ಮೈಸೂರು

ಹರಿಯಾಣ ಮುಖ್ಯಮಂತ್ರಿ ವಜಾ ಮಾಡುವಂತೆ ಒತ್ತಾಯಿಸಿ, ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಖಂಡಿಸಿ ಪ್ರತಿಭಟನೆ

ಮೈಸೂರು,ಅ.8:- ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ  ‌ ನೇತೃತ್ವದಲ್ಲಿ ಸುಮಾರು 30 ಜನ ರೈತರು ಉತ್ತರ ಪ್ರದೇಶದಲ್ಲಿ ರೈತರ ಮೇಲೆ ವಾಹನ ಹತ್ತಿಸಿದ ಪ್ರಕರಣ ಖಂಡಿಸಿ ಹಾಗೂ ಪ್ರಚೋದಿಸುವ ಹೇಳಿಕೆ ನೀಡುತ್ತಿರುವ ಹರಿಯಾಣ ಮುಖ್ಯಮಂತ್ರಿ ಅವರನ್ನು ವಜಾಮಾಡುವಂತೆ ಒತ್ತಾಯಿಸಿ ನಗರದ ಜಲದರ್ಶಿನಿ ಅತಿಥಿ ಗೃಹದ ಬಳಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯ ಬಳಿ ರೈತರು ಪ್ರತಿಭಟನೆ ನಡೆಸಿದರು.

ರೈತರು ಕೇಂದ್ರ ಸಚಿವರನ್ನು ಕೂಡಲೇ ಬಂಧಿಸಿ, ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ.  ಬಿಜೆಪಿ ಸರ್ಕಾರ ತೊಲಗಲಿ   ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹರಿಸಿ‌ ಕೊಲೆ‌ ಮಾಡಿದ ಆರೋಪಿಗಳನ್ನು‌ ಬಂಧಿಸಬೇಕು. ಹಿಂಸೆಗೆ ಪ್ರಚೋದನೆ ನೀಡಿದ ಹರಿಯಾಣ ರಾಜ್ಯದ ಮುಖ್ಯಮಂತ್ರಿಗೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಬಡಗಲಪುರ ನಾಗೇಂದ್ರ  ಮಾತನಾಡಿ ಬಿಜೆಪಿ ಹಾಗೂ ಆರ್.ಎಸ್.ಎಸ್‌ ನಿಂದ ಬಂದವರು ಬಹಳ ಒಳ್ಳೆಯವರು ಎಂದು‌ ತಿಳಿದುಕೊಂಡಿದ್ದಾರೆ. ಆದರೆ ಇದು ಸುಳ್ಳು. ಕೇಂದ್ರ ಸರ್ಕಾರದಲ್ಲಿ ಇರುವ ಸಚಿವರು‌ ಗೂಂಡಾಗಳು. ಕೇಂದ್ರ ಗೃಹ ಮಂತ್ರಿಗಳ ಮೇಲೆ ಕೊಲೆ ಆರೋಪ ಇದೆ.  ಪ್ರಧಾನ ಮಂತ್ರಿಗಳು ಇಲ್ಲಿಯವರೆಗೂ ಉತ್ತರ ಪ್ರದೇಶದ ಘಟನೆ ನಡೆದ ಮೇಲೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಲ್ಲಿ ಅವರ ಕೈವಾಡ ಇರಬಹುದು ಎಂದು ಅನುಮಾನ ಮೂಡಿಸುತ್ತದೆ ಎಂದರು.

 

ಕೇಂದ್ರ ಮಂತ್ರಿಯನ್ನು ಸಂಪುಟದಿಂದ ತೆಗೆಯಬೇಕು ಹಾಗೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಅಜಯ್ ಮಿಶ್ರಾ ರನ್ನು ಬಂಧಿಸಬೇಕು. ಹರಿಯಾಣ ರಾಜ್ಯದ ಮುಖ್ಯಮಂತ್ರಿ ಅವರನ್ನು ರಾಜ್ಯಪಾಲರು ಕೂಡಲೇ ವಜಾ ಮಾಡಬೇಕು ಎಂದು‌ ಒತ್ತಾಯಿಸಿದರು.

ದಸರಾ ಮುಕ್ತಾಯದ ನಂತರ ರಾಜ್ಯದ ಎಲ್ಲಾ ಬಿಜೆಪಿ ಸಂಸದರ ಕಚೇರಿಯ ಬಳಿ‌ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಗುವುದು. ಹಾಗೂ ರಾಜ್ಯದ ಯಾವುದೇ ಗ್ರಾಮದಲ್ಲಿ ಕೇಂದ್ರ ಸಚಿವರು ಸಂಚಾರ ಮಾಡುವಾಗ ಕಪ್ಪು ಬಾವುಟವನ್ನು ಪ್ರದರ್ಶನ ಮಾಡಲಿದ್ದೇವೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ  ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್, ಪ್ರಶಾಂತ್ ಗೌಡ, ಮರಂಕಯ್ಯ, ವರುಣ ಮಹೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: