ದೇಶಪ್ರಮುಖ ಸುದ್ದಿ

ಉತ್ತರಪ್ರದೇಶ ಹಿಂಸಾಚಾರ: ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಪ್ರಿಯಾಂಕಾ ಗಾಂಧಿ ಬಂಧನ

ಲಖನೌ,ಅ.4-ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ನಿನ್ನೆ ಪ್ರತಿಭಟನಾಕಾರ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ತಡರಾತ್ರಿ ಘಟನಾ ಸ್ಥಳಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಮಾರ್ಗಮಧ್ಯೆಯೇ ತಡೆದು ಅವರನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಹೆಳಿಕೊಂಡಿದೆ.

ಈ ಕುರಿತು ವಿಡಿಯೋ ಒಂದನ್ನು ಕಾಂಗ್ರೆಸ್‌ ಶೇರ್ ಮಾಡಿಕೊಂಡಿದೆ. ಅದರಲ್ಲಿ ಪೊಲೀಸರು ಮತ್ತು ಪ್ರಿಯಾಂಕಾ ನಡುವೆ ನಡೆದಿರುವ ಮಾತಿನ ಚಕಮಕಿಯನ್ನು ಕೇಳಬಹುದಾಗಿದೆ. ನೀವು ಸರ್ಕಾರವನ್ನು ರಕ್ಷಿಸುತ್ತಿದ್ದೀರಿ. ನೀವು ನನಗೆ ಕಾನೂನು ವಾರಂಟ್, ಕಾನೂನು ಆಧಾರವನ್ನು ನೀಡಿ, ಇಲ್ಲದಿದ್ದರೆ ನಾನು ಇಲ್ಲಿಂದ ಕದಲುವುದಿಲ್ಲ ಎಂದು ಅದರಲ್ಲಿ ಕೇಳಿಬರುತ್ತಿದೆ.

‘ನೀವು ನನ್ನನ್ನು ಬಂಧಿಸಿ ಕಾರಿನಲ್ಲಿ ಕೂರಿಸಿದರೆ ನಾನು ನಿಮ್ಮ ಮೇಲೆ ಅಪಹರಣದ ಆರೋಪ ಹೊರಿಸುತ್ತೇನೆ ಮತ್ತು ಆರೋಪವು ಪೊಲೀಸರ ಮೇಲೆ ಆಗುವುದಿಲ್ಲ, ಆದರೆ ನಿಮ್ಮ ಮೇಲೆ ಮಾಡುತ್ತೇನೆ’ ಎಂದು ಪ್ರಿಯಾಂಕಾ ಪೋಲೀಸ್ ಅಧಿಕಾರಿಯೊಬ್ಬರಿಗೆ ಹೇಳಿದ್ದು ಇದು ಕೂಡ ಕೇಳಿಬರುತ್ತಿದೆ.

ಆಗಿದ್ದೇನು? ಇತ್ತೀಚೆಗೆ ಭಾಷಣವೊಂದರಲ್ಲಿ ಕೇಂದ್ರ ಸಚಿವ ಮಿಶ್ರಾ ಅವರು, ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಕುರಿತು ಪ್ರಸ್ತಾಪಿಸಿ, ‘ಇದು 10-15 ಜನರು ನಡೆಸುತ್ತಿರುವ ಪ್ರತಿಭಟನೆಯಾಗಿದ್ದು, ಅವರನ್ನು ಸರಿದಾರಿಗೆ ತರಲು ನಮಗೆ ಕೇವಲ 2 ನಿಮಿಷ ಸಾಕು’ ಎಂದು ಹೇಳಿದ್ದರು.

ಇದರಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು.ಇದೇ ವೇಳೆ ಈ ಘರ್ಷಣೆ ನಡೆದಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಯಾರು ಯಾರನ್ನು ಥಳಿಸಿದ್ದಾರೆ, ಇದರ ನಿಜವೇನು ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಷ್‌ ಮಿಶ್ರಾ ಅವರು ಪ್ರತಿಭಟನಾಕಾರರ ಮೇಲೆಯೇ ಕಾರು ಚಲಾಯಿಸಿದ್ದು, ನಾಲ್ವರು ರೈತರು ಸ್ಥಳದಲ್ಲೇ ಅಸುನೀಗಿದ್ದಾಗಿ ರೈತರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರ ಕಾರಿನ ಮೇಲೆ ರೈತರು ಕಲ್ಲುತೂರಾಟ ನಡೆಸಿದ್ದರಿಂದ, ಕಾರು ಪಲ್ಟಿಯಾಯಿತು. ಈ ವೇಳೆ ಇಬ್ಬರು ಸಾವಿಗೀಡಾದರು. ನಂತರ ರೈತರು ಕಾರಿನಲ್ಲಿದ್ದ ನಮ್ಮ ಪಕ್ಷದ ಮೂವರು ಕಾರ್ಯಕರ್ತರು ಹಾಗೂ ಚಾಲಕನಿಗೆ ಥಳಿಸಿ ಕೊಂದುಹಾಕಿದ್ದಾರೆ’ ಎಂದು ಬಿಜೆಪಿ ಹೇಳುತ್ತಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: