ಕರ್ನಾಟಕಪ್ರಮುಖ ಸುದ್ದಿ

ಐತಿಹಾಸಿಕ ಗತವೈಭವ ಮೆಲಕು ಹಾಕುವ ಗೊಂಬೆಗಳ ಕಲರವ

ರಾಜ್ಯ(ಮಂಡ್ಯ),ಅ.11:- ಮೈಸೂರು ಕಲೆಗಳ ತವರೂರು. ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಸಂಗಮ. ಅಂದಿನ ಮೈಸೂರಿನ ಸಾಂಸ್ಕೃತಿಕ ರಾಜಧಾನಿ ಶ್ರೀರಂಗಪಟ್ಟಣ.

ಮೈಸೂರಿನ ದಸರಾ ಬಂತೆಂದರೆ ನಾಡಿನ ಜನರಿಗೆ ಸಂಭ್ರಮ, ಸಡಗರ ರಾಜಮಹಾರಾಜರ ಗತಕಾಲದ ಆಡಳಿತದ ಮೆಲಕು, ಗೊಂಬೆಗಳ ಪ್ರದರ್ಶನ, ಕಲೆ, ಸಾಹಿತ್ಯ, ಸಂಗೀತ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ರಸದೌತಣದ ಸಂಭ್ರಮ. ಇಂತಹ ಗತವೈಭವವನ್ನು, ಇತಿಹಾಸದ ಪರಂಪರೆಯನ್ನು ಮೆಲುಕು ಹಾಕುವ 600 ಕ್ಕೂ ಹೆಚ್ಚು ಗೊಂಬೆಗಳ ಕಲರವವನ್ನು ಕಣ್ತುಂಬಿಸಿಕೊಳ್ಳಲು ಶ್ರೀರಂಗಪಟ್ಟಣದ ಹಳೆಯ ಅಂಚೆಕಛೇರಿಯ ಜ್ಞಾನ ಮಂದಿರದಲ್ಲಿ ಸಾರ್ವಜನಿಕರ ವಿಕ್ಷಣೆಗಾಗಿ ವಿದ್ವಾನ್ ಕೃಷ್ಣಭಟ್ಟರು ಉಚಿತವಾಗಿ ಕಳೆದ 10 ವರ್ಷಗಳಿಂದ ನಡೆಸುತ್ತಾ ಬಂದಿರುತ್ತಾರೆ.

ನಾಡಿನ ಪರಂಪರೆಯನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಉದ್ದೇಶದಿಂದ ಮೈಸೂರಿನ ಅರಮನೆಯ ಸಂಪ್ರದಾಯದಂತೆ ರಾಜಪರಿವಾರ, ಗಣಪತಿ ವಾದ್ಯವೃಂದ, ಗೌರಿಪೂಜೆ, ಗಿರಿಜಾಕಲ್ಯಾಣ, ಭೋಜನಾ ಶಾಲೆ, ಚನ್ನಯ್ಯ ಕುಸ್ತಿ ಅಖಾಡ, ತಿರುಪತಿಯ ಕುಂಭಕರಣ, ವಿಷ್ಣುವಿನ ದಶಾವತಾರ, ಯಾಗಶಾಲೆ, ದಸರಾ ಉತ್ಸವ, ವಿಶೇಷವಾಗಿ ರಾಜಸ್ತಾನಿ ವಾದ್ಯವೃಂದ, ಕರಕುಶಲ ಪ್ರದರ್ಶನ, ಅಪರೂಪದ ಮಂಗಲ ಕೃಷ್ಣನ್ ಅವರ ಪ್ರಾಣಿಸಂಗ್ರಹಾಲಯ ಹೀಗೆ 600 ಕ್ಕೂ ಹೆಚ್ಚು ಗತವೈಭವವನ್ನು ಮೆಲುಕು ಹಾಕುವ ಹಾಗೂ ಜೊತೆಗೆ ತಾವೇ ಸ್ವತಃ ನಿರ್ಮಿಸಿರುವ ಕರಕುಶಲ ವಿನ್ಯಾಸಗಳ ಮಾದರಿಯನ್ನು ಈ ಗೊಂಬೆಗಳ ಕಲರವದಲ್ಲಿ ಕಾಣಬಹುದಾಗಿದೆ.

ಶ್ರೀರಂಗಪಟ್ಟಣದಲ್ಲಿರುವ ಜ್ಞಾನಮಂದಿರದ ಗೊಂಬೆಗಳ ಕಲರವಕ್ಕೆ ಉಚಿತ ಪ್ರವೇಶವಿದ್ದು, ಈ ತಿಂಗಳ 20 ರ ವರೆಗೂ ಸಾರ್ವಜನಿಕರ ಪ್ರದರ್ಶನಕ್ಕೆ ಲಭ್ಯವಿದೆ, ಬೆಳಿಗ್ಗೆ 10ರಿಂದ 1ರವರೆಗೆ ಹಾಗೂ ಸಂಜೆ 6  ರಿಂದ 10  ರವರೆಗೆ ಪ್ರದರ್ಶನಕ್ಕೆ ಲಭ್ಯವಿರುತ್ತದೆ. ಇದರ ಉಸ್ತುವಾರಿಯನ್ನು ವಿದ್ವಾಂಸರಾದ ಕೃಷ್ಣಭಟ್ಟ ದಂಪತಿಗಳು ವಹಿಸಿಕೊಂಡಿದ್ದು, ಸಾರ್ವಜನಿಕರಿಗೆ ಪ್ರತಿಯೊಂದು ಗೊಂಬೆಗಳ ಇತಿಹಾಸ ಹಾಗೂ ಪರಂಪರೆಯನ್ನು ಹೇಳಿಕೊಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುತ್ತದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: