ಕರ್ನಾಟಕಪ್ರಮುಖ ಸುದ್ದಿ

ಕ್ಷಯ ರೋಗ ಪರೀಕ್ಷೆಗೆ ಅಗತ್ಯವಿರುವ ಕಿಟ್ ಖರೀದಿಗೆ ಎಬಿಎಆರ್‍ಕೆ, ಎಆರ್‍ಎಸ್ ಫಂಡ್ ಬಳಸಿ: ಡಿಸಿ ಸೂಚನೆ

ರಾಜ್ಯ(ದಾವಣಗೆರೆ )ಸೆ.29 :- ಕ್ಷಯ ರೋಗಕ್ಕೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಪ್ರಾರಂಭದ ಹಂತ ಪ್ರಮುಖವಾಗಿದ್ದು, ಕ್ಷಯ ರೋಗ ಪರೀಕ್ಷೆಗೆ ಅಗತ್ಯವಿರುವ ಕಿಟ್‍ಗಳನ್ನು ಎಬಿಎಆರ್‍ಕೆ ಮತ್ತು ಎಆರ್‍ಎಸ್ ಫಂಡ್‍ನಲ್ಲಿ ಖರೀದಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಡಿಹೆಚ್‍ಒ ಡಾ. ನಾಗರಾಜ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ನಡೆದ ಜಿಲ್ಲಾ ಕ್ಷಯರೋಗಿಗಳ ಅಗತ್ಯ ಕಾಳಜಿ, ಉತ್ತಮ ಆರೋಗ್ಯ ಸೇವೆಗಳ ಅಭಿವೃದ್ಧಿ, ಕ್ಷಯ ರೋಗಿಗಳ ಆರೈಕೆಯಲ್ಲಿ ಎಲ್ಲಾ ಪಾಲುದಾರರ ಪಾಲ್ಗೊಳ್ಳುವಿಕೆ ಹಾಗೂ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಟಿಬಿ ಕಿಟ್ ಪರೀಕ್ಷಿಸುವ ಕಿಟ್ ಪೂರೈಕೆಯಲ್ಲಿ ಸಮಸ್ಯೆ ಇರುವುದರಿಂದ ತಕ್ಷಣ ಅಗತ್ಯವಿರುವ ಕಿಟ್‍ಗಳನ್ನು ಎಬಿಎಆರ್‍ಕೆ ಮತ್ತು ಎಆರ್‍ಎಸ್ ಫಂಡ್‍ನಲ್ಲಿ ತರಿಸುವಂತೆ ಡಿಹೆಚ್‍ಒ ಡಾ. ನಾಗರಾಜ ಅವರಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕ್ಷಯ ರೋಗ ಶೀಘ್ರ ಪತ್ತೆ ಹಚ್ಚಿ, ರೋಗಿಗಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ, ರೋಗ ಬೇಗ ವಾಸಿಯಾಗುವುದರ ಜೊತೆಗೆ, ಇತರರಿಗೂ ರೋಗ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕ್ಷಯ ರೋಗವನ್ನು ತ್ವರಿತವಾಗಿ ಪತ್ತೆಹಚ್ಚುವಂತಹ ಕಾರ್ಯ ಆರೋಗ್ಯ ಇಲಾಖೆ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಮಾತನಾಡಿ, ಕ್ಷಯ ರೋಗವು ಮೈಕೋಬ್ಯಾಕ್ಟೀರಿಯಂ ಎಂಬ ವೈರಸ್ ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಶೇ.85 ರಷ್ಟು ಕ್ಷಯ ರೋಗಗಳು ಶ್ವಾಸಕೋಶಕ್ಕೆ ಸಂಬಂಧಿಸಿವೆ, ಉಳಿದಂತೆ ದುಗ್ಧ ರಸಗ್ರಂಥಿಗಳು, ಶ್ವಾಸಕೊಶದ ಸುತ್ತಲಿನ ಪೊರೆ, ಮೂತ್ರಪಿಂಡ, ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿ ಆವರಿಸಿಕೊಳ್ಳುತ್ತದೆ. ಸೋಂಕು ರಕ್ತನಾಳಗಳನ್ನು ಪ್ರವೇಶಿಸಿದಾಗ ದೇಹವನ್ನು ಆವರಿಸಿಕೊಳ್ಳುತ್ತದೆ.
ಪ್ರಪಂಚದಾದ್ಯಂತ ಪ್ರಮುಖ 10 ರೋಗಗಳಲ್ಲಿ ಕ್ಷಯ ಸೋಂಕು ಒಂದಾಗಿದ್ದು, ಭಾರತವು ವಿಶ್ವದ ಶೇ.25 ರಷ್ಟು ಸೋಂಕಿತರನ್ನು ಹೊಂದಿದೆ ಹಾಗು ಶೇ.80 ಸಾವುಗಳು ಸಂಭವಿಸುತ್ತಿವೆ. ಪ್ರಕಾರ ಜಿಲ್ಲೆಯಲ್ಲಿ ಈ ವರ್ಷ ಒಟ್ಟು 1378 ಕ್ಷಯ ರೋಗಿಗಳು ಕಂಡುಬಂದಿದ್ದು, ಕಳೆದ ವರ್ಷಕ್ಕಿಂತ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಈ ವರ್ಷ 15 ವರ್ಷದೊಳಗಿನ 56 ಮಕ್ಕಳು, 15-30 ವರ್ಷದವರು 434, 31-45 ವರ್ಷದವರೆಗಿನ 323, 46-60 ವರ್ಷದವರು 345 ಹಾಗೂ 60 ವರ್ಷ ಮೆಲ್ಪಟ್ಟವರು 220 ಜನರಲ್ಲಿ ಸೋಂಕು ಕಂಡುಬಂದಿದೆ. ಸೋಂಕಿತರನ್ನು ಪತ್ತೆ ಮಾಡಲು ಯುಡಿಎಸ್‍ಟಿ ಕಿಟ್‍ಗಳನ್ನು ಬಳಸುತ್ತಿದ್ದು, ಇದೀಗ ದಾವಣಗೆರೆ ಗ್ರಾಮೀಣ ಪ್ರದೇಶ, ಹರಿಹರ ಮತ್ತು ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಕ್ಷಯ ರೋಗ ಪತ್ತೆಹಚ್ಚುವ ಕಿಟ್‍ಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಶೇ.86.5 ಕ್ಷಯ ಸೋಂಕಿತರಿಗೆ ಹೆಚ್‍ಐವಿ ಪರೀಕ್ಷೆ ಮಾಡಲಾಗಿದ್ದು, ಶೇ.6 ರಷ್ಟು ಸೋಂಕಿತರು ಹೆಚ್‍ಐವಿ ಪಾಸಿಟಿವ್ ಹೊಂದಿದ್ದಾರೆ. ಹಾಗೂ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ನಿಕ್ಷಯ್ ಪೋಷಣ್ ಯೋಜನೆಯಡಿ ಒಟ್ಟು 960 ಸೋಂಕಿತರಿಗೆ ಪೌಷ್ಠಿಕ ಆಹಾರಕ್ಕಾಗಿ ಪ್ರತಿ ತಿಂಗಳು ರೂ.500 ನೀಡಲಾಗುತ್ತಿದೆ ಎಂದರು.
ಕ್ಷಯ ರೋಗ ಸೋಂಕಿತರನ್ನು ಪತ್ತೆ ಹಚ್ಚುವ ಎಸಿಎಫ್ ಯೋಜನೆಯನ್ನು ಜಿಲ್ಲೆಗೆ ಪರಿಚಯಿಸಲಾಗಿದ್ದು, ದಾವಣಗೆರೆ ಗ್ರಾಮೀಣ, ನಗರ ಪ್ರದೇಶ, ಹರಿಹರ, ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯರಂಭಿಸಲಾಗುವುದು. ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ, ಸೋಂಕಿನ ಗುಣ ಲಕ್ಷಣಗಳ ಬಗ್ಗೆ ಮಾಹಿತಿ ನೀಡುವರು ಹಾಗೂ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸ್ಥಳದಲ್ಲೇ ಕಫದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲು ಲ್ಯಾಬ್‍ಗೆ ಕಳುಹಿಸಲಾಗುವುದು ಎಂದರು. ಈಗಾಗಲೇ ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದ್ದು, ನವೆಂಬರ್ 01 ರಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು. ಈ ಯೋಜನೆಯಡಿ ಜಿಲ್ಲೆಯಲ್ಲಿ 7.55 ಲಕ್ಷ ಜನರನ್ನು ತಲುಪುವ ಗುರಿ ಹೊಂದಲಾಗಿದೆ ಎಂದರು.
ಕ್ಷಯ ರೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಎಕ್ಸ್-ರೇ ಸೇರಿದಂತೆ ಚಿಕಿತ್ಸೆ ಉಚಿತವಾಗಿದೆ. ನಗರ ಪ್ರದೇಶದಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದು ನಿರ್ಲಕ್ಷಿಸದೇ ಪರೀಕ್ಷಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿಹೆಚ್‍ಒ ಡಾ.ನಾಗರಾಜ್, ಡಬ್ಲ್ಯೂಹೆಚ್‍ಒ ಸಲಹೆಗಾರ್ತಿ ಡಾ.ಹಂಸವೇಣಿ, ಐಎಂಎ ಅಧ್ಯಕ್ಷ ಡಾ.ಸೋಮಶೇಖರ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಅನುಷ್ಠಾನಾಧಿಕಾರಿಗಳಾದ ಡಾ.ಮುರುಳೀಧರ, ಡಾ.ರೇಣುಕಾರಾಧ್ಯ, ಡಾ.ಕೆ.ನಟರಾಜ್ ಎನ್, ಡಾ.ಬಾಲು.ಪಿ.ಎಸ್, ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ಷಯ ರೋಗ ನಿರ್ಮೂಲನೆಗೆ ಸಂಬಂಧಿಸಿದಂತೆ ಇಲಾಖೆ ರೂಪಿಸಿರುವ ಜನಜಾಗೃತಿ ಭಿತ್ತಿ ಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: