ಮೈಸೂರು

ಹಂಚ್ಯಾದಲ್ಲಿ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣ : ಆರು ಮಂದಿ ಆರೋಪಿಗಳ ಬಂಧನ

ಮೈಸೂರು,ಅ.5:-  ಮೈಸೂರಿನ ಹೊರವಲಯದ ಹಂಜ್ಯಾ ಗ್ರಾಮದಲ್ಲಿ ಕಳೆದ ಶನಿವಾರ ಹಾಡ ಹಗಲೇ  ಮಚ್ಚು ಲಾಂಗ್ ಹಿಡಿದು ತಂಡವೊಂದು  ಸಹೋದರರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ   ಘಟನೆ ನಡೆದ 48 ಗಂಟೆಯೊಳಗೆ ಆರು ಮಂದಿಯನ್ನು ಬಂಧಿಸುವಲ್ಲಿ ಮೈಸೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದ ರಾಜೇಶ್ ಅಲಿಯಾಸ್ ಅಂದಾನಿ, ಕಿರಣ್ ಅಲಿಯಾಸ್ ಇಸ್ಕಿ, ಶ್ರೀನಿವಾಸ ಅಲಿಯಾಸ್ ಸೀನ, ಪುನೀತ್, ಕರಿಯಾ ಅಲಿಯಾಸ್ ಅರ್ಜುನ ಮತ್ತು ನಾಗ ಎನ್ನಲಾಗಿದೆ. ಘಟನೆ ನಡೆದ ದಿನ ನಾಗೇಂದ್ರ ಎಂಬಾತನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ಬೆಳಗ್ಗೆ 11.30ರ ಸುಮಾರಿನಲ್ಲಿ 7ರಿಂದ 8 ಜನರಿದ್ದ ಗುಂಪು ಹಂಚ್ಯಾ ಗ್ರಾಮದ ಹೊರವಲ ಯದಲ್ಲಿ ಬೈಕ್‌ ಗಳನ್ನು ನಿಲ್ಲಿಸಿ ಗ್ರಾಮಕ್ಕೆ ಪ್ರವೇಶಿಸಿ, ಹೋಟೆಲ್ ವೊಂದರಲ್ಲಿ ತಿಂಡಿ ಮಾಡಿ ಹೊರ ಬಂದ ಕುಮಾರ್ ಎಂಬಾತನ ಮೇಲೆ ಈ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಅದನ್ನು ತಡೆಯಲು ಬಂದ ಕುಮಾರನ ಸಹೋದರ ಲೋಕೇಶ್ ಎಂಬಾತನ ಮೇಲೂ ಕೂಡ ಮಾರಣಾಂತಿಕ ಹಲ್ಲೆ ನಡೆಸಿತ್ತು.   ಲಾಂಗ್, ಮಚ್ಚು ಮತ್ತು ಡ್ಯಾಗರ್ ಅನ್ನು ಹಿಡಿದು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಈ ವೇಳೆ ಗ್ರಾಮಸ್ಥರು ಅಟ್ಟಾಡಿಸಿಕೊಂಡು ಹೋದಾಗ ಅಲ್ಲಿಂದ ಕಾಲ್ಕಿತ್ತಿದ್ದರು.   ಈ ವೇಳೆ ಓರ್ವನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಯುವಕರ ದಾಂಧಲೆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಎಸ್ಪಿ ಚೇತನ್ ಅವರು, ಆರೋಪಿಗಳ ಬಂಧನಕ್ಕಾಗಿ ಮೈಸೂರು ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ವೈರಲ್ ಆಗಿದ್ದ ವಿಡಿಯೋ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ ಪೊಲೀಸರ ತಂಡ, ಸೋಮವಾರ ಬೆಳಿಗ್ಗೆ ತಾಲೂಕಿನ ಕಾಳಸಿದ್ದಹುಂಡಿ ಬಳಿ ಆರೋಪಿಗಳು ಇರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ, ಆರು ಮಂದಿಯನ್ನು ಬಂಧಿಸಿದೆ.

ಜಿಲ್ಲಾ ಎಸ್ಪಿ ಆರ್. ಚೇತನ್, ಅಡಿಷನಲ್ ಎಸ್ಪಿ ಶಿವಕುಮಾರ್‌ ಹಾಗೂ ಮೈಸೂರು ಗ್ರಾಮಾಂತರ ವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ  ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶಶಿಕುಮಾರ್, ಸಬ್ ಇನ್ಸ್‌ಪೆಕ್ಟರ್ ಕೆಂಪಣ್ಣ, ಸಿಬ್ಬಂದಿಗಳಾದ ನಾಗೇಂದ್ರ, ಮಹೇಶ್‌ಕುಮಾರ್‌, ಅರುಣ್‌ಕುಮಾರ್‌, ಸುನೀಲ್ ಮತ್ತು ಶ್ರೀನಿವಾಸ್   ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: