ಕರ್ನಾಟಕಪ್ರಮುಖ ಸುದ್ದಿ

ಸ್ವೀಕೃತ ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಲು ಸೂಚನೆ

ರಾಜ್ಯ(ಹಾಸನ) ಅ.9;- ಕಂದಾಯ ಗ್ರಾಮಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಮುಂದಾಗಬೇಕು ಹಾಗೂ ಎಲ್ಲಾ ಸ್ವೀಕೃತ ಅರ್ಜಿಗಳ ವಿಲೇವಾರಿಗೆ ತ್ವರಿತ ಕ್ರಮವಹಿಸಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳೊಂದಿಗೆ ಆನ್‍ಲೈನ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು ಕಂದಾಯ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದ ಭೂಮಿ ದಾಖಲೆಗಳು, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು, ಪಡಿತರ ವಿತರಣೆ, ಬೆಳೆ ಹಾನಿ, ವಸತಿ, ಸ್ಮಶಾನ ಭೂಮಿ, ಮತ್ತಿತರ ವಿಷಯಗಳ ಕುರಿತು ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ವಿಲೇವಾರಿಗೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ನಡೆಸಿದಾಗ ಬಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವೆ ಇರುವ ಭೂಮಿ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಲು ಕ್ರಮವಹಿಸಬೇಕು ಎಂದರು.

ಸಕಾಲ ಯೋಜನೆಯಡಿ ಸ್ವೀಕೃತವಾಗುವ ಅರ್ಜಿಗಳನ್ನು ವಿಲೇವಾರಿಗೆ ನಿಗಧಿತ ಸಮಯದೊಳಗೆ ಕ್ರಮವಹಿಸಿ ಎಂದರಲ್ಲದೆ ಸರ್ಕಾರಿ ಭೂಮಿಯ ಸರ್ವೇಗಳನ್ನು ಹೆಚ್ಚಾಗಿ ಮಾಡಿಸುವಂತೆ ಅಧಿಕಾರಿಗಳಿಗೆ ಪ್ರಧಾನ ಕಾರ್ಯದರ್ಶಿ ಅವರು ಸೂಚಿಸಿದರು.

ಕೋವಿಡ್ ಲಸಿಕೆ ಹಾಕುವಲ್ಲಿ ಯಾವುದೇ ರೀತಿಯಾಗಿ ಬಾಕಿ ಉಳಿಯದಂತೆ ಸೂಕ್ತ ಗಮನಹರಿಸುವಂತೆ ತಿಳಿಸಿದರಲ್ಲದೆ ಹಾಗೂ ಕೋವಿಡ್‍ನಿಂದ ಮೃತಪಟ್ಟವರಿಗೆ ಪರಿಹಾರಧನ ವಿತರಣೆ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ಪರಿಶೀಲಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತರಾಜಾರಾಂ, ಉಪವಿಭಾಗಾಧಿಕಾರಿಗಳಾದ ಪ್ರತೀಕ್ ಬಾಯಲ್, ಬಿ.ಎ ಜಗದೀಶ್, ವಿಶೇಷ ಭೂ ಸ್ವಾಧೀನಾಧಿಕಾರಿ ಹೇಮಲತಾ, ತಹಸೀಲ್ದಾರ್‍ಗಳು ಹಾಗೂ ಮತ್ತಿತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: