ಕರ್ನಾಟಕಮೈಸೂರು

ದಸರಾ ಪುಸ್ತಕ ಮೇಳ ಉದ್ಘಾಟನೆ: ಪುಸ್ತಕ ಪ್ರೇಮಿಗಳಿಗಾಗಿ ತೆರೆದುಕೊಂಡಿದೆ ವೈವಿಧ್ಯಮಯ ಪುಸ್ತಕ ಪ್ರಪಂಚ

ಕಳೆದ ಮೂರು ವರ್ಷಗಳಿಂದಲೂ ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದಸರಾ ಪುಸ್ತಕ ಮೇಳ ಆಯೋಜಿಸುತ್ತಿದ್ದು ಪ್ರಕಾಶಕರಿಗೆ ಉಚಿತ ಮಳಿಗೆ ಹಾಗೂ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ತಿಳಿಸಿದರು.

ಅವರು ಅ.1, ಶನಿವಾರದಂದು ಮೈಸೂರಿನ ಕಾಡಾ ಕಛೇರಿ ಆವರಣದಲ್ಲಿ ಆಯೋಜಿಸಿರುವ ದಸರಾ ಪುಸ್ತಕ ಮೇಳವನ್ನು ಸಚಿವೆ ಉಮಾಶ್ರೀ ಅವರ ಅನುಪಸ್ಥಿತಿಯಲ್ಲಿ ಉದ್ಘಾಟಿಸಿ ‘ಸಿಟಿಟುಡೆ’ ಜೊತೆ ಮಾತನಾಡಿದ ಅವರು, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ  ಹಲವಾರು ಪ್ರಕಾಶಕರು ಮೇಳದಲ್ಲಿ ಪಾಲ್ಗೊಂಡು ಕನಿಷ್ಟ ಶೇ.10 ರಿಂದ ಶೇ.50 ರ ವರೆಗೂ ದರ ರಿಯಾಯಿತಿ ನೀಡಿದ್ದಾರೆ. ಪುಸ್ತಕ ಪ್ರೇಮಿಗಳು, ಮೈಸೂರಿನ ಜನತೆ ಹಾಗೂ ಪ್ರವಾಸಿಗರಿಗೆ ಇದೊಂದು ಸುಸಂದರ್ಭವಾಗಿದ್ದು ಒಂದು ಲಕ್ಷಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ಅಪರೂಪದ ಪುಸ್ತಕಗಳು ಲಭ್ಯವಾಗಲಿವೆ ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರಿನ ಧಾತಿ ಪ್ರಕಾಶನ, ಸಂಸ್ಕೃತಿ ಬುಕ್ ಏಜನ್ಸೀಸ್, ಚೇತನ ಬುಕ್ ಹೌಸ್, ಸಾಹಿತ್ಯಸ್ತಂಭ ಬುಕ್ ಹೌಸ್, ಉತ್ತರ ಕರ್ನಾಟಕದ ಲೋಕಶಿಕ್ಷಣ ಟ್ರಸ್ಟ್, ಶಿಗ್ಗಾವಿಯ ಕರ್ನಾಟಕ ಜಾನಪದ ವಿವಿ ಪ್ರಸಾರಾಂಗ, ಬೆಂಗಳೂರಿನ ಸ್ವಪ್ನ ಬುಕ್ ಹೌಸ್, ಅಂಕಿತ ಪುಸ್ತಕ ಹಾಗೂ ಇನ್ನೂ ಹಲವಾರು ಸುಪ್ರಸಿದ್ಧ ಪುಸ್ತಕ ಮಳಿಗೆಗಳು ಮೇಳದಲ್ಲಿ ಪಾಲ್ಗೊಂಡಿರುವುದು ಪುಸ್ತಕ ಪ್ರೇಮಿಗಳಿಗೆ ರಸದೌತಣವಾಗಿದೆ.

ಉದ್ಘಾಟನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ್ ತಾ.ಪಂ.ಅಧ್ಯಕ್ಷೆ ಮಂಜುಳ ಮಂಜುನಾಥ್ ಉಪಸ್ಥಿತರಿದ್ದರು.

ಮೊದಲ ಮೇಳ: ದಸರಾ ಪುಸ್ತಕಮೇಳದಲ್ಲಿ ಮೊದಲ ಬಾರಿ ಪಾಲ್ಗೊಳ್ಳುತ್ತಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉತ್ತಮ ವ್ಯವಸ್ಥೆ ಮಾಡಲಾಗಿದೆ. ದಸರಾ ಸಂದರ್ಭದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದರಿಂದ ಪುಸ್ತಕಮೇಳ ಎಷ್ಟರ ಮಟ್ಟಿಗೆ ಜನರನ್ನು ಸೆಳೆಯಲಿದೆ ಕಾದು ನೋಡಬೇಕು ಎನ್ನುತ್ತಾರೆ ಬಂಟ್ವಾಳದ ಆರ್ಯ ಸಮಾಜ ಪ್ರಕಾಶನದ ಪಂ. ಕುಶಾಲ. ‘ಸಿಟಿಟುಡೆ’ ಜೊತೆ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿಯ ಜನರು ಪುಸ್ತಕ ಪ್ರೇಮಿಗಳಾದದ್ದರಿಂದ ಮಾರಾಟವು ಚನ್ನಾಗಿಯೇ ಆಗುವುದು ಎನ್ನುವ ವಿಶ್ವಾಸವಿದೆ ಎಂದರು.

ಫೋಟೊ ವಿವರ: ಪುಸ್ತಕ ಮೇಳದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‍.

Leave a Reply

comments

Related Articles

error: