ಕರ್ನಾಟಕದೇಶಪ್ರಮುಖ ಸುದ್ದಿ

ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾರನ್ನು‌ ಭೇಟಿಯಾದ ಸಿಎಂ ಬೊಮ್ಮಾಯಿ: ಡಿಎಪಿ, ಪೊಟ್ಯಾಷ್ ಗೊಬ್ಬರ ಪೂರೈಕೆಗೆ ಬೇಡಿಕೆ

ನವದೆಹಲಿ/ಬೆಂಗಳೂರು,ಅ.8- ಕೇಂದ್ರದ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ‌ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ.

ದೆಹಲಿಯಲ್ಲಿ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಿ ರಾಜ್ಯದಲ್ಲಿನ ರೈತರಿಗೆ ಅನುಕೂಲ ಕಲ್ಪಿಸಲು ಹಿಂಗಾರು ಹಂಗಾಮಿಗೆ 32,000 ಟನ್ ಡಿಎಪಿ ಗೊಬ್ಬರ ಪೂರೈಸುವಂತೆ ಮನವಿ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಎಪಿ ಮಾತ್ರವಲ್ಲದೆ, ರಾಜ್ಯಕ್ಕೆ 10,000 ಟನ್ ಪೊಟ್ಯಾಷ್ ಗೊಬ್ಬರದ ಬೇಡಿಕೆ ಇದೆ. ಅದರ ಪೂರೈಕೆಗೂ ಕ್ರಮ‌ ಕೈಗೊಳ್ಳುವಂತೆ ಕೋರಲಾಗಿದೆ. ಬೇಡಿಕೆ ಈಡೇರಿಸುವ ಭರವಸೆ ದೊರೆತಿದೆ. ಸದ್ಯ ರಾಜ್ಯದಲ್ಲಿ ಯುರಿಯಾ ಗೊಬ್ಬರದ ಕೊರತೆ ಇಲ್ಲ. ಕೊರತೆ ಇರುವ ಗೊಬ್ಬರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನ ಯಶಸ್ವಿ ಅಗಿರುವ ಬಗ್ಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಶೇ.90ರಷ್ಟು ಜನತೆಗೆ ಮೊದಲ ಹಂತದ ಲಸಿಕೆಯನ್ನೂ, ಶೇ.70ರಷ್ಟು ಅರ್ಹರಿಗೆ ಎರಡನೇ ಹಂತದ ಲಸಿಕೆ ನೀಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಈಗ ರಾಜ್ಯದಲ್ಲಿ 51 ಲಕ್ಷ ಡೋಸ್ ಲಸಿಕೆ ಸಂಗ್ರಹ ಇದೆ ಎಂದೂ ಅವರು ವಿವರಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಜರಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: