ಕರ್ನಾಟಕಪ್ರಮುಖ ಸುದ್ದಿ

ಅ.28 ರಿಂದ ಹಾಸನಾಂಬ ಜಾತ್ರಾ ಮಹೋತ್ಸವ: ಈ ಬಾರಿಯೂ ದರ್ಶನಕ್ಕೆ ಭಕ್ತರಿಗೆ ಅವಕಾಶವಿಲ್ಲ

ಹಾಸನ,ಅ.8-ಹಾಸನ ಜಿಲ್ಲೆಯ ಪುರಾಣ ಪ್ರಸಿದ್ಧ ಹಾಸನಾಂಬ ದರ್ಶನಕ್ಕೆ ಈ ಬಾರಿಯೂ ಭಕ್ತರಿಗೆ ಅವಕಾಶವಿಲ್ಲ. ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅ.28 ರಿಂದ ನವೆಂಬರ್ 6ರವರೆಗೆ ಸರಳವಾಗಿ ಜಾತ್ರೆ ನಡೆಯಲಿದ್ದು, ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ.

ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆ ಮಹೋತ್ಸವದ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಚಿವರು, ಅ.28ರಿಂದ ನವೆಂಬರ್ 6ರ ತನಕ ಸರಳವಾಗಿ ಈ ಬಾರಿಯ ಜಾತ್ರೆ ನಡೆಯಲಿದೆ. ರಾಜ್ಯ ಸರ್ಕಾರ ದಸರಾ ಆಚರಣೆಯ ಮಾರ್ಗ ಸೂಚಿಯನ್ನು ಪ್ರಕಟಿಸಿದ್ದು, ಜೊತೆಗೆ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಸೋಂಕಿನ ದರ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯೂ ಸಹ ಹಾಸನಾಂಬ ನೇರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ತೀರ್ಮಾನಿಸಿರುವುದಾಗಿ ಹೇಳಿದರು.

ಹಾಸನಾಂಬ ಉತ್ಸವಕ್ಕೆ ಚಾಲನೆ ನೀಡಲು ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಗಳನ್ನು ಆಹ್ವಾನಿಸಲಾಗುವುದು ಎಂದು ಸಚಿವ ಕೆ. ಗೋಪಾಲಯ್ಯ ಹೇಳಿದರು.

ಅ.28 ರಿಂದ 10 ದಿನ ಹಾಸನಾಂಬ ದೇವಿಯ ಪೂಜೆ ವಿಧಿ ವಿಧಾನಗಳನ್ನು ಆನ್‍ಲೈನ್ ಮೂಲಕ ಪ್ರಸಾರ ಮಾಡಲಾಗುತ್ತದೆ. ಹಾಸನಾಂಬ ಉತ್ಸವದಲ್ಲಿ ಯಾವುದೇ ಸಂಪ್ರದಾಯಗಳು, ಆಚರಣೆಗಳು ಮತ್ತು ವಿಜೃಂಭಣೆಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ನಗರದಲ್ಲಿ ದೀಪಾಲಂಕಾರ ಹಾಗೂ ಪುಷ್ಪಲಂಕಾರ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷ ಪೂಜೆ ಹೊರತುಪಡಿಸಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿದೆ. ಕಳೆದ ಬಾರಿಯಂತೆ ನಗರದ 7 ರಿಂದ 8 ಕಡೆ ಎಲ್‌ಇಡಿ ದೊಡ್ಡ ಪರದೆ ಅಳವಡಿಸುವ ಮೂಲಕ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.

ಹಾಸನಾಂಬೆ ದೇವಾಲಯ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರಯುತ್ತದೆ. ಈ ಬಾರಿ ಅ.28 ರಂದು ಮಧ್ಯಾಹ್ನ 12 ಗಂಟೆಗೆ ಸಂಪ್ರದಾಯಿಕ ಪೂಜೆಗಳ ಬಳಿಕ ದೇವಾಲಯ ಬಾಗಿಲು ತೆರೆಯಲಿದೆ. ನ.6 ರಂದು ಮಧ್ಯಾಹ್ನ 12 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.

ಈ ದೇವಾಲಯವನ್ನು 12ನೇ ಶತಮಾನದಲ್ಲಿ ಕೃಷ್ಣಪ್ಪ ನಾಯಕ ಎಂಬ ಪಾಳೇಗಾರ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಆಶ್ಲೇಷ ಪೌರ್ಣಿಮೆಯ ಪ್ರಥಮ ಗುರುವಾರದಂದು ಬಾಗಿಲು ತೆರಯಲಾಗುತ್ತದೆ. ಬಲಿಪಾಡ್ಯಮಿ ದಿನ ಬಾಗಿಲು ಹಾಕಲಾಗುತ್ತದೆ.

ವರ್ಷಕ್ಕೊಮ್ಮೆ ಬಾಗಿಲು ತೆರೆಯುವುದರಿಂದ ಹಾಸನಾಂಬೆ ದೇವಿಯ ದರ್ಶನಕ್ಕೆ ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕೋವಿಡ್ ಪರಿಸ್ಥಿತಿ ಕಾರಣ ಕಳೆದ ವರ್ಷ ಭಕ್ತರ ನೇರ ದರ್ಶನಕ್ಕೆ ಅವಕಾಶವಿರಲಿಲ್ಲ. ಈ ಬಾರಿಯೂ ಸಹ ಭಕ್ತರು ದೇವಾಲಯ ಪ್ರವೇಶ ಮಾಡಿ ದರ್ಶನ ಪಡೆಯಲು ಅವಕಾಶವಿಲ್ಲ ಎಂದು ಹಾಸನ ಜಿಲ್ಲಾಡಳಿತ ಹೇಳಿದೆ.

ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ನಾಲ್ಕು ದಿನಗಳ ಹಿಂದೆ 0.90 ಇದ್ದು ಇದೀಗ 1.27 ಕ್ಕೆ ಏರಿಕೆಯಾಗಿದೆ. ಆದ್ದರಿಂದ ಹಾಸನಾಂಬ ಉತ್ಸವ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

Leave a Reply

comments

Related Articles

error: