ದೇಶಪ್ರಮುಖ ಸುದ್ದಿ

ನವಜೋತ್‌ ಸಿಂಗ್‌ ಸಿಧುರನ್ನು ಮಾತುಕತೆಗೆ ಆಹ್ವಾನಿಸಿದ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ

ಚಂಡೀಗಢ,ಸೆ.29-ನವಜೋತ್‌ ಸಿಂಗ್‌ ಸಿಧು ಜೊತೆಗೆ ಮಾತನಾಡಿದ್ದು, ಚರ್ಚೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಮಾತುಕತೆಗೆ ಆಹ್ವಾನಿಸಿದ್ದೇನೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಬುಧವಾರ ಹೇಳಿದ್ದಾರೆ.

ಪಂಜಾಬ್‌ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಮಂಗಳವಾರ ರಾಜೀನಾಮೆ ಸಲ್ಲಿಸಿದ್ದರು. ಕಾಂಗ್ರೆಸ್‌ ವರಿಷ್ಠರು ಸಿಧು ರಾಜೀನಾಮೆಯನ್ನು ಅಂಗೀಕರಿಸಿಲ್ಲ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ನಾನು ಚರಣ್‌ಜಿತ್‌ ಸಿಂಗ್‌ ಚನ್ನಿ, ಅವರೊಂದಿಗೆ (ಸಿಧು) ಫೋನ್‌ ಮೂಲಕ ಮಾತನಾಡಿದ್ದೇನೆ ಹಾಗೂ ಕುಳಿತು ಮಾತುಕತೆ ನಡೆಸೋಣ ಎಂದಿರುವೆ ಎಂದು ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿ ಏನನ್ನೂ ಮಾಡಿಲ್ಲ. ಯಾವುದೇ ನೇಮಕಗಳ ಬಗ್ಗೆ ಯಾರಿಗಾದರೂ ಆಕ್ಷೇಪಣೆ ಇದ್ದಲ್ಲಿ, ನಾನು ಅದೇ ಆಗಬೇಕು ಎಂದು ಪಟ್ಟು ಹಿಡಿಯುವುದಿಲ್ಲ. ನನಗೆ ಅಹಂ ಇಲ್ಲ. ನಾನು ಅವರಿಗೆ, ಪಕ್ಷ ಸರ್ವೋಚ್ಚವಾಗಿದೆ, ಮಾತನಾಡೋಣ ಎಂದಿದ್ದೇನೆ ಎಂದರು.

ಸಿಧು ನಡೆಯು ಸರ್ಕಾರವನ್ನು ಬೆದರಿಸುವುದಕ್ಕಾಗಿ ಎಂಬ ವಾದವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌, ಪಕ್ಷವೇ ಅಂತಿಮವಾದುದು. ಸರ್ಕಾರವು ಪಕ್ಷದ ಅಗತ್ಯಗಳನ್ನು ಪರಿಗಣಿಸುತ್ತದೆ. ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಅವರನ್ನು ಆಹ್ವಾನಿಸಿರುವೆ. ಯಾವುದೇ ತಪ್ಪಾಗಿದೆ ಎಂದು ನಿಮಗೆ (ಸಿಧು) ಅನಿಸಿದರೆ, ಅದನ್ನು ಗೊತ್ತು ಮಾಡಬಹುದು, ಈ ಹಿಂದೆಯೂ ಮಾಡಿರುವಂತೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇಂದು ಸಿಧು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅವರು, ನೈತಿಕತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ನೂತನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸಂಪುಟದಲ್ಲಿ ಕೆಲವು ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ಐಪಿಎಸ್‌ ಅಧಿಕಾರಿ ಇಕ್ಬಾಲ್‌ ಪ್ರೀತ್‌ ಸಿಂಗ್‌ ಸಹೋತಾ ಅವರಿಗೆ ಹೆಚ್ಚುವರಿಯಾಗಿ ಪಂಜಾಬ್‌ನ ಪೊಲೀಸ್‌ ಮಹಾನಿರ್ದೇಶಕ ಹೊಣೆ ನೀಡಿರುವುದು ಹಾಗೂ ಎಪಿಎಸ್‌ ಡಿಯೋಲ್‌ ಅವರನ್ನು ರಾಜ್ಯದ ನೂತನ ಅಡ್ವೊಕೇಟ್‌ ಜನರಲ್‌ ಆಗಿ ನೇಮಕ ಮಾಡಿರುವ ಬಗ್ಗೆ ಸಿಧು ಕೆರಳಿದ್ದಾರೆ.

ಮುಂದಿನ ವರ್ಷ ಪಂಜಾಬ್‌ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನಲ್ಲಿ ಎದುರಾಗಿರುವ ಬಿಕ್ಕಟ್ಟು ನಾಯಕತ್ವದ ಕೊರತೆಯನ್ನೂ ಎತ್ತಿ ತೋರಿದೆ.

Leave a Reply

comments

Related Articles

error: