಂಥ ಭಾಷೆ ಇವೆಲ್ಲವೂ ಇರತಕ್ಕ ದೇಶದ ಆಂತರಿಕ ರಕ್ಷಣೆಯ ಸವಾಲನ್ನು ಮಿಲಿಟರಿಯವರು ಮಾಡಲು ಸಾಧ್ಯವಿಲ್ಲ.  ನಮ್ಮ ದೇಶದ ಪೊಲೀಸ್ ಪಡೆ ಸವಾಲಾಗಿ ಸ್ವೀಕರಿಸುತ್ತಿದೆ. ದೇಶದ ಆಂತರಿಕ ಭದ್ರತೆಯನ್ನು ಗಟ್ಟಿಗೊಳಿಸಿ ದೇಶದ ನಾಗರಿಕರ ಮಾನ, ಪ್ರಾಣ ಸ್ವತ್ತನ್ನು ಕಾಪಾಡುವಂತಹ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತಹ ಬಹಳ ದೊಡ್ಡ ಹೊಣೆಗಾರಿಕೆಯನ್ನು ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಪೊಲೀಸರು ಅಂದ ತಕ್ಷಣ ಪುರುಷರು ಅನ್ನುವ ಪರಿಕಲ್ಪನೆ ನಿರ್ಮಾಣವಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಹಿಳಾ ಸಿಬ್ಬಂದಿಯನ್ನು ಪೊಲೀಸ್ ಪಡೆಯಲ್ಲಿ ನೇಮಕ ಮಾಡಿಕೊಳ್ಳುವ ಪಾಲಿಸಿ ತಂದಿದೆ. 100ಕ್ಕೆ 25ಪಾಲು ಮಹಿಳೆಯರು ಪೊಲೀಸ್ ಪಡೆಯಲ್ಲಿ ಇರಬೇಕು. ರಾಜ್ಯದಲ್ಲಿ ಶೇ.10ರಷ್ಟು ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದಾರೆ. ಕ್ರಮೇಣ ಇದನ್ನು ಹೆಚ್ಚಿಸತಕ್ಕಂತಹ ಕೆಲಸ ಇವತ್ತು ನಡೆದಿದೆ. ಅದರ ಪರಿಣಾಮವಾಗಿ ತಾವೆಲ್ಲ ತರಬೇತಿಯನ್ನು ಪಡೆದು ಇಂದು ಅಂತಿಮ ಪಥಸಂಚಲನವನ್ನು ಅತ್ಯಂತ ಶಿಸ್ತುಬದ್ಧವಾಗಿ ಪ್ರದರ್ಶಿಸಿದ್ದೀರಿ ಎಂದು ಪ್ರಶಿಕ್ಷಣಾರ್ಥಿಗಳ ನಡೆಗೆ ಹರ್ಷ ವ್ಯಕ್ತಪಡಿಸಿದರು.    ಪೊಲೀಸ್  ಕಾನ್ಸಟೇಬಲ್ ಗೆ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಇದ್ದರೆ ಸಾಕು. ಆದರೆ  ಇಲ್ಲಿ ಎಂಎ , ಎಂಕಾಂ, ಎಂಎಸ್ಸಿ, ಎಂಎ ಬಿಇಡಿ, ಎಂಎಸ್ ಸಿ ಬಿಇಡಿ , ಬಿಎ, ಬಿಕಾಂ, ಬಿ ಇ, ಎಲ್ ಎಲ್ ಬಿ  ಓದಿದವರು ಇದ್ದಾರೆ.  ಒಂದು ಕಾಲದಲ್ಲಿ ಹೆಬ್ಬೆಟ್ಟು ಒತ್ತುತ್ತಿದ್ದವರಿಗಿಂತ ಸಹಿ ಹಾಕುವವರಿಗೆ ಪೊಲೀಸ್ ಹುದ್ದೆ ನೀಡುತ್ತಿದ್ದರು. ಸ್ವಾತಂತ್ರ್ಯ ಆರಂಭ ದಿನದಲ್ಲಿ ಬ್ರಿಟಿಷ್ ಕಾಲದಲ್ಲಿ ಈ ಪದ್ಧತಿ ಇತ್ತು ಎಂದು ವಿವರಿಸಿದರು.

ಪೊಲೀಸ್ ಇಲಾಖೆಯ ಶಿಸ್ತು ಸಂಯಮ, ಜನರ ಮನಸ್ಸಿನಲ್ಲಿ ಪೊಲೀಸ್ ಎನ್ನುವ ಭಯ ಇರಬಾರದು. ಸಾಮಾನ್ಯ ಜನರಿಗೆ ಪೊಲೀಸ್ ಎಂದರೆ ನಮ್ಮ ರಕ್ಷಕರು ಸ್ನೇಹಿತರು ಎನ್ನುವ ಭಾವನೆ ಇರಬೇಕು.   ಅಪರಾಧಿಗಳಿಗೆ, ದರೋಡೆಕೋರರಿಗೆ, ಕಳ್ಳರಿಗೆ ಇವರಿಗೆ ಭಯ ಇರಬೇಕೇ ಹೊರತು ಸಾಮಾನ್ಯರಿಗಲ್ಲ.  ಠಾಣೆಗೆ ಬಂದ ಸಾಮಾನ್ಯ ಜನರನ್ನು ಗೌರವಿಸಬೇಕು. ಸಾಮಾನ್ಯ ನಾಗರಿಕ ಸ್ನೇಹಿಯಾಗಿ ನಡೆದುಕೊಳ್ಳಬೇಕು. ಸಾಮಾನ್ಯರಿಂದ ಇಂತಹ ಅಪೇಕ್ಷೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ.30ರಷ್ಟು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಾಗಿವೆ. ಅನೇಕ ಸಂದರ್ಭಗಳಲ್ಲಿ ಮಹಿಳೆ ದೂರು ನೀಡಲು ಬಂದಾಗ ತನ್ನೆಲ್ಲ ಹೇಳಿಕೆ ನೀಡಲು ಗಂಡಸರು ಬಳಿ ಸಮಸ್ಯೆ ಹೇಳಲು ಮುಜುಗರ. ಇಂತಹ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿ ಇರಬೇಕು. ಎಲ್ಲ ಪೊಲೀಸ್ ಠಾಣೆಯಲ್ಲೂ ಕನಿಷ್ಠ ಮೂರು ಮಂದಿ ಮಹಿಳಾ ಕಾನ್ಸಟೇಬಲ್ ಇರಬೇಕು. ಹಾಗಾಗಿ ನೇಮಕವಾಗುತ್ತಿದೆ. 36 ಮಹಿಳಾ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಿದ್ದೇವೆ. ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ಇದೆ. ಮಹಿಳಾ ಪೊಲೀಸ್ ಠಾಣೆ ಎಂದಾಕ್ಷಣ ಕೇವಲ ಮಹಿಳೆಯರೇ ಇರುತ್ತಾರೆ ಅಂತ ಅಲ್ಲ. ಅಲ್ಲಿ ಪುರುಷ ಸಿಬ್ಬಂದಿಗಳ ಅವಶ್ಯಕತೆಯೂ ಇರಲಿದೆ. ಯಾಕೆಂದರೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರು ಪುರುಷರು, ಅವರನ್ನು ಹಿಡಿದು ತರಬೇಕಾಗಲಿದೆ. ಅವರನ್ನು ಕಸ್ಟಡಿಯಲ್ಲಿ ತೆಗೆದುಕೊಳ್ಳಬೇಕಾಗಲಿದೆ. ಇದನ್ನು ಮಹಿಳಾ ಕಾನ್ಸಟೇಬಲ್ ನಿರ್ವಹಿಸಲು ಸಾದ್ಯವಿಲ್ಲ, ಹೀಗಾಗಿ ಪುರುಷ ಸಿಬ್ಬಂದಿ ಇರುತ್ತಾರೆ. ಮಹಿಳೆಯರ ಸಬಲೀಕರಣಕ್ಕೋಸ್ಕರ ಅನೇಕ ಕೆಲಸ ಮಾಡುತ್ತಿದ್ದೇವೆ. ತರಬೇತಿ ನೀಡುತ್ತಿದ್ದೇವೆ.  ಕಾಲೇಜು ವಿದ್ಯಾರ್ಥಿನಿಯರಿಗೂ ಆತ್ಮಸ್ಥೈರ್ಯ ತುಂಬುವ ಕೆಲಸ ವಾಗುತ್ತಿದೆ. ಹೆಣ್ಣು ತನ್ನ ಆತ್ಮರಕ್ಷಣೆಗಾಗಿ  ಸ್ವರಕ್ಷಣಾ ಕೌಶಲ್ಯ ತರಬೇತಿ ಪಡೆಯಲೆಂದು ರಾಜ್ಯ ಮೀಸಲು ಪೊಲೀಸ್ ಸಹಕಾರದೊಂದಿಗೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದೇವೆ. ಹೀಗೆ 737ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿಯನ್ನು ಈಗಾಗಲೇ ನೀಡುತ್ತಿದ್ದೇವೆ.  ಯಾರೋ ಕಿರಾತಕ ಮನಸ್ಸಿನ ವ್ಯಕ್ತಿಗಳಿರುತ್ತಾರೆ. ದೌರ್ಜನ್ಯ ನಡೆಯುತ್ತಿದೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ.  ಇಂತವರು ಇರುವವರೆಗೆ ಹೆಣ್ಣು ಮಕ್ಕಳನ್ನು ಕಾಪಾಡುವಂತಹ ಹೊಣೆಗಾರಿಕೆ ಪೊಲೀಸ್ ಮೇಲೆ ಇದೆ.  ಮಹಿಳಾ ಹೆಲ್ಪ್ ಡೆಸ್ಕ್ ಗಳನ್ನು ಹಂತಹಂತವಾಗಿ ವಿಸ್ತರಿಸುತ್ತಿದ್ದೇವೆ. ಮಹಿಳೆಯರ ಆತ್ಮರಕ್ಷಣೆ ಹೆಚ್ಚಿಸಬೇಕು ಎಂದರು.

8 ತಿಂಗಳ ತರಬೇತಿ ಪಡೆದು ಆಯ್ಕೆಯಾಗಿದ್ದೀರಿ, ಜನರಲ್ಲಿ ಆತ್ಮವಿಶ್ವಾಸ ತುಂಬಲು ಹೃದಯವಂತಿಕೆ ಬೇಕು. ಕಠಿಣ ನಿರ್ಧಾರಗಳಲ್ಲ, ಅಸಹಾಯಕರನ್ನು ರಕ್ಷಣೆ ಮಾಡುವಂತಹ ಒಂದು ಹೃದಯವಂತಿಕೆ ಬೇಕು. ಬೂಟು ಲಾಠಿ ಬಂದ ತಕ್ಷಣ ಗತ್ತು ಗಾಂಭೀರ್ಯ ಬೆಳೆಸಿಕೊಳ್ಳದೆ ನಾಗರಿಕರಿಗೆ ನಿಮ್ಮ ಜೊತೆ ನಾವಿದ್ಧೇವೆಂಬ ಅಭಯ ಬೇಕು. ಪೊಲೀಸ್ ರಿಂದಲೂ ಅಪರಾಧ ಕೃತ್ಯಗಳು ನಡೆಯುತ್ತಿದೆ. ಪೊಲೀಸ್ ಮೇಲೆಯೂ ದೂರು ನೀಡಬೇಕು. ಅಪರಾಧ ಮಾಡುವ ಪೊಲೀಸ್ ಗೂ ಶಿಕ್ಷೆಯಾಗಬೇಕು. ಅವರಿಗೆ ಉಗ್ರವಾದ ಶಿಕ್ಷೆ ನೀಡಬೇಕಾಗಲಿದೆ ಎಂದು ತಿಳಿಸಿದರು.

ಪೊಲೀಸ್ ಕಛೇರಿಗಳು ಚೆನ್ನಾಗಿರಬೇಕು. ಅವರ ಮನೆಗಳು ಚೆನ್ನಾಗಿರಬೇಕು. ಅದಕ್ಕಾಗಿ 10ಸಾವಿರ ಪೊಲೀಸ್ ಗೃಹ ನಿರ್ಮಾಣ ಮಾಡಲಾಗುವುದು. ಈಗಾಗಲೇ 2ಕೊಠಡಿಯ ಮನೆಗಳನ್ನು ನೀಡಿದ್ದೇವೆ. ಎಪ್ ಎಸ್ ಎಲ್ ಲ್ಯಾಬ್ ಗಳನ್ನು ನಿರ್ಮಿಸಲಾಗುವುದು. ಪೊಲೀಸ್ ಇಲಾಖೆಯನ್ನು ಸಬಲಗೊಳಿಸಲಾಗುವುದು ಎಂದರಲ್ಲದೆ, ಜನರ ಮಾನ ಪ್ರಾಣ ಆಸ್ತಿಯ ರಕ್ಷಣೆ ಪೊಲೀಸ್ ಹೊಣೆ ಎಂದು ತಿಳಿಸಿದರು.

ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಲತಾ ಎಂ ಮಹಿಳಾ ಪಿಸಿ ಚಾಮರಾಜನಗರ ಜಿಲ್ಲೆ,  ಒಳಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಲತಾ ಎಂ ಮಹಿಳಾ ಪಿಸಿ ಚಾಮರಾಜನಗರ ಜಿಲ್ಲೆ, ದ್ವಿತೀಯ ಸ್ಥಾನವನ್ನು ಕಾವೇರಿ ಬಿ. ಮಹಿಳಾ ಪಿಸಿ ಚಾಮರಾಜನಗರ ಜಿಲ್ಲೆ, ತೃತೀಯ ಸ್ಥಾನವನ್ನು ಅಶ್ವಿನಿ ಕೆ ಮಹಿಳಾ ಪಿಸಿ ಮೈಸೂರು ಜಿಲ್ಲೆ ಇವರುಗಳು ಪಡೆದರು.

ಹೊರಾಂಗಣದಲ್ಲಿ   ಪ್ರಥಮ ಸ್ಥಾನವನ್ನು ರೇಖಾ ಡಿ ಮಹಿಳಾ ಪಿಸಿ ಕೊಡಗು ಜಿಲ್ಲೆ, ದ್ವಿತೀಯ ಸ್ಥಾನವನ್ನು ಶಶಿಕಲಾ ಮಹಿಳಾ ಪಿಸಿ ತುಮಕೂರು ಜಿಲ್ಲೆ, ತೃತೀಯ ಸ್ಥಾನವನ್ನು ಮೇಘನ ಎಂ.ಪಿ ಮಹಿಳಾ ಪಿಸಿ ಕೊಡಗು ಜಿಲ್ಲೆ ಪಡೆದರು.

ಫೈರಿಂಗ್ ನಲ್ಲಿ ಸುಜಾತಾ ಎಸ್.ಬಿರಾದಾರ ಮಹಿಳಾ ಪಿಸಿ ರಾಯಚೂರು, ಚಂದ್ರಕಲಾ ಬಿರಾದಾರ ಮಹಿಳಾ ಪಿಸಿ ಮಂಗಳೂರು ನಗರ, ತೃತೀಯ ಸ್ಥಾನವನ್ನು ಚಿತ್ರ ಡಿ.ಜಿ.ಮಹಿಳಾ ಪಿಸಿ ಮಂಗಳೂರು ನಗರ ಇವರುಗಳು ಪಡೆದರು.

ತರಬೇತಿಯಲ್ಲಿ 242 ಪ್ರಶಿಕ್ಷಣಾರ್ಥಿಗಳು ಬುನಾದಿ ತರಬೇತಿ ಪಡೆದರು.

ಈ ಸಂದರ್ಭ ತರಬೇತಿ ಬೆಂಗಳೂರು ಇದರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ  ಪಿ.ಹರಿಶೇಖರನ್ , ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣೀದೇವಿ ಅವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: