ಕರ್ನಾಟಕಪ್ರಮುಖ ಸುದ್ದಿ

ಖಾದಿ ಮಳಿಗೆಯಲ್ಲಿ ಪತ್ನಿಗಾಗಿ ಸೀರೆ ಖರೀದಿ: `ನಾವು ಸೆಲೆಕ್ಟ್ ಮಾಡಿ ಬೈಸಿಕೊಳ್ಳದಿದ್ದರೇ ಸಾಕಪ್ಪಾ’ ಎಂದ ಸಿಎಂ ಬೊಮ್ಮಾಯಿ!

ಬೆಂಗಳೂರು,ಅ.2- ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಇಂದು ಖಾದಿ ಎಂಪೋರಿಯಂಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪತ್ನಿಗೆ ಸೀರೆ ಖರೀದಿಸಿದರು.

ಗಾಂಧಿ ಭವನದ ಪಕ್ಕದಲ್ಲಿರುವ ಖಾದಿ ಎಂಪೋರಿಯಂನಲ್ಲಿ ಸಿಎಂ ಬೊಮ್ಮಾಯಿ ಅವರು ಬಟ್ಟೆ ಖರೀದಿ ಮಾಡಿದರು. ಪತ್ನಿಗೆ ಸೀರೆ ಖರೀದಿ ಮಾಡುವ ವೇಳೆ ಬೊಮ್ಮಾಯಿ ಅವರು, `ನಾವು ಸೆಲೆಕ್ಟ್​ ಮಾಡಿ, ಖರೀದಿ ಮಾಡಿ ಆಮೇಲೆ ಮೇಲೆ ಬೈಸಿಕೊಳ್ಳದಿದ್ದರೇ ಸಾಕಪ್ಪಾ’ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಸಿಎಂ ಮಾತಿಗೆ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕು, ಸೀರೆ ಖರೀದಿ ಮುಂದುವರಿಸಿದರು. ಮೂರು ಸೀರೆ ನೋಡಿ, ಕೊನೆಗೆ ಒಂದು ಸೀರೆಯನ್ನು ಸಿಎಂ ಖರೀದಿಸಿದರು.

ಇನ್ನು ತಮ್ಮೊಂದಿಗಿದ್ದ ಸಚಿವ ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್ ಸೇರಿದಂತೆ ಇತರೇ ಸಚಿವರಿಗೂ ಸೀರೆ ಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ಇದೇ ವೇಳೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರಿಗೂ ‘ಬಾರಪ್ಪಾ, ನಿಮ್ಮ ಮನೆಯವರಿಗೆ ಸೀರೆ ಖರೀದಿ ಮಾಡು’ ಎಂದಿದ್ದಾರೆ.

ಸಚಿವ ಗೋವಿಂದ ಕಾರಜೋಳರಿಗೆ ಸೀರೆ ತೆಗೆದುಕೊಳ್ಳಿ ಎಂದು ಸಿಎಂ ಹೇಳಿದಾಗ, `ಸಾರ್, ನನಗೆ ಅದೆಲ್ಲಾ ಗೊತ್ತಾಗಲ್ಲ’ ಎಂದಿದ್ದಾರೆ. ಅದಕ್ಕೆ `ಈಗಲಾದ್ರೂ ಕಲಿತುಕೊಳ್ಳಿ’ ಎಂದು ಸಿಎಂ ಹೇಳಿದರು. ಸಿಎಂ ಮಾತಿಗೆ ಕಟ್ಟು ಬಿದ್ದ ಗೋವಿಂದ ಕಾರಜೋಳ `ಇರಲೀ, ನನಗೊಂದು ಸೀರೆ ಕೊಡಿ ಸೀರೆ ಖರೀದಿಸಿದ್ದಾರೆ. ಇನ್ನು ಬಿ.ವೈ. ವಿಜಯೇಂದ್ರ ಅವರು ಸಿಎಂ ಮಾತಿನಂತೆ `ನಮಗೊಂದು‌ ಸೀರೆ ಕೊಡಿ’ ಎಂದು 4300 ರೂ. ಬೆಲೆಯ ಸೀರೆ ಖರೀದಿ ಮಾಡಿದರು.

ಸಿಎಂ ಬೊಮ್ಮಾಯಿ ಅವರು ಹತ್ತು ಜುಬ್ಬಾ ಪೀಸ್ ಗಳು ಮತ್ತು ಪತ್ನಿಗಾಗಿ ಸೀರೆ ಖರೀದಿ ಮಾಡಿದರು. ಒಟ್ಟು 16,031 ರೂ. ಬೆಲೆಯ ಬಟ್ಟೆ ಖರೀದಿಸಿದರು.

 

Leave a Reply

comments

Related Articles

error: