ಕರ್ನಾಟಕಪ್ರಮುಖ ಸುದ್ದಿ

67 ನೇ ವನ್ಯಜೀವಿ ಸಪ್ತಾಹ; ವನ್ಯಜೀವಿ ಸಂರಕ್ಷಣೆ ಜಾಗೃತಿ ಓಟ

ರಾಜ್ಯ(ಮಡಿಕೇರಿ) ಅ.5:- ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಕೋವಿಡ್ ಮಾರ್ಗಸೂಚಿಯನ್ವಯ ಸೋಮವಾರ ಮಡಿಕೇರಿ ನಗರದ ಅರಣ್ಯ ಭವನದಿಂದ 4.5 ಕಿ.ಮೀ.ದೂರದ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ತನಕ ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಓಟ( ವಾಕಥಾನ್)ವನ್ನು ಹಮ್ಮಿಕೊಳ್ಳಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಪೊನ್ನಂಪೇಟೆ ಅರಣ್ಯ ಕಾಲೇಜು, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಗ್ರೀನ್ ಸಿಟಿ ಫೆÇೀರಂ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ನಡೆದ ಜನಜಾಗೃತಿ ಜಾಥಾದಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು.
ವಾಕಥಾನ್ ಓಟಕ್ಕೆ ಹಸಿರು ನಿಶಾನೆ ನೀಡಿ ಮಾತನಾಡಿದ ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ತಖತ್ ಸಿಂಗ್ ರಣಾವತ್ ಅವರು ವನ್ಯಜೀವಿಗಳ ರಕ್ಷಣೆ, ಕಾಳಜಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವನ್ಯಜೀವಿ ಸಪ್ತಾಹವನ್ನು ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬರೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದರು.
ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಸಿ.ಜಿ.ಕುಶಾಲಪ್ಪ ಅವರು ಮಾತನಾಡಿ, ವನ್ಯಜೀವಿಗಳ ಸುಸ್ಥಿತಿಯೊಂದಿಗೆ ಪರಿಸರ ಸಂರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು. ಅರಣ್ಯ ಮತ್ತು ವನ್ಯಜೀವಿಗಳು ಪರಿಸರ ಸಮತೋಲನ ಕಾಪಾಡಲು ಪೂರಕವಾಗಿವೆ ಎಂದು ವನ್ಯಜೀವಿ ಸಪ್ತಾಹದ ಅಗತ್ಯದ ಬಗ್ಗೆ ವಿವರಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ ವಿಭಾಗ) ಎಂ.ಶಿವರಾಮ್ ಬಾಬು ಅವರು ಪ್ರತಿಯೊಬ್ಬರೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು.
ವನ್ಯಜೀವಿಗಳ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ಇಂತಹ ಜನಜಾಗೃತಿ ಅಭಿಯಾನವು ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದರು.
ಕೊಡಗಿನಲ್ಲಿ ಈ ಬಾರಿ ವನ್ಯಜೀವಿ ಸಪ್ತಾಹದ ಬಗ್ಗೆ ಜನಜಾಗೃತಿ ಮೂಡಿಸುವ ದಿಸೆಯಲ್ಲಿ ಶಾಲಾ ಮಕ್ಕಳಿಂದ ಅಂಚೆ ಕಾರ್ಡ್‍ನಲ್ಲಿ ವನ್ಯಜೀವಿಗಳ ಚಿತ್ರ ಮತ್ತು ಸಂದೇಶಗಳನ್ನು ಬರೆಯುವ ಅಂಚೆ ಕಾರ್ಡ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಡಿಸಿಎಫ್‍ಗಳಾದ ಎ.ಟಿ.ಪೂವಯ್ಯ, ಪಿ.ಎ.ಸೀಮ, ಎಸಿಎಫ್‍ಗಳಾದ ಡಿ.ಎಸ್.ದಯಾನಂದ, ಕೆ.ಎ.ನೆಹರು, ಶ್ರೀನಿವಾಸ್ ನಾಯ್ಕ್, ವನ್ಯಜೀವಿ ವಿಭಾಗದ ಆರ್‍ಎಫ್‍ಎಫ್‍ಗಳಾದ ವಿಮಲ್ ಬಾಬು, ಮರಿಸ್ವಾಮಿ, ವೀರೇಂದ್ರ, ದೇಚಮ್ಮ, ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಎಂ.ಎನ್.ವೆಂಕಟನಾಯಕ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ, ಪದಾಧಿಕಾರಿ ಬಿ.ಬಿ.ಜಾಜಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ.ವೆಂಕಟೇಶ್, ಗ್ರೀನ್ ಸಿಟಿ ಫೆÇೀರಂನ ಪ್ರಮುಖರಾದ ಚೇಯ್ಯಂಡ ಸತ್ಯ, ಶಿಕ್ಷಣ ಸಂಯೋಜಕರಾದ ಕೆ.ಯು.ರಂಜಿತ್, ಎಂ.ಎಸ್.ಕೇಶವಮೂರ್ತಿ, ಎಸ್.ಆರ್.ಶಿವಲಿಂಗ, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು.
ಕಾಲ್ನಡಿಗೆ ಜಾಥಾ: ಅರಣ್ಯ ಭವನದಿಂದ ಆರಂಭವಾದ ನಡಿಗೆಯು ನಗರದ ಮುಖ್ಯರಸ್ತೆ, ಮಹದೇವಪೇಟೆ, ಎ.ವಿ.ಶಾಲೆಯ ಮೂಲಕ ತೆರಳಿ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‍ನಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ 160 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ನಡಿಗೆಯಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಅರಣ್ಯ ರಕ್ಷಿಸಿ: ವನ್ಯಜೀವಿಗಳ ಸಂರಕ್ಷಿಸಿ, ವನ್ಯಜೀವಿಗಳ ಸುಸ್ಥಿತಿ ದೇಶದ ಪ್ರಗತಿ ಎಂಬಿತ್ಯಾದಿ ಘೋಷಣೆಗಳ ಫಲಕಗಳನ್ನು ಹಿಡಿದು ಜನಜಾಗೃತಿ ಮೂಡಿಸಿದರು.
ನಡಿಗೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ರಾಜ್ಯ ವಿಜ್ಞಾನ ಪರಿಷತ್ತು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಗ್ರೀನ್ ಸಿಟಿ ಫೋರಂನ ಪದಾಧಿಕಾರಿಗಳು, ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: