ಕರ್ನಾಟಕಪ್ರಮುಖ ಸುದ್ದಿ

ಎಪಿಎಂಸಿ ಸಮಸ್ಯೆಗಳ ಬಗೆಹರಿಸಲು ಕ್ರಮ ವಹಿಸಲಾಗುವುದು: ಸಚಿವ ಎಸ್.ಟಿ.ಸೋಮಶೇಖರ್

ರಾಜ್ಯ(ಬೆಂಗಳೂರು),ಸೆ.30:-  ಎಪಿಎಂಸಿಯಲ್ಲಿನ ಸಮಸ್ಯೆಗಳ ಕುರಿತು ಪಟ್ಟಿ ಮಾಡಿ ಅವುಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಎಪಿಎಂಸಿ ಅಭಿವೃದ್ಧಿ ಕುರಿತಂತೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ಗಮನಕ್ಕೂ ತರಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸಭಾಂಗಣದಲ್ಲಿ ಸೆ.30ರ ಗುರುವಾರ ನಡೆದ ಮಂಡಳಿ ಪ್ರಧಾನ ಸಭೆಯಲ್ಲಿ ಮಾತನಾಡಿದರು.

ಸಹಕಾರಿ ಇಲಾಖೆಯಲ್ಲಿ ಈಗಾಗಲೇ ಕೆಲವು ತಿದ್ದುಪಡಿ ತರಲಾಗಿದೆ. ಅದೇ ರೀತಿ ಎಪಿಎಂಸಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಅವಶ್ಯವಿದ್ದರೆ ತಿದ್ದುಪಡಿ ತರುವ ಪ್ರಯತ್ನ ಮಾಡಲಾಗುತ್ತದೆ. ಅಧ್ಯಕ್ಷರು ಮತ್ತು ನಿರ್ದೇಶಕರು ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷರು ಬೆಂಗಳೂರಿಗೆ ಆಗಮಿಸಿದರೆ ಅವರಿಗೆ ನಗರದಲ್ಲಿ ತಂಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಸಮಿತಿ ಹಂತದಲ್ಲೇ ಬಗೆಹರಿಸಬೇಕು ಎಂದು ಸೂಚಿಸಿದರು.

ಎಪಿಎಂಸಿಯ ಗೋಡೋನ್ ಮತ್ತು ಮಳಿಗೆಗಳ ಬಾಡಿಗೆ ನಿಯಂತ್ರಣವನ್ನು ಸಮಿತಿಗೆ ನೀಡಿದರೆ ಎಪಿಎಂಸಿಗೂ ಹಣ ಬರುತ್ತದೆ ಎಂದು ಜಿಲ್ಲಾ ಸದಸ್ಯರು ಸಚಿವರಿಗೆ ಮನವಿ ಮಾಡಿದರು. ಮನವಿ ಆಲಿಸಿದ ಸಚಿವರು, ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು.

ಯಾವುದೇ ಸಮಸ್ಯೆಗಳಿದ್ದರೆ ಅಧ್ಯಕ್ಷರು ಮತ್ತು ನಿರ್ದೇಶಕರು ನೇರವಾಗಿ ಕಚೇರಿಯಲ್ಲಿ ಭೇಟಿ ಮಾಡಬಹುದು. ಕೃಷಿ ಮಾರಾಟ ಮಂಡಳಿಯ ಅಭಿವೃದ್ಧಿ ಕುರಿತು ಪ್ರತಿಯೊಬ್ಬರು ಸಲಹೆಗಳನ್ನು ನೀಡಬಹುದು ಎಂದು ಹೇಳಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕೇಂದ್ರ ಕಚೇರಿ ಮತ್ತು ಘಟಕ ಕಚೇರಿಗಳ 2021-22ನೇ ಸಾಲಿನ ಆಯವ್ಯಯಕ್ಕೆ ಘಟನೋತ್ತರ ಮಂಜೂರಾತಿ ನೀಡಲಾಯಿತು.

ಸಭೆಯಲ್ಲಿ ಸಹಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ರಾಜ್ಯದ ಎಲ್ಲಾ ಎಪಿಎಂಸಿಗಳ ನಿರ್ದೇಶಕರು, ಎಪಿಎಂಸಿ ನಿರ್ದೇಶಕ ಕರೀಗೌಡ ಸೇರಿದಂತೆ ನಾನಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

Leave a Reply

comments

Related Articles

error: