
ಕರ್ನಾಟಕಪ್ರಮುಖ ಸುದ್ದಿ
ವಿಶ್ವ ಹೃದಯ ದಿನ: `ಬಿರುಸಿನ ನಡಿಗೆ ಆರೋಗ್ಯದ ಕಡೆಗೆ’ ವಾಕಥಾನ್ ಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರ,ಸೆ.29-`ವಿಶ್ವ ಹೃದಯ ದಿನ’ದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದು ಆಯೋಜಿಸಿದ್ದ ಹೃದಯದಿಂದ ಬಾಂಧವ್ಯ ಬೆಸೆಯೋಣ ಎಂಬ ಘೋಷವಾಕ್ಯದಡಿ `ಬಿರುಸಿನ ನಡಿಗೆ ಆರೋಗ್ಯದ ಕಡೆಗೆ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಈ ವೇಳೆ ಸಿಎಂ ಬೊಮ್ಮಾಯಿ ಅವರು ಹೃದಯದ ಆರೋಗ್ಯ ರಕ್ಷಣೆಗಾಗಿ ಇನ್ನು ಮುಂದೆ ದಿನನಿತ್ಯ ಅರ್ಧ ತಾಸು ಬಿರುಸಿನ ನಡಿಗೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿ ವಿಧಾನಸೌಧದಿಂದ ಕಬ್ಬನ್ ಉದ್ಯಾನ ಮಾರ್ಗವಾಗಿ ಕಂಠೀರವ ಕ್ರೀಡಾಂಗಣದವರೆಗೂ ಬಿರುಸಿನ ನಡಿಗೆಯ ಮೂಲಕವೇ ತೆರಳಿದರು. ಇವರಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮತ್ತು ಸಂಸದ ಪಿ.ಸಿ. ಮೋಹನ್ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೃದಯದ ಆರೋಗ್ಯಕ್ಕೆ ನಡಿಗೆ ತುಂಬಾ ಅವಶ್ಯಕ ಎಂಬುದನ್ನು ವೈದ್ಯರು ಹೇಳುತ್ತಾರೆ. ಅದರಂತೆ ಪ್ರತಿಯೊಬ್ಬರೂ ಸಹ ನಿತ್ಯ ನಡಿಗೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಾನೂ ಯಾವಾಗಲಾದರೂ ಒಮ್ಮೆ ವಾಕಿಂಗ್ ಮಾಡುತ್ತಿದ್ದೆ. ಆದರೆ, ಇಂದಿನಿಂದ ನಿಯಮಿತವಾಗಿ ಮಾಡುತ್ತೇನೆ. ಹೊರಗಡೆ ಬಂದು ವಾಕಿಂಗ್ ಮಾಡುವುದು ಸಾಧ್ಯ ಆಗದಿದ್ದಾಗ ಮನೆಯಲ್ಲಿಯೇ ವಾಕರ್ನಲ್ಲಿ ಕನಿಷ್ಟ ಅರ್ಧತಾಸು ನಡೆಯುವಂತಹ ಪ್ರತಿಜ್ಞೆ ಮಾಡಿದ್ದೇನೆ ಎಂದು ಹೇಳಿದರು.
ಮನುಷ್ಯನಿಗೆ ಹೃದಯ ಬಹುಮುಖ್ಯವಾದ ಅಂಗ. ನಿರಂತರವಾಗಿ ಬಡಿಯತ್ತಿರಬೇಕಾದರೆ ಮನುಷ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಯಾಗಿರಬೇಕಾಗುತ್ತದೆ. ಹೃದಯಕ್ಕೆ ಮಾನಸಿಕ ಆರೋಗ್ಯವೂ ಮುಖ್ಯ. ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಮಾನಸಿಕ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಆರೋಗ್ಯಪೂರ್ಣ ಕರ್ನಾಟಕ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಗಮನಕೊಡಬೇಕು ಎಂದರು.
ಸಾಂಕ್ರಾಮಿಕ ರೋಗಗಳಿಂದ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಶೇ.25ರಷ್ಟು ಸಾವುಗಳು ಹೃದ್ರೋಗದಿಂದಲೇ ಸಂಭವಿಸುತ್ತವೆ ಎಂದು ವೈದ್ಯಕೀಯ ದಾಖಲೆಗಳು ಹೇಳುತ್ತವೆ. ಈ ಕಾರಣದಿಂದ ಹೃದಯದ ಕಡೆಗೆ ಎಲ್ಲರೂ ಹೆಚ್ಚಿನ ಗಮನ ನೀಡಬೇಕು. ಆರೋಗ್ಯಪೂರ್ಣ ಸಮಾಜ ಕಟ್ಟಲು ಎಲ್ಲರೂ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಪ್ರತಿಜ್ಞಾ ವಿಧಿ ಬೋಧಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ನನ್ನ ಹೃದಯದ ಆರೋಗ್ಯಕ್ಕಾಗಿ ನನ್ನ ಸಾಮರ್ಥ್ಯ ಅನುಸಾರ ಶ್ರಮ ಜೀವನ ಅನುಸರಿಸುತ್ತೇನೆ. ಮತ್ತು ನನ್ನ ಕುಟುಂಬದ ಸದಸ್ಯರನ್ನು ಸ್ನೇಹಿತರನ್ನು ಸಹೋದ್ಯೋಗಿಗಳನ್ನು ನನ್ನ ಸಂಪರ್ಕದಲ್ಲಿ ಇರುವ ಐದು ಜನರನ್ನಾದರೂ ನಿತ್ಯ ನಡಿಗೆಗೆ ಪ್ರೇರೇಪಿಸುತ್ತೇನೆ. ವಾರದಲ್ಲಿ ಕನಿಷ್ಠ 150 ನಿಮಿಷ ನಡೆಯಲು ಸನ್ನದ್ಧನಾಗಿದ್ದೇನೆ ಎಂದುರು.
ಹೃದಯ ಆರೋಗ್ಯದ ಕುರಿತು ಸಂಪೂರ್ಣ ಮಾಹಿತಿ ಹೊಂದಿರುವಂತಹ ಎನ್.ಸಿ.ಡಿ. ಆರೋಗ್ಯ ತಪಾಸಣಾ ಪುಸ್ತಕವನ್ನೂ ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಆರೋಗ್ಯದ ಕುರಿತು ಜಾಗೃತಿ ಮೂಡಲು ಹೊರಟ ವಾಹನಗಳಿಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂಠೀರವ ಕ್ರೀಡಾಂಣದ ಬಳಿ ಚಾಲನೆ ನೀಡಿದರು. (ಎಂ.ಎನ್)