ಮೈಸೂರು

ಜಿಲ್ಲಾ ಕೋರ್ಟ್ ಆವರಣದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಶಿಕ್ಷೆ ಪ್ರಮಾಣ ಕಾಯ್ದಿರಿಸಿ ಮೂವರೂ ದೋಷಿಗಳೆಂದ ನ್ಯಾಯಾಲಯ

ಮೈಸೂರು,ಅ.9:- ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಕ್ಕೆ ಸಂಬಂಧಿಸಿದಂತೆ ಅಲ್ ಖೈದಾ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ತಮಿಳುನಾಡಿನ ಬೇಸ್ ಮೂವ್ ಮೆಂಟ್ ಸಂಘಟನೆಗೆ ಸೇರಿದ ಮೂವರನ್ನು ದೋಷಿಗಳೆಂದು ರಾಷ್ಟ್ರೀಯ ತನಿಖಾ ತಂಡದ ವಿಶೇಷ ನ್ಯಾಯಾಲಯ ಘೋಷಿಸಿದ್ದು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.

ನೈಸರ್ ಅಬ್ಬಾಸ್ ಅಲಿ, ಸಂಸುಲ್ ಕರೀಂ ರಾಜ, ಮತ್ತು ದಾವೂದ್ ಸುಲೈಮನ್ ದೋಷಿಗಳಾಗಿದ್ದು ಇವರೆಲ್ಲರೂ ಹಾಲಿ ಪರಪ್ಪನ ಅಗ್ರಹಾರದ  ಜೈಲಿನಲ್ಲಿದ್ದಾರೆ.

2016ರ ಆಗಸ್ಟ್ 1ರಂದು ಮಧ್ಯಾಹ್ನ ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಾಲ್ಕನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹೊಂದಿಕೊಂಡಂತಿರುವ ಶೌಚಾಲಯದಲ್ಲಿ  ಕುಕ್ಕರ್ ಬಾಂಬ್ ಸ್ಪೋಟವಾಗಿತ್ತು. ನ್ಯಾಯಾಲಯಕ್ಕೆ ಹೊಂದಿಕೊಂಡಂತೆ ರೈಲ್ವೆ ಟ್ರ್ಯಾಕ್ ಇದ್ದು, ಚಾಮರಾಜನಗರ-ತಿರುಪತಿ ಎಕ್ಸ್‌ಪ್ರೆಸ್ ರೈಲು ಬರುವ ವೇಳೆ ಸ್ಫೋಟಗೊಳ್ಳುವಂತೆ ಬಾಂಬ್ ಇರಿಸಲಾಗಿತ್ತಾದರೂ, ಅದೃಷ್ಟ ವಶಾತ್ ಆ ವೇಳೆಗೆ ರೈಲು ಬಂದಿರಲಿಲ್ಲ. ಈ ರೈಲು ಬರುವ ವೇಳೆಗೆ ರೈಲ್ವೆ ಗೇಟ್ ಹಾಕಲಾಗುತ್ತದೆ. ಆ ವೇಳೆ ನ್ಯಾಯಾಲಯದ ಶೌಚಾಲಯಕ್ಕೆ ಹೊಂದಿಕೊಂಡಂತಿರುವ ಕಾಂಪೌಂಡ್‌ಗೆ ಪಕ್ಕದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.   4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ಹಾಗೂ ವಕೀಲರು ಸಾಮಾನ್ಯವಾಗಿ ಈ ಶೌಚಾಲಯಕ್ಕೆ ಅನತಿ ದೂರದಲ್ಲಿ ನಿಂತಿರುತ್ತಾರೆ. ಹೀಗಾಗಿ ಬಾಂಬ್ ಸ್ಫೋಟಗೊಂಡಾಗ ಭಾರೀ ಪ್ರಮಾಣದ ಪ್ರಾಣಹಾನಿ ಉಂಟಾಗಬೇಕೆಂಬುದು ದುಷ್ಕರ್ಮಿಗಳ ಯೋಜನೆ ಆಗಿತ್ತು. ಆದರೆ  ಅದೃಷ್ಟವಶಾತ್ ಬಾಂಬ್ ಸ್ಪೋಟಗೊಂಡ ವೇಳೆ ಶೌಚಾಲಯದ ಬಳಿ ವಕೀಲರಾಗಲೀ, ಕಕ್ಷಿದಾರರಾಗಲೀ ಇರಲಿಲ್ಲ. ಜೊತೆಗೆ ಆ ಸಮಯಕ್ಕೆ ರೈಲು ಬಾರದ ಕಾರಣ ರೈಲ್ವೆ ಗೇಟನ್ನು ಹಾಕದೇ ಇದ್ದುದರಿಂದ ಕೋರ್ಟ್ ಕಾಂಪೌಂಡ್‌ಗೆ ಹೊಂದಿಕೊಂಡಂತಿರುವ ರಸ್ತೆಯಲ್ಲಿ ವಾಹನಗಳೂ ಕೂಡ ಸಾಲುಗಟ್ಟಿ ನಿಂತಿರಲಿಲ್ಲ.

ಆದರೆ ಸ್ಫೋಟ ನಡೆದ ವೇಳೆ ರೈಲ್ವೆ ಗೇಟ್ ದಾಟಿ ತೆರಳುತ್ತಿದ್ದ ಶಾಲಾ ಮಕ್ಕಳನ್ನು ಕರೆದೊಯ್ಯುವ ವ್ಯಾನ್‌ನಲ್ಲಿದ್ದ ವಿದ್ಯಾರ್ಥಿನಿಗೆ ಈ ಬಾಂಬ್ ಸ್ಫೋಟದ ಸಣ್ಣ ಆವಶೇಷ ತಗುಲಿ ಸಣ್ಣ ಪ್ರಮಾಣದ ಗಾಯವಾಗಿತ್ತು.   ಶೌಚಾಲಯದ ಬಳಿ ಇದ್ದ ವೆಂಕಟೇಶ್ ಎಂಬಾತನ ಕಿವಿಗೆ ಶೌಚಾಲಯದ ಕಿಟಕಿ ಗಾಜಿನ ಚೂರು ತಗುಲಿ ಸಣ್ಣ ಪ್ರಮಾಣದಲ್ಲಿ ಗಾಯವಾಗಿದ್ದನ್ನು ಹೊರತುಪಡಿಸಿದರೆ, ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ಅಂತ್ಯಕ್ರಿಯೆ ಅಂದೇ ಮೈಸೂರಿನಲ್ಲಿ ನಡೆದಿದ್ದರಿಂದ ಹಲವಾರು ಗಣ್ಯಾತಿಗಣ್ಯರು ಮೈಸೂರಿಗೆ ಆಗಮಿಸಿದ್ದರು. ಈ ವೇಳೆಯಲ್ಲೇ ಬಾಂಬ್ ಸ್ಫೋಟಿಸಿ ಗಮನ ಸೆಳೆಯಬೇಕು ಎನ್ನುವುದೂ ಕೂಡ ದುಷ್ಕರ್ಮಿಗಳ ಲೆಕ್ಕಾಚಾರವಾಗಿತ್ತು ಎಂದು ಆ ಸಂದರ್ಭದಲ್ಲಿ ಹೇಳಲಾಗಿತ್ತು.

ನ್ಯಾಯಾಲಯದ ಆವರಣದಲ್ಲಿ ನಡೆದ ಸ್ಫೋಟದಿಂದ ಸಾಂಸ್ಕೃತಿಕ ನಗರಿ ಮೈಸೂರು ಮಾತ್ರವಲ್ಲದೆ ಇಡೀ ರಾಜ್ಯವೇ ತಲ್ಲಣಗೊಂಡಿತ್ತು. ಈ ಹಿಂದೆ ಕೇರಳ ಮತ್ತು ಆಂಧ್ರ ನ್ಯಾಯಾಲಯಗಳಲ್ಲಿ ಸ್ಫೋಟಗಳು ಸಂಭವಿಸಿದ್ದರಿಂದ ಅಲ್ಲಿನ ಪೊಲೀಸ್ ಅಧಿಕಾರಿ ಗಳೂ ಕೂಡ ಮೈಸೂರು ನ್ಯಾಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸ್ಫೋಟದ ಹಿಂದೆ ಉಗ್ರವಾದಿಗಳ ಕೈವಾಡವಿರಬಹುದು ಎಂದು ಶಂಕಿಸಲಾಗಿತ್ತು. ಕೇರಳದ ಕೊಲಂ ಮತ್ತು ಆಂಧ್ರದ ಚಿತ್ತೂರು ನ್ಯಾಯಾಲಯಗಳಲ್ಲಿ ನಡೆದಿದ್ದ ಸ್ಫೋಟಕ್ಕೂ, ಮೈಸೂರಿನಲ್ಲಿ ನಡೆದಿದ್ದ ಸ್ಫೋಟಕ್ಕೂ ಸಾಮ್ಯತೆ ಇತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ತನಿಖಾ ತಂಡಕ್ಕೆ ಜವಾಬ್ದಾರಿಯನ್ನು ವಹಿಸಲಾಗಿತ್ತು. ಎನ್‌ಐಎ ಅಧಿಕಾರಿಗಳು ಮೈಸೂರು ನ್ಯಾಯಾಲಯದ ಸ್ಫೋಟದ ಬಗ್ಗೆ ಅಂದಿನ ಕೇಂದ್ರ ಗೃಹ ಸಚಿವ ರಾಜಾನಾಥ್ ಸಿಂಗ್ ಅವರಿಗೆ ವರದಿ ಸಲ್ಲಿಸಿದ್ದರು. ಕೊನೆಗೂ ಆರೋಪಿಗಳನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು, ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರನ್ನೂ ದೋಷಿಗಳೆಂದು ಘೋಷಿಸಿ, ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: