ಕ್ರೀಡೆಪ್ರಮುಖ ಸುದ್ದಿವಿದೇಶ

ಐಪಿಎಲ್: ಆರ್ ಸಿಬಿ ಎದುರು ಸನ್‌ರೈಸರ್ಸ್‌ ಹೈದರಾಬಾದ್‌ ಗೆ 4 ರನ್ ಗಳ ಜಯ

ಅಬುಧಾಬಿ,ಅ.7-ಐಪಿಎಲ್ ಟೂರ್ನಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದುರು ಸನ್‌ರೈಸರ್ಸ್‌ ಹೈದರಾಬಾದ್‌ 4 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ. ಇದರಿಂದ ಅಂಕಪಟ್ಟಿಯ ಟಾಪ್‌ 2 ಒಳಗೆ ಕಾಲಿಡುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕನಸು ನುಚ್ಚು ನೂರಾಗಿದೆ.

142 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಆರಂಭಿಕ ಆಘಾತ ಅನುಭವಿಸಿತ್ತು. ಮೊದಲ ಓವರ್‌ನಲ್ಲೇ ನಾಯಕ ವಿರಾಟ್‌ ಕೊಹ್ಲಿ ಔಟಾದರೆ, ಡ್ಯಾನ್‌ ಕ್ರಿಸ್ಚಿಯನ್‌ (1) ಮತ್ತು ಶ್ರೀಕರ್‌ ಭರತ್ (12) ಕೂಡ ಬಹುಬೇಗ ಪೆವಿಲಿಯನ್‌ ಸೇರಿದ್ದರು. ಪರಿಣಾಮ ಚಾಲೆಂಜರ್ಸ್‌ ಆರಂಭದಿಂದಲೇ ಒತ್ತಡಕ್ಕೆ ಸಿಲುಕುವಂತ್ತಾಯಿತು.

ಆರ್‌ಸಿಬಿ ತಂಡಕ್ಕೆ ಆಸರೆಯಾಗಿ ನಿಂತಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ 25 ಎಸೆತಗಳಲ್ಲಿ 40 ರನ್‌ ಚೆಚ್ಚಿ ತಂಡಕ್ಕೆ ಬೇಗನೇ ಜಯ ತಂದುಕೊಡುವಂತಹ ಆಟವಾಡುತ್ತಿದ್ದರು. ಆದರೆ, ದೇವದತ್‌ ಪಡಿಕ್ಕಲ್ ಮಾಡಿದ ಎಡವಟ್ಟಿನ ಕಾರಣ ಮ್ಯಾಕ್ಸ್‌ವೆಲ್‌ ರನ್‌ಔಟ್‌ ಆದರು. ಅಲ್ಲಿಂದ ಪಂದ್ಯದ ದಿಕ್ಕೇ ಬದಲಾಗಿ ಚಾಲೆಂಜರ್ಸ್‌ ಸೋಲಿನ ಸುಳಿಗೆ ಸಿಲುಕಿತ್ತು.

ಇನ್ನು ಓಪನರ್‌ ದೇವದತ್‌ ಪಡಿಕ್ಕಲ್‌, ಅಚ್ಚರಿ ಎಂಬಂತ್ತೆ ಮಂದಗತಿಯ ಬ್ಯಾಟಿಂಗ್‌ ನಡೆಸಿದ್ದು ಚಾಲೆಂಜರ್ಸ್‌ ಸೋಲಿಗೆ ಮುಖ್ಯ ಕಾರಣಗಳಲ್ಲಿ ಒಂದಾಯಿತು. 52ಎಸೆತಗಳನ್ನು ಎದುರಿಸಿದ ದೇವದತ್‌ 4 ಫೋರ್‌ ಮಾತ್ರ ಗಳಿಸಿ 41 ರನ್‌ಗಳ ಕೊಡುಗೆ ಮಾತ್ರ ಕೊಟ್ಟರು.

ಗೆಲ್ಲಲು ಕೊನೆಯ 3 ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿದ್ದಾಗ ಮಿಸ್ಟರ್‌ 360 ಖ್ಯಾತಿಯ ಬ್ಯಾಟ್ಸ್‌ಮನ್‌ ಎಬಿ ಡಿ’ವಿಲಿಯರ್ಸ್‌ ಮನಮೋಹಕ ಸಿಕ್ಸರ್ ಬಾರಿಸಿದ್ದರು. ಆದರೆ, ಕೊನೆಯ ಎರಡು ಎಸೆತಗಳನ್ನು ಆಫ್‌ ಸ್ಟಂಪ್‌ನಿಂದ ಆಚೆ ಫುಲ್‌ ಲೆನ್ತ್‌ನಲ್ಲಿ ಎಸೆದ ಭುವನೇಶ್ವರ್‌ ಕುಮಾರ್‌ ಕೇವಲ ಒಂದು ರನ್‌ ಮಾತ್ರ ಕೊಟ್ಟು ಸನ್‌ರೈಸರ್ಸ್‌ ತಂಡ ಗೆಲುವಿನ ನಗೆ ಬೀರುವಂತೆ ಮಾಡಿದರು. ಎಬಿ ಡಿ’ವಿಲಿಯರ್ಸ್‌ 13 ಎಸೆತಗಳಲ್ಲಿ ಅಜೇಯ 19 ರನ್‌ ಬಾರಿಸಿದರೂ 20 ಓವರ್‌ಗಳಲ್ಲಿ ಆರ್‌ಸಿಬಿ 137/6 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ ತಂಡ ಆರಂಭದಲ್ಲೇ ಅಭಿಷೇಕ್‌ ಶರ್ಮಾ (13) ವಿಕೆಟ್‌ ಕಳೆದುಕೊಂಡರೂ, ಜೇಸನ್‌ ರಾಯ್‌ (44) ಮತ್ತು ಕೇನ್ ವಿಲಿಯಮ್ಸನ್ (31) ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ದೊಡ್ಡ ಮೊತ್ತದ ಕಡೆಗೆ ಮುಖ ಮಾಡಿತ್ತು. ಆದರೆ, ಆರ್‌ಸಿಬಿ ಸ್ಟಾರ್‌ ಬೌಲರ್‌ ಹರ್ಷಲ್‌ ಪಟೇಲ್‌ (33ಕ್ಕೆ 3) ನಿರ್ಣಾಯಕ ವಿಕೆಟ್‌ಗಳನ್ನು ಕಿತ್ತು ಆರ್‌ಸಿಬಿಗೆ ಮರಳಿ ಮೇಲುಗೈ ತಂದುಕೊಟ್ಟರು. ಅಚ್ಚರಿಯ ಪ್ರದರ್ಶನ ತಂದ ಡ್ಯಾನ್‌ ಕ್ರಿಸ್ಚಿಯನ್ (14ಕ್ಕೆ 2) ಎರಡು ವಿಕೆಟ್‌ಗಳನ್ನು ಕಿತ್ತು ಉತ್ತಮ ಸಾಥ್‌ ಕೊಟ್ಟರು. ಜಾರ್ಜ್‌ ಗಾರ್ಟನ್ ಮತ್ತು ಯುಜ್ವೇಂಸ್ರ ಚಹಲ್ ತಾಲಾ ವಿಕೆಟ್‌ ಪಡೆಯುವುದರೊಂದಿಗೆ ಎದುರಾಳಿಯನ್ನು 20 ಓವರ್‌ಗಳಲ್ಲಿ 141/7 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಯಿತು.

ಸ್ಕೋರ್‌ ವಿವರ:

ಸನ್‌ರೈಸರ್ಸ್‌ ಹೈದರಾಬಾದ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 141 ರನ್‌ (ಜೇಸನ್‌ ರಾಯ್ 44, ಕೇನ್‌ ವಿಲಿಯಮ್ಸನ್ 31, ಜೇಸನ್‌ ಹೋಲ್ಡರ್‌ 16; ಹರ್ಷಲ್‌ ಪಟೇಲ್ 33ಕ್ಕೆ 3, ಡ್ಯಾನ್‌ ಕ್ರಿಸ್ಚಿಯನ್‌ 14ಕ್ಕೆ 2).

ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್‌ (ದೇವದತ್ ಪಡಿಕ್ಕಲ್ 41, ಗ್ಲೆನ್‌ ಮ್ಯಾಕ್ಸ್‌ವೆಲ್ 40, ಎಬಿ ಡಿ’ವಿಲಿಯರ್ಸ್‌ 19*; ಭುವನೇಶ್ವರ್‌ ಕುಮಾರ್‌ 24ಕ್ಕೆ 1, ಸಿದ್ಧಾರ್ಥ್ ಕೌಲ್ 24ಕ್ಕೆ 1, ಜೇಸನ್‌ ಹೋಲ್ಡರ್‌ 27ಕ್ಕೆ 1, ಉಮ್ರಾನ್‌ ಮಲಿಕ್ 21ಕ್ಕೆ 1). ಪಂದ್ಯಶ್ರೇಷ್ಠ: ಕೇನ್ ವಿಲಿಯಮ್ಸನ್. (ಏಜೆನ್ಸೀಸ್, ಎಂ.ಎನ್)

 

 

Leave a Reply

comments

Related Articles

error: