ಮೈಸೂರು

ಪತ್ನಿಯಿಂದಲೇ ಪತಿಯ ಕೊಲೆ ಶಂಕೆ : ಪೊಲೀಸರಿಂದ ವಿಚಾರಣೆ

ಹಾಸನ:  ಪತ್ನಿಯೇ ಪತಿಗೆ ಜ್ಯೂಸ್‍ನಲ್ಲಿ ನಶೆಯೇರುವ ಮಾತ್ರೆ ಹಾಕಿ ಬಳಿಕ ಇಂಜೆಕ್ಷನ್ ಮೂಲಕ ವಿಷವುಣಿಸಿ ಆತನನ್ನು ಸಾಯಿಸಿರುವ  ಆರೋಪವೊಂದು ಕೇಳಿ ಬಂದಿದೆ. ಅರಸೀಕೆರೆ ತಾಲೂಕಿನ ಕಿತ್ತನಗೆರೆ ಗ್ರಾಮದ  ಆಶಾ(24) ಮತ್ತು ವಿಶ್ವನಾಥ್(28) ಎಂಬವರ ವಿವಾಹ ಫೆ.17ರಂದು ನಡೆದಿತ್ತು. ಬಳಿಕ ಏ. 28 ರಂದು ಆಶಾ ಫ್ರೆಂಡ್ ಮನೆಯಲ್ಲಿ ನಾಮಕರಣ ಇದೆ ಎಂದು ವಿಶ್ವನಾಥ್ ಅವರನ್ನು ಕರೆದುಕೊಂಡು ಬಂದು ಮಹಾರಾಜ ಪಾರ್ಕ್ ನಲ್ಲಿ ಕುಳಿತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದ ವಿಶ್ವನಾಥ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇದಾದ ಬಳಿಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಿಶ್ವನಾಥ್ ಅವರು ಮೇ 2ರ ಸಂಜೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಆದರೆ ಸಾಯುವ ಮುನ್ನ ವಿಶ್ವನಾಥ ನೀಡಿದ ಹೇಳಿಕೆ ಮನೆಯವರಲ್ಲಿ ಗಾಬರಿ ಹುಟ್ಟಿಸಿದೆ.  ನಾವು ಮಹಾರಾಹ ಪಾರ್ಕ್ ನಲ್ಲಿ ಕುಳಿತಿದ್ದಾಗ ನಮ್ಮಿಬ್ಬರ ನಡುವೆ  ಹುಟ್ಟುವ ಮಗುವಿನ ಕುರಿತು ಚರ್ಚೆ ನಡೆದಿತ್ತು. ಆಶಾ ಭವಿಷ್ಯದಲ್ಲಿ ಹುಟ್ಟುವ ಮಗು ಬೆಳ್ಳಗಿರಬೇಕು ಎಂದು ಹೇಳಿ ಮಾತ್ರೆ ಮತ್ತು ಜ್ಯೂಸ್ ನೀಡಿದ್ದಳು. ಆಕೆಯ ಮಾತನ್ನು ನಂಬಿ ನಾನು ಜ್ಯೂಸ್‍ನೊಂದಿಗೆ 4-5 ಮಾತ್ರೆ ನುಂಗಿದ್ದೇನೆ. ಬಳಿಕ ನನಗೆ ಏನಾಯಿತೆಂದು ಗೊತ್ತಿಲ್ಲ ಎಂದು ವಿಶ್ವನಾಥ್  ತನ್ನ ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ತಿಳಿಸಿದ್ದರು. ಪತಿ ಪ್ರಜ್ಞೆ ತಪ್ಪಿ ಬಿದ್ದ ಕೂಡಲೇ ಆಶಾ ಪಾರ್ಕ್ ನಿಂದ ಕಾಲ್ಕಿತ್ತಿದ್ದಾಳೆ. ಹೀಗಾಗಿ ಈಕೆಯೇ ವಿಶ್ವನಾಥ್ ಅವರನ್ನು ಕೊಲೆ ಮಾಡಿದ್ದಾಳೆ ಎಂದು ವಿಶ್ವನಾಥ ಕುಟುಂಬಸ್ಥರು ಆರೋಪಿಸಿ, ದೂರು ನೀಡಿದ್ದಾರೆ. ಹಾಸನ ಗ್ರಾಮಾಂತರ ಠಾಣೆಯ ಪೊಲೀಸರು ಆಶಾಳನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: