ಕರ್ನಾಟಕಪ್ರಮುಖ ಸುದ್ದಿ

ಹಳೆ ಪ್ರಕರಣ: ಸುಳ್ಯ ಕೋರ್ಟ್‌ ಗೆ ಹಾಜರಾಗಿ ಸಾಕ್ಷಿ ಹೇಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮಂಗಳೂರು,ಅ.5-ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಸುಳ್ಯ ನ್ಯಾಯಾಲಯಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಜರಾಗಿದ್ದರು.

ಆರು ವರ್ಷಗಳ ಹಿಂದೆ ಡಿಕೆಶಿ ಅವರು ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ ಸಾಕ್ಷ್ಯ ಹೇಳಿದರು. ಡಿ.ಕೆ.ಶಿವಕುಮಾರ್ ಸಾಕ್ಷ್ಯ ಹೇಳುತ್ತಿರುವ ಸಂದರ್ಭದಲ್ಲೇ ವಿದ್ಯುತ್ ಕೈ ಕೊಟ್ಟ ಘಟನೆ ನಡೆಯಿತು.

ನ್ಯಾಯಾಧೀಶರ ಮುಂದೆ ಘಟನೆಯನ್ನು ವಿವರಿಸಿದ ಡಿ.ಕೆ.ಶಿವಕುಮಾರ್ 2016ರ ಫೆಬ್ರವರಿ 27, 28 ರಂದು ಆರೋಪಿ ಗಿರಿಧರ್ ರೈ ನನಗೆ ಹಲವು ಬಾರಿ ಕರೆ ಮಾಡಿದ್ದಾರೆ. ತನ್ನ ಊರಿನಲ್ಲಿ ವಿದ್ಯುತ್ ಸಮಸ್ಯೆ ಇದೆ, ಪರಿಹರಿಸಿ ಅಂತಾ ಕೆಟ್ಟದಾಗಿ ಮಾತನಾಡಿದ್ದಾರೆ ಎಂದರು.

ಕರೆ ಮಾಡಿದ ಎರಡು ದಿನವೂ ನನ್ನ ಜೊತೆ ಅವಾಚ್ಯ ಶಬ್ಧಗಳನ್ನು ಬಳಸಿ ಮಾತನಾಡಿದ್ದಾರೆ. ಎರಡು ದಿನದಲ್ಲಿ ಐದಾರು ಬಾರಿ ಗಿರಿಧರ್ ರೈ ಕರೆ ಮಾಡಿದ್ದಾರೆ. ಆದರೆ ಎರಡು ಬಾರಿ ಮಾತ್ರ ಕರೆ ಸ್ವೀಕರಿಸಿ ಮಾತನಾಡಿದ್ದೇನೆ. ಅತ್ಯಂತ ಕೆಟ್ಟ ಶಬ್ಧಗಳಿಂದ ನಿಂದಿಸಿ‌ ಬೈದು, ಕೊಲೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಹೇಳಿ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸಿದ್ದೇನೆ ಅಂತಾ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿದ್ಯುತ್ ಸಚಿವರಾಗಿದ್ದ ಸಂದರ್ಭದಲ್ಲಿ ನಿಮಗೆ ಆರೋಪಿ ಗಿರಿಧರ್ ರೈ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿರೋದು ತಪ್ಪು. ಆದರೆ ಸುಳ್ಯ ದಲ್ಲಿ ಅಷ್ಟೊಂದು ವಿದ್ಯುತ್ ಸಮಸ್ಯೆ ಇದೆ. ಜನ ಪ್ರತಿನಿತ್ಯ ಲೋಡ್ ಶೆಡ್ಡಿಂಗ್‌ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಈಗ ಸ್ವತಃ ನೀವೇ ಅನುಭವ ಮಾಡಿದ್ದೀರಿ. ಅಂತಾ ನ್ಯಾಯಾಧೀಶರು ಡಿ.ಕೆ.ಶಿವಕುಮಾರ್‌ಗೆ ಪರಿಸ್ಥಿತಿ ಮನವರಿಕೆ ಮಾಡಿದ್ದಾರೆ.

ಇನ್ನು ಡಿ.ಕೆ.ಶಿವಕುಮಾರ್‌ಗೆ ಆರೋಪಿ ಗಿರಿಧರ್ ರೈ ಪರ ವಕೀಲರು ವಿಚಾರಣೆ ವೇಳೆ ಹಲವು ಪ್ರಶ್ನೆ ಮಾಡಿದರು. ಗಿರಿಧರ್ ರೈ ವಿರುದ್ಧ ದೂರು ನೀಡಿದ ಸಂದರ್ಭದಲ್ಲಿ ದೂರು ಕೊಟ್ಟ ಅಧಿಕಾರಿ ನಿಮ್ಮ ಹೇಳಿಕೆ ಪಡೆದಿದ್ದಾರಾ? ಅಂತಾ ವಕೀಲರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ಡಿ.ಕೆ.ಶಿವಕುಮಾರ್, ಒಂದು ವರ್ಷದ ಬಳಿಕ ಅಧಿಕಾರಿಯೊಬ್ಬರು ನನ್ನ ಬಳಿ ಹೇಳಿಕೆ ಪಡೆದಿದ್ದಾರೆ. ಆದರೆ ಆ ಅಧಿಕಾರಿಯ ಹೆಸರು ನೆನಪಿಲ್ಲ ಎಂದು ಡಿ.ಕೆ. ಶಿವಕುಮಾರ್ ಉತ್ತರಿಸಿದ್ದಾರೆ.

ಆ ಬಳಿಕ ನಿಮ್ಮ ಮೊಬೈಲ್‌ನಲ್ಲಿ ಕಾಲ್ ರೆಕಾರ್ಡ್ ಆಗುತ್ತಾ? ಗಿರಿಧರ್ ರೈ ಕರೆ ಮಾಡಿರೋದು ನಿಮ್ಮದೇ ನಂಬರ್‌ಗೆ ಅಂತಾ ಏನು ದಾಖಲೆ ಇದೆ? ನೀವು ಯಾವ ಫೋನ್ ಬಳಸುತ್ತಿದ್ದೀರಿ? ಅಂತಾ ವಕೀಲರು ಡಿಕೆಶಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಐ ಫೋನ್ ಬಳಸುತ್ತಿದ್ದೇನೆ, ಕಾಲ್ ರೆಕಾರ್ಡ್ ಆಗುತ್ತಾ ಇಲ್ವಾ ಅನ್ನೋದರ ಬಗ್ಗೆ ನನಗೆ ಮಾಹಿತಿ ಇಲ್ಲ ಅಂತಾ ಹೇಳಿದ್ದಾರೆ.

ಬಳಿಕ ಆರೋಪಿ ಪರ ವಕೀಲರು, ನೀವು ಗಿರಿಧರ್ ರೈ ಬಿಜೆಪಿ ಕಾರ್ಯಕರ್ತ ಅನ್ನುವ ಕಾರಣಕ್ಕೆ ಸುಳ್ಳು ದೂರು ನೀಡಿದ್ದೀರಾ ಎಂಬುದಾಗಿ ಪ್ರಶ್ನೆ ಮಾಡಿದ್ದು, ಇದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಕರೆ ಮಾಡಿದ ವ್ಯಕ್ತಿಯ ಪೂರ್ವಾಪರ ಯಾವುದೂ ನನಗೆ ಗೊತ್ತಿಲ್ಲ. ಕರೆ ಮಾಡಿದ ವ್ಯಕ್ತಿ ಅವಾಚ್ಯ ಶಬ್ಧ ಬಳಸಿದ ಹಿನ್ನಲೆಯಲ್ಲಿ ದೂರು ನೀಡಿದ್ದೇನೆ ಅಂತಾ ಸ್ಪಷ್ಟಪಡಿಸಿದ್ದಾರೆ.

ಕೋರ್ಟ್‌ ವಿಚಾರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾನೂನಿಗೆ ತಲೆ ಬಾಗಿ ಕೋರ್ಟ್ ಗೆ ಹಾಜರಾಗಿದ್ದೇನೆ. ನನಗೆ ಕರೆ ಮಾಡಿದ ವ್ಯಕ್ತಿ ನನಗೆ ಬೈಯೋದು ಮಾತ್ರವಲ್ಲದೇ ಅಧಿಕಾರಿಗಳಿಗೂ ಅವ್ಯಾಚ್ಯವಾಗಿ ಬೈದಿದ್ದಾರೆ. ಈ ಕಾರಣಕ್ಕಾಗಿ ಅಧಿಕಾರಿಗಳು ದೂರು ನೀಡಿದ್ದಾರೆ‌‌. ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಅರಿವಿದೆ. ಈ ಸಮಸ್ಯೆ ನಿವಾರಿಸಲು ನಾನು ಪ್ರಯತ್ನ ಪಟ್ಟಿದ್ದೆ ಎಂದು ಹೇಳಿದರು.

 

Leave a Reply

comments

Related Articles

error: