ಮೈಸೂರು

ತಮಿಳುನಾಡಿಗೆ ನೀರು ಹರಿಸಬಾರದು : ಎಂ.ಲಕ್ಷ್ಮಣ್ ಆಗ್ರಹ

ಮೈಸೂರು,ಸೆ.30: – ತಮಿಳುನಾಡಿಗೆ 70 ಟಿಎಂಸಿ ಅಡಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶಿಸಿದೆ. ಆದರೆ, ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ 66 ಟಿಎಂಸಿ ಅಡಿ ನೀರು ಸಂಗ್ರಹವಿರುವುದರಿಂದ ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆಗ್ರಹಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಆರ್‌ಎಸ್‌, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಆ.29ರ ವೇಳೆಗೆ 209 ಟಿಎಂಸಿ ಅಡಿ ನೀರು ಶೇಖರಣೆ ಆಗಿರಬೇಕಿತ್ತು. ಆದರೆ, 156.8 ಟಿಎಂಸಿ ಅಡಿ ನೀರಿದೆ. ಜೂನ್‌, ಜುಲೈ, ಆಗಸ್ಟ್‌ನಲ್ಲಿ ತಮಿಳುನಾಡಿಗೆ ಬಿಡಬೇಕಿರುವ ನೀರಿನ ಪ್ರಮಾಣ 86.38 ಟಿಎಂಸಿ ಅಡಿ. ಆ.29ರವರೆಗೆ 55.75 ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ. ಬಾಕಿ 30.63 ಟಿಎಂಸಿ ಅಡಿ ನೀರು ಹರಿಸಬೇಕಿದ್ದು, ಸೆಪ್ಟೆಂಬರ್ ಕೋಟಾ 37 ಟಿಎಂಸಿ ನೀರು ಸೇರಿಸಿ 67.63 ಟಿಎಂಸಿ ಅಡಿ ನೀರು ಹರಿಸುವಂತೆ ಮಂಡಳಿ ಆದೇಶಿಸಿತ್ತು. ಈ ಪೈಕಿ ಆ.29ರಿಂದ ಸೆ.29ರವರೆಗೆ 17 ಟಿಎಂಸಿ ನೀರು ಬಿಡಲಾಗಿದೆ’ ಎಂದು ತಿಳಿಸಿದರು.

‘ಸೆ.27ರಂದು ಮಂಡಳಿ ಸಭೆ ನಡೆಸಿದ್ದು, ಬಾಕಿ ಇರುವ 50 ಹಾಗೂ ಅಕ್ಟೋಬರ್‌ ತಿಂಗಳ ಕೋಟಾ 20 ಸೇರಿ 70 ಟಿಎಂಸಿ ಅಡಿ ನೀರು ಹರಿಸುವ ನಿರ್ಣಯಕ್ಕೆ ಕರ್ನಾಟಕ ಒಪ್ಪಿಗೆ ಸೂಚಿಸಿದೆ. ಆದರೆ, ನಾಲ್ಕು ಜಲಾಶಯಗಳಲ್ಲಿ ಇಷ್ಟು ನೀರಿಲ್ಲ. ಎಲ್ಲ ನೀರನ್ನು ತಮಿಳುನಾಡಿಗೆ ಬಿಟ್ಟರೆ ಇಲ್ಲಿನ ಜನರ ಗತಿ ಏನು’ ಎಂದು ಪ್ರಶ್ನಿಸಿದರು.

‘ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯದಿಂದ ಪ್ರತಿದಿನ 1 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದೇ ರೀತಿ ಬಿಟ್ಟರೆ ಡಿಸೆಂಬರ್‌ ಒಳಗೆ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಒಂದು ವರ್ಷಕ್ಕೆ 40 ಟಿಎಂಸಿ ಅಡಿ ನೀರು ಬೇಕು. ನೀರಾವರಿಗಾಗಿ 110 ಟಿಎಂಸಿ ಅಡಿ ನೀರು ಬೇಕು. ಇಷ್ಟು ನೀರನ್ನು ಎಲ್ಲಿಂದ ತರುವುದು, ಹೀಗಾಗಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅ.7ರಂದು ನಡೆಯುವ ಮಂಡಳಿಯ ಸಭೆಯಲ್ಲೂ ಆಕ್ಷೇಪ ವ್ಯಕ್ತಪಡಿಸಬೇಕು’ ಎಂದು ಆಗ್ರಹಿಸಿದರು.
‘ತಮಿಳುನಾಡಿನಲ್ಲಿ ಬಿಜೆಪಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ನೀರನ್ನು ಹರಿಸಲಾಗುತ್ತಿದೆ. ಇದರಲ್ಲಿ ಬಿಜೆಪಿಯ ಕೈವಾಡ ಇದೆ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ  ನಗರಾಧ್ಯಕ್ಷ ಆರ್‌.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಈಶ್ವರ್‌ ಚಕ್ಕಡಿ, ನಾಗಭೂಷಣ್‌ ತಿವಾರಿ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: