ಮೈಸೂರು

ಬಾಲ್ಯ ಫೌಂಡೇಶನ್ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಮೈಸೂರು,ಅ.2:- ಬಾಲ್ಯ ಫೌಂಡೇಶನ್ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಇಂದು ವಿಜಯ ನಗರ ಮೊದಲನೇ ಹಂತದಲ್ಲಿರುವ  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕ್ರೀಡಾ ಮೈದಾನದಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಕುರಿತು ಮಾತನಾಡಿದ ಬಾಲ್ಯ ಫೌಂಡೇಶನ್ ಟ್ರಸ್ಟಿ ಅನಿಲ ಸದಾನಂದ  ಬಾಲ್ಯ ಫೌಂಡೇಶನ್ 2014ರಲ್ಲಿ ಎನ್ ಜಿ ಒ ಆಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇಂದು ಗಾಂಧಿ ಜಯಂತಿ-ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿ ಅಷ್ಟೇ ಅಲ್ಲದೆ ಅದರ ಜೊತೆಗೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವೂ ಇದೆ ಎಂದರು.

ವಿಜಯನಗರ ಮೊದಲ ಹಂತದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೈದಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಗರಪಾಲಿಕೆಯ ಸದಸ್ಯರಾದ ಸುಬ್ಬಯ್ಯನವರು ಅವರ ತಂಡದವರೊಂದಿಗೆ ಸಹಕರಿಸಿ ಸತತವಾಗಿ ಮೂರುವರೆ ಗಂಟೆಗಳ ಕಾಲ ಕೆಲಸ ಮಾಡಿದ್ದೇವೆ. ಎರಡೂವರೆ ಲಾರಿಯಷ್ಟು ಕಸಗಳನ್ನು ತುಂಬಿ ಸ್ಟೇಡಿಯಂ ಸ್ವಚ್ಛಗೊಳಿಸಿದ್ದೇವೆ. ಈ ಕಾರ್ಯಕ್ರಮ ಇಂದು ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ವಾರದಲ್ಲಿ ಒಂದು ದಿನವಾದರೂ ಇದಕ್ಕೆ ಮೀಸಲಿಟ್ಟು ಸದಾಕಾಲ ಯಾವುದೇ ಪ್ರದೇಶವಿರಬಹುದು, ಮನೆಯ ಸುತ್ತಮುತ್ತ ಬೀದಿಗಳಿರಬಹುದು ಸ್ವಚ್ಛವಾಗಿಟ್ಟುಕೊಳ್ಳುವ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ಈ ಸಂದರ್ಭ ಉಮಾ ಅನಿಲ್, ಶ್ರೀನಿಧಿ ಕೆ.ಎ., ಪೌರಕಾರ್ಮಿಕರುಗಳು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: