ಪ್ರಮುಖ ಸುದ್ದಿಮೈಸೂರು

ಇಂದಿನಿಂದ ಅ.7ರವರೆಗೂ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಮೈಸೂರು, ಅ.5:- ಇಂದಿನಿಂದ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಅಕ್ಟೋಬರ್ 6ರಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ಅಕ್ಟೋಬರ್ 7ರಂದು ವಿಶ್ವವಿಖ್ಯಾತ ಮೈಸೂರು ದಸರಾ 2021ರ ಉದ್ಘಾಟನಾ ಮಹೋತ್ಸವ ನೆರವೇರಲಿದೆ. ಹೀಗಾಗಿ ಅಕ್ಟೋಬರ್ 05ರಂದು ಬೆಳಗಿನ ಜಾವ 4 ಗಂಟೆಯಿಂದ ಅಕ್ಟೋಬರ್ 07ರ ಮಧ್ಯಾಹ್ನದ ವರೆಗೂ ನಿರ್ಬಂಧ ಹೇರಲಾಗಿದೆ. ಆದರೆ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಎಂದಿನಂತೆ ನಡೆಯಲಿದೆ. ಅಲ್ಲದೆ ಮೆಟ್ಟಿಲು ಮಾರ್ಗದಿಂದಲೂ ದೇವಸ್ಥಾನಕ್ಕೆ ಭಕ್ತರ ನಿರ್ಬಂಧವಿದೆ.

ದಾಸೋಹ, ಊಟದ ವ್ಯವಸ್ಥೆ ಮಾಡುವುದು ಅಥವಾ ಪ್ರಸಾದ ವಿತರಣೆಗೂ ಬ್ರೇಕ್ ಹಾಕಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳು ಹಾಗೂ ಚಾಮುಂಡಿಬೆಟ್ಟದ ಸುತ್ತಲಿನ ಗ್ರಾಮಸ್ಥರನ್ನು ಹೊರತುಪಡಿಸಿ ಎಲ್ಲರಿಗೂ ನಿರ್ಬಂಧ ಹೇರಿ ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: