ಮೈಸೂರು

ಅಸಂಘಟಿತ ಕಾರ್ಮಿಕರ ಬೃಹತ್ ಸಮಾವೇಶ : ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಣೆ

ಮೈಸೂರು,ಸೆ.28:- ಪಂಡಿತ್ ದೀನದಯಾಳ್ ಉಪಾದ್ಯಾಯರ ಜನ್ಮದಿನದ ಪ್ರಯುಕ್ತ ಕೆ.ಎಂ. ನಿಶಾಂತ್ ಅವರ ನೇತೃತ್ವದ ಜನ ಸೇವಾ ಕೇಂದ್ರ, ಬಿಜೆಪಿ ಯುವಮೋರ್ಚಾ ಮತ್ತು ಫಲಾನುಭವಿಗಳ ಪ್ರಕೋಷ್ಠದ ಸಂಯುಕ್ತಾಶ್ರಯದಲ್ಲಿ ಅಸಂಘಟಿತ ಕಾರ್ಮಿಕರ ಬೃಹತ್ ಸಮಾವೇಶ  ನಡೆಯಿತು.

ಈ ಕಾರ್ಯಕ್ರಮಕ್ಕೆ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್, ಶ್ರೀವತ್ಸ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ರವರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಇ-ಶ್ರಮ್ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ಯನ್ನು ಫಲಾನುಭವಿಗಳಿಗೆ ವಿತರಿಸುವಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದ ರೂವಾರಿ ಕೆ.ಎಂ. ನಿಶಾಂತ್ ಮಾತನಾಡಿ  ದೀನದಯಾಳ್ ಉಪಾದ್ಯಾಯರ ಅಂತ್ಯೋದಯ ಕಲ್ಪನೆಯೊಂದಿಗೆ ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ದಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಜನ ಸಾಮಾನ್ಯರಿಗೆ ತಲುಪಿಸುವಂತಹ ಜವಾಬ್ದಾರಿ ನಮ್ಮಂತಹ ಕಾರ್ಯಕರ್ತರ ಮೇಲಿದೆ. ಹಾಗಾಗಿ ಸಾರ್ವಜನಿಕರಲ್ಲಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ.  ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ಅಂಕಿ-ಅಂಶ ಕಾರ್ಯಕ್ರಮದ ಅಡಿಯಲ್ಲಿ ಇ-ಶ್ರಮ್ ಗುರುತಿನ ಚೀಟಿ ಯೋಜನೆಯನ್ನು ಕೇಂದ್ರ ಸರ್ಕಾರ ನೂತನವಾಗಿ ಪ್ರಾರಂಭಿಸಿದೆ. ಇಂದಿನ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಸುಮಾರು 1000 ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರು ಹೊಸಗಾಗಿ ನೋಂದಣಿಯಾಗಿದ್ದಾರೆ.  ಕಳೆದ 10 ದಿನಗಳಿಂದ ನಮ್ಮ ಜನ ಸೇವಾ ಕೇಂದ್ರದಲ್ಲಿ ಪೂರ್ವ ನೋಂದಣಿಯಾಗಿದ್ದ ಸಾವಿರಾರು ಫಲಾನುಭವಿಗಳು ಇಂದು ಗುರುತಿನ ಚೀಟಿಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ಶ್ರೀವತ್ಸ  ಮಾತನಾಡಿ  ಸ್ವತಂತ್ರ ಬಂದ ನಂತರ ಅಂಘಟಿತ ಕಾರ್ಮಿಕರನ್ನು ಗುರುತಿಸುವ ಕೆಲಸ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿದೆ. ದೇಶದ 38 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಸ್ಮಾರ್ಟ್ ಕಾರ್ಡ್ ಗೆ ನೋಂದಾಯಿಸಿ ಅದರ ಅಂಕಿ ಅಂಶಕ್ಕೆ ಅನುಗುಣವಾಗಿ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಇ-ಶ್ರಮ್ ಗುರುತಿನ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಅವರವರ ವೃತ್ತಿಗೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಜಾರಿಗೊಳಿಸುವ ಎಲ್ಲ ಯೊಜನೆಗಳು ನೇರವಾಗಿ ತಲುಪಲಿದೆ. ಇಷ್ಟು ದೊಡ್ಡಸಂಖ್ಯೆಯಲ್ಲಿ ಅಸಂಘಟಿತರನ್ನು ಸಂಘಟಿಸುವ ಕೆಲಸ ಕೆ.ಎಂ. ನಿಶಾಂತ್   ಮಾಡಿರುವುದು ಶ್ಲಾಘನೀಯ ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ 130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ನಮ್ಮ ಅಸಂಘಟಿತ ವಲಯದ ಕಾರ್ಮಿಕರು. ಹಾಗಾಗಿ ಅವರನ್ನು ಅಸಂಘಟಿತರು ಎನ್ನುವ ಬದಲು ಸ್ವಯಂ ಉದ್ಯೋಗಿ ವರ್ಗ ಎಂದು ಗುರುತಿಸಬೇಕಾಗಿದೆ. ಶ್ರಮಿಕರ ಅಭ್ಯುದಯವೇ ನಮ್ಮ ಸರ್ಕಾರದ ಮೂಲ ಆಶಯವಾಗಿದೆ. ಹಾಗಾಗಿ ಕಾರ್ಮಿಕ ವರ್ಗಗಳ ಜನರ ಅರ್ಥಿಕತೆಯನ್ನು ಸುಸ್ಥಿರಗೊಳಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಹೊಂದುತ್ತದೆ. ಏಕಾತ್ಮ ಮಾನವತಾವಾದಿ ದೀನದಯಾಳ್ ಉಪಾದ್ಯಾಯರ ಅಂತ್ಯೋದಯದ ಕಲ್ಪನೆಯನ್ನು ನರೇಂದ್ರ ಮೋದಿಯವರು ಸಾಕಾರಗೊಳಿಸುತ್ತಿದ್ದಾರೆ. ಇ-ಶ್ರಮ್  ಯೋಜನೆಯಿಂದ ಎಲ್ಲ ಅಸಂಘಟಿತ ಕಾರ್ಮಿಕರು ತಮ್ಮ ತಮ್ಮ ವೃತ್ತಿಗಳನ್ನು ಉಲ್ಲೇಖಿಸಿ ಗುರುತಿನ ಚೀಟಿ ಪಡೆಯಬಹುದು. ಇದರಿಂದ ಸರ್ಕಾರಕ್ಕೆ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸಲು, ಕಾರ್ಮಿಕರಿಗೆ ಅವರವರದೇ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ದಿ ಪಡಿಸಲು ಮತ್ತು ಬೃಹತ್ ಗಾತ್ರದಲ್ಲಿ ಉದ್ಯೋಗ ಸೃಷ್ಟಿಸಲು, ಆರೋಗ್ಯ ಮತ್ತು ಶಿಕ್ಷಣ ಭದ್ರತೆಯನ್ನು ಒದಗಿಸಲು ಸಹಕಾರಿಯಾಗಲಿದೆ  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಪ್ರಭಾರಿ ಹೀರೇಂದ್ರ ಶಾ, ಯುವಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಫಲಾನಭವಿಗಳ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಸನ್ನನಾಯಕ್, ನಗರ ಸಂಚಾಲಕರಾದ ಕೆ.ಪಿ. ಮಧುಸೂಧನ್, ರಾಜ್ಯ ಯುಮೋರ್ಚಾ ಉಪಾಧ್ಯಕ್ಷ, ಜಯಶಂಕರ್, ವಸಂತ್ ಗೌಡ, ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ವಾಣೀಶ್, ಗಿರಿಧರ್, ಬೋ. ಉಮೇಶ್, ಗದಾದರ್ ರಜತ್, ಮಹೇಶ್ ಹಾಗೂ ಸಾವಿರಾರು ಫಲಾನುಭವಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: