ಕರ್ನಾಟಕಪ್ರಮುಖ ಸುದ್ದಿ

ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಭೂಮಿ; ಜಂಟಿ ಸರ್ವೇಗೆ ನಿರ್ಧಾರ

ರಾಜ್ಯ(ಮಡಿಕೇರಿ) ಸೆ.29:-ಜಿಲ್ಲೆಯಲ್ಲಿನ ‘ಸಿ’ ಮತ್ತು ‘ಡಿ’ ಹಾಗೂ ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿನ ಭೂಮಿಯನ್ನು ಕಂದಾಯ ಮತ್ತು ಅರಣ್ಯ ಇಲಾಖೆ ವತಿಯಿಂದ ಜಂಟಿ ಸರ್ವೇ ಮಾಡಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತಕತ್ ಸಿಂಗ್ ರಣಾವತ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಅರಣ್ಯ ಭವನದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕಸ ವಿಲೇವಾರಿ ಘಟಕ ನಿರ್ಮಾಣ ಸೇರಿದಂತೆ ವಿವಿಧ ಸರ್ಕಾರಿ ಹಾಗೂ ಇತರೆ ಸರ್ಕಾರಿ ಇಲಾಖೆಗಳ ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿ ಕಾಯ್ದಿರಿಸಬೇಕಿದೆ ಎಂದರು.
ಮಾಲ್ದಾರೆ ವ್ಯಾಪ್ತಿಯಲ್ಲಿ 1978 ಕ್ಕೂ ಮೊದಲು ವಾಸ ಮಾಡುತ್ತಿದ್ದ ಇತರೆ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತಕತ್ ಸಿಂಗ್ ರಣಾವತ್ ಅವರು ‘ಸಿ’ ಮತ್ತು ‘ಡಿ’ ಮತ್ತು ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಜಾಗ ಒದಗಿಸುವ ಸಂಬಂಧ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಬೇಕಿದೆ. ಸದ್ಯ ‘ಸಿ’ ಮತ್ತು ‘ಡಿ’ ಮತ್ತು ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಜಂಟಿ ಸರ್ವೇ ಮಾಡುವುದು ಅಗತ್ಯವಾಗಿದೆ ಎಂದು ಸಲಹೆ ಮಾಡಿದರು.
ಜಿಲ್ಲೆಯ 16 ಹೋಬಳಿ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ವತಿಯಿಂದ ಜಂಟಿ ಸರ್ವೇ ಮಾಡಿ ಮಾಹಿತಿ ಪಡೆಯಬೇಕಿದೆ. ಈ ಸಂಬಂಧ ಸರ್ವೇ ತಂಡವನ್ನು ರಚಿಸಿ, ಶೀಘ್ರ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು ಎಂದರು.
ಸರ್ಕಾರದ ನಿಯಮ ಪಾಲಿಸುವುದರ ಜೊತೆಗೆ ಸಾರ್ವಜನಿಕರಿಗೆ ಸ್ಪಂದಿಸುವಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಶ್ರಮಿಸಬೇಕು. ಅಧಿಕಾರಿಗಳು ಸಹಕಾರ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ತಾಲ್ಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ಸಭೆ ನಡೆಸಿ, ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳು ಕೈಜೋಡಿಸುವಂತೆ ಸಲಹೆ ಮಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಾಗರಹೊಳೆ ಅರಣ್ಯ ವಿಭಾಗ ನಿರ್ದೇಶಕರಾದ ಡಿ.ಮಹೇಶ್ ಕುಮಾರ್ ಅವರು ವಿವಿಧ ಸಂದರ್ಭಗಳಲ್ಲಿ ವನ್ಯ ಪ್ರಾಣಿಗಳಿಂದ ಜಾನುವಾರುಗಳು ತುತ್ತಾದ ಸಂದರ್ಭದಲ್ಲಿ ಹಲವು ರೀತಿಯ ಸಮಸ್ಯೆ ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಯಾವುದೇ ಪ್ರದೇಶದಲ್ಲಿ ಆಯಾಯ ಪ್ರಾಂತ್ಯದ 5 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನು ಪತ್ತೆ ಹಚ್ಚಬಹುದಾಗಿದೆ ಎಂದರು.
ಸರ್ಕಾರಿ ಭೂಮಿ ಸಂಬಂಧಿಸಿದಂತೆ ಸರ್ವೇ ನಂಬರ್ ಗುರುತಿಸುವಲ್ಲಿ ಕ್ರಮವಹಿಸಬಹುದಾಗಿದೆ ಎಂದು ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಟಿ.ಪೂವಯ್ಯ, ಶಿವರಾಮ್ ಬಾಬು, ವೈ. ಚಕ್ರಪಾಣಿ, ಎಚ್.ಪೂರ್ಣಿಮ, ಸೀಮಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಿ.ಎಸ್.ದಯಾನಂದ, ರೋಷಿಣಿ, ಉತ್ತಪ್ಪ, ಎಂ.ಎಸ್.ಚಂಗಪ್ಪ, ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ಪೊಲೀಸ್ ಇನ್ಸಪೆಕ್ಟರ್ ಮೇದಪ್ಪ, ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳು ಇತರರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: