ಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭ್ರಷ್ಟಾಚಾರದ ಪರನಾ , ಯಾರನ್ನು ಮೆಚ್ಚಿ ಸೋದಕ್ಕೆ : ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಅ.11:- ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭ್ರಷ್ಟಾಚಾರದ ಪರನಾ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು  ಐಟಿ ದಾಳಿ ಸಂಬಂಧ ಪ್ರತಿಪಕ್ಷಗಳ ರಾಜಕೀಯ ವಾಸನೆ ಆರೋಪದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಯಾರನ್ನು ಮೆಚ್ಚಿಸಲು‌ ಈ ರೀತಿ ಮಾತನಾಡುತ್ತಿದ್ದೀರಾ?   ವೀರಶೈವ ಸಮುದಾಯ ಪ್ರಜ್ಞಾವಂತ ಸಮಾಜ. ಅವರನ್ನು ದಡ್ಡರು ಅಂದುಕೊಂಡರೆ ನಿಮ್ಮಂತಹ ದಡ್ಡರು ಯಾರು ಇಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಷ್ಟು ದಡ್ಡರು ಯಾರು ಇಲ್ಲ. ಯಡಿಯೂರಪ್ಪ ಅವರೇ ಇದನ್ನು ಸ್ವಾಗತ ಮಾಡಿದ್ದಾರೆ ? ನಿಮ್ಮದೇನು ಎಂದು ಪ್ರಶ್ನಿಸಿದರು.

ಯಡಿಯೂರಪ್ಪನವರೇ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅಂದಿದ್ದಾರೆ. ಅಂದ ಮೇಲೆ ರಾಜಕೀಯ ವಾಸನೆ ಏನು. ಜನ ನಗದೇ ಏನು ಮಾಡುತ್ತಾರೆ. ಇಂತಹ ಬೂಟಾಟಿಕೆ ಹೇಳಿಕೆ ಬಗ್ಗೆ ಜನ ನಗುತ್ತಾರೆ. ಹೇಳಿಕೆ ಕೊಡುವಾಗ ಎಚ್ಚರ ವಹಿಸಿ. ಐಟಿ, ಇಡಿ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಸಲಹೆ ನೀಡಿದರು.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತರ ಮೇಲೆ ಐಟಿ ರೈಡ್  ಆಗಿರುವುದು ರಾಜಕೀಯ ಉದ್ದೇಶದಿಂದ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ  ತಿರುಗೇಟು ನೀಡಿದ ಅವರು ಈ ಹಿಂದೆ ಯಡಿಯೂರಪ್ಪ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನೀವೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೀರಿ. ಈಗ ಇದ್ದಕ್ಕಿದ್ದ ಹಾಗೆಯೇ ಅವರ ಪರ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಈಗ ಯಡಿಯೂರಪ್ಪನವರ ಮೇಲೆ ಹುಸಿ ಪ್ರೇಮ ತೋರಿಸುತ್ತಿದ್ದೀರಿ. ಇಂತಹ ಹೇಳಿಕೆಗಳಿಂದ ಯಾರಿಗೂ ಲಾಭ ಇಲ್ಲ. ಕಾಂಗ್ರೆಸ್ ಗೂ ಲಾಭ ಇಲ್ಲ, ಜೆಡಿಎಸ್ ಗೂ ಲಾಭ ಇಲ್ಲ, ಬಿಜೆಪಿಗೆ ನಷ್ಟ ಅಂತೂ ಇಲ್ವೇ ಇಲ್ಲ.   ಸ್ವತಃ ಐಟಿ ರೈಡ್ ಅನ್ನು ಯಡಿಯೂರಪ್ಪ ನವರೇ ಸ್ವಾಗತಿಸಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಬೇಡ‌. ಹಾಗಾದರೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭ್ರಷ್ಟಾಚಾರದ ಪರನಾ ಎಂದು ಪ್ರಶ್ನಿಸಿದರು.  ಸಿದ್ದರಾಮಯ್ಯ ಭ್ರಷ್ಟಾಚಾರದ ಪರವೋ ವಿರುದ್ಧವೋ ಸ್ಪಷ್ಟಪಡಿಸಲಿ. ಜಿಂದಾಲ್‌ ವಿಚಾರ ಬಂದಾಗಲೂ ವಿರೋಧ ಪಕ್ಷದವರು ಧ್ವನಿ ಎತ್ತಲಿಲ್ಲ. ಈಗ ದಾಳಿ ನಡೆದರೆ ದಾಳಿಯನ್ನೇ ರಾಜಕೀಯ ಎಂದು ಆರೋಪ ಮಾಡುತ್ತೀರಾ? ನೀವು ಭ್ರಷ್ಟ ರ ಪರವಾ ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದ ಕುರಿತು ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ನಡೆದಿರುವ ಬೃಹತ್ ನೀರಾವರಿ ಹಗರಣಕ್ಕೆ ಸಂಬಂಧಿಸಿದಂತೆ ಐಟಿ ದಾಳಿ ನಡೆದಿದೆ. ಇದೇ ವಿಚಾರ ಕುರಿತು ಮಾಜಿ ಸಿಎಂ ಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ರಾಜಕೀಯದ ವಾಸನೆ ಬರುತ್ತಿದೆ ಎಂದಿದ್ದಾರೆ. ಇವರಿಬ್ಬರೂ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು, ನಿರಂತರ ಟೀಕೆಗಳನ್ನು ಮಾಡಿದ್ದರು. ಆದರೀಗ ಯಡಿಯೂರಪ್ಪ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಯಡಿಯೂರಪ್ಪ ಅವಧಿಯ ಆಡಳಿತವನ್ನು ಹೊಗಳುತ್ತಿದ್ದಾರೆ. ಯಡಿಯೂರಪ್ಪ ಪರ ಮಾತನಾಡುವ ಮೂಲಕ ವೀರಶೈವ ಸಮುದಾಯದ ಬೆಂಬಲ ಗಿಟ್ಟಿಸಲು ಹೊರಟಿದ್ದಾರೆ‌. ಆದರೆ ವೀರಶೈವ ಸಮುದಾಯ ಬುದ್ದಿವಂತ ಸಮುದಾಯವಾಗಿದೆ. ಇವರ ಮಾತಿಗೆ ವೀರಶೈವ ಸಮುದಾಯ ಮರುಳಾಗುವುದಿಲ್ಲ‌. ಯಡಿಯೂರಪ್ಪ ಅವರೇ ಐಟಿ ದಾಳಿಯನ್ನು ಸ್ವಾಗತಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ. ನಿಮ್ಮ ಮಾತುಗಳನ್ನು ಕೇಳಿ ಜನರು ನಗುತ್ತಿದ್ದಾರೆ. ಪ್ರತಿಪಕ್ಷದ ನಾಯಕರು ಭ್ರಷ್ಟಾಚಾರದ ಪರವೋ, ವಿರುದ್ದವೋ. ಯಾರ ಪರವಾಗಿದ್ದೀರಿ ನೀವು ಎಂಬುದನ್ನು ಸ್ಪಷ್ಟಪಡಿಸಿ ಎಂದರು.

ನನ್ನಂಥ ಪ್ರಾಮಾಣಿಕ ಇನ್ನೊಬ್ಬ ಇಲ್ಲ ಅಂತಾ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳುತ್ತಾರೆ. ಆದರೆ, ರಮೇಶ್ ಕುಮಾರ್ ನಂಥ ಭ್ರಷ್ಟ ಇನ್ನೊಬ್ಬ ಇಲ್ಲ. ಅರಣ್ಯ ಭೂಮಿಯನ್ನೆ ನುಂಗಿದ ಭ್ರಷ್ಟ ರಮೇಶ್ ಕುಮಾರ್. ಇಂಥ ರಮೇಶ್ ಕುಮಾರ್ ಯಶಸ್ವಿನಿ ಯೋಜನೆ ಮುಚ್ಚಿ ರೈತರಿಗೆ ಅನ್ಯಾಯ ಮಾಡಿದರು ಎಂದು ಕಿಡಿಕಾರಿದರು.

ತಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ರಾಷ್ಟ್ರ ರಾಜಕಾರಣಕ್ಕೆ ಬರ್ತಿನಿ ಎಂಬ ಧೈರ್ಯ ತೋರಬೇಕಿತ್ತು. ಆದರೆ, ಸಿದ್ದರಾಮಯ್ಯ ರಾಜಕೀಯ ಪುಕ್ಕಲತನ ಪ್ರದರ್ಶನ ಮಾಡುತ್ತಿದ್ದಾರೆ. ಮೋದಿ ಅವರ ಬಗ್ಗೆ ಲಘುವಾಗಿ ಮಾತಾಡುವ ಸಿದ್ದರಾಮಯ್ಯ ಗೆ ರಾಷ್ಟ್ರ ರಾಜಕಾರಣ ಹೋಗಲು ಪುಕ್ಕಲತನವಿದೆ ನೀವು ಹೇಗೆ ಮೋದಿ ಅವರ ಬಗ್ಗೆ ಲಘುವಾಗಿ ಮಾತಾಡಲು ಸಮರ್ಥರು, ಸಿದ್ದರಾಮಯ್ಯ ಪ್ರಧಾನಿ ಆದರೆ ಸಂತೋಷ .ಮುಖ್ಯಮಂತ್ರಿ ಆಗಿದ್ದ ಹೆಚ್ ಡಿ ದೇವೇಗೌಡ ಈ ದೇಶದ ಪ್ರಧಾನಿಯಾದರು.3 ನೇ ಬಾರಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಕಳೆದ ಏಳು ವರ್ಷದಿಂದ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಹುದ್ದೆ ದೇಶದ ಪರಮೋಚ್ಛ ಸ್ಥಾನವಾಗಿದೆ. ನನಗೂ ಪ್ರಧಾನಿ ಹುದ್ದೆ ಕೊಟ್ಟರೆ ರಾಷ್ಟ್ರ ರಾಜಕಾರಣಕ್ಕೆ ಬರುತ್ತೇನೆಂದು ಸೋನಿಯಾಗಾಂಧಿಗೆ ಸಿದ್ದರಾಮಯ್ಯ ಹೇಳಬೇಕಿತ್ತು. ದೇವೇಗೌಡ, ನರೇಂದ್ರ ಮೋದಿ ತೋರಿದ ಧೈರ್ಯ ಸಿದ್ದರಾಮಯ್ಯಗೆ ಇಲ್ಲ. ಸಿದ್ದರಾಮಯ್ಯ ಮತ್ತೇಕೆ ಮೋದಿ ವಿರುದ್ಧ ಗುಡುಗಬೇಕು ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಭ್ರಷ್ಟಾಚಾರ ಕೊನೆಯಾಗಬೇಕು.ಲೋಕಾಯುಕ್ತ ಮತ್ತೆ ಜಾರಿ ಮಾಡಿ ಭ್ರಷ್ಟರಿಗೆ ಸ್ವಲ್ಪ ಹೆದರಿಕೆಯಿರಲಿ ಎಂದು ಸಲಹೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: