ಕರ್ನಾಟಕಪ್ರಮುಖ ಸುದ್ದಿ

ಬಿಜೆಪಿ, ಆರ್‌ಎಸ್‌ಎಸ್‌ನಿಂದಲೇ ಸ್ವಾತಂತ್ರ್ಯ ಉಳಿದಿದೆ: ಸಿದ್ದರಾಮಯ್ಯ `ಸುಳ್ಳುರಾಮಯ್ಯ’ ಆಗಿದ್ದಾರೆ; ಸಿ.ಟಿ. ರವಿ

ಬೆಂಗಳೂರು,ಸೆ.28-ದೇಶದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಇರುವುದರಿಂದಲೇ ಸ್ವಾತಂತ್ರ್ಯ ಉಳಿದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಇರುವುದರಿಂದಲೇ ಸಿದ್ದರಾಮಯ್ಯ ಅವರ ಮೊಮ್ಮಕ್ಕಳು ಸುರಕ್ಷಿತವಾಗಿದ್ದಾರೆ. ಆರೆಸ್ಸೆಸ್‌ ಸ್ಥಾಪಕರಾದ ಡಾ. ಕೇಶವ ಬಲಿರಾಮ್‌ ಹೆಡಗೇವಾರ್‌ ಅವರು, ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಾಂಗ್ರೆಸ್ಸಿಗರು ಟೀಕಿಸುವ ಮೊದಲು ಅವರದೇ ಚರಿತ್ರೆಯನ್ನು ಅಭ್ಯಸಿಸಲಿ. ನಿಮ್ಮ ಮಕ್ಕಳು, ಮೊಮ್ಮಕ್ಕಳು ಸುರಕ್ಷಿತವಾಗಿರಲು ಆರೆಸ್ಸೆಸ್‌ ಮಜಬೂತಾಗಿ ಇರಬೇಕೆಂದು ಸಿದ್ದರಾಮಯ್ಯ ಅವರು ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಜಂಗಲ್‌ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೊದಲು ಹೆಡಗೇವಾರ್‌ ಅವರು ತಮ್ಮ ಸರಸಂಘಚಾಲಕ ಸ್ಥಾನದಿಂದ ಬಿಡುಗಡೆ ಹೊಂದಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು. ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಅವರು ಸುಳ್ಳುರಾಮಯ್ಯ ಆಗಿದ್ದಾರೆ ಎಂದು ಟೀಕಿಸಿದರು.

ವಯಸ್ಸಾದ ಮೇಲೆ ಕಣ್ಣಿನ ಪೊರೆ ಜಾಸ್ತಿ ಆಗುತ್ತಂತೆ. ಅವರಿಗೆ ಯಾವ್ಯಾವ ಪೊರೆ ಬೆಳೆದಿದೆಯೋ ಗೊತ್ತಿಲ್ಲ. ಅದೇ ಕಾರಣಕ್ಕೆ ತಾಲಿಬಾನ್‌ ಮತ್ತು ಆರೆಸ್ಸೆಸ್‌ ಒಂದೇ ತರ ಕಾಣುತ್ತಿದೆ ಎಂದು ಆಕ್ಷೇಪಿಸಿದರು. ಪೊರೆ ಸರಿಸಿದರೆ ತಾಲಿಬಾನ್‌ ಏನೆಂದು ಗೊತ್ತಾಗುತ್ತದೆ. ತಾಲಿಬಾನ್‌ ಇದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ ಎಂದು ಕೇಳಿದರು. ಅಕಸ್ಮಾತ್‌ ತಾಲಿಬಾನ್‌ ಸ್ಥಿತಿ ಇಲ್ಲಿ ಇದ್ದರೆ ಪಂಚೆ ಮಾತ್ರ ನೇತಾಡುತ್ತಿರಲಿಲ್ಲ. ಅವರೂ ನೇತಾಡುವ ಸ್ಥಿತಿ ಇರುತ್ತಿತ್ತು. ತಾಲಿಬಾನ್‌ ಏನು, ಬಿಜೆಪಿ ಏನು, ಆರೆಸ್ಸೆಸ್‌ ಏನು ಎಂದು ಅರ್ಥ ಮಾಡಿಕೊಳ್ಳದಷ್ಟು ಏನಾದರೂ ವ್ಯತ್ಯಾಸ ಆಗಿದೆಯೇ ಎಂದು ಪ್ರಶ್ನಿಸಿದರು.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದಾಗ ಅತಿ ಹೆಚ್ಚು ಸಂಖ್ಯೆಯಲ್ಲಿ ಜೈಲಿಗೆ ಹೋಗಿ ಸಂಕಷ್ಟಕ್ಕೆ ಒಳಗಾದವರು ಬಿಜೆಪಿ, ಆರ್‌ಎಸ್‌ ಎಸ್‌ನವರು. ಆದರೆ, ಕಾಂಗ್ರೆಸ್‌ನವರು ಇಂದಿರಾರನ್ನು ಹೊಗಳಿಕೊಂಡೇ ಕಾಲ ಕಳೆದರು. ನಮ್ಮಿಂದ ಸ್ವಾತಂತ್ರ್ಯ ಉಳಿಯಿತು. ಆಗ ಸಿದ್ದರಾಮಯ್ಯ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

Leave a Reply

comments

Related Articles

error: