
ಮೈಸೂರು
ಮೈಸೂರಿನಲ್ಲಿ ಸುರಿದ ಮಳೆಗೆ ಮನೆ ಕುಸಿತ
ಮೈಸೂರು,ಅ.12:- ಮೈಸೂರು ಜಿಲ್ಲೆಯ ಬಹುತೇಕ ಎಲ್ಲ ಭಾಗಗಳಲ್ಲಿಯೂ ನಿನ್ನೆ ಕೂಡ ಮಳೆ ಮುಂದುವರಿದಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಟ್ಟಿಗೆಗೂಡಿನ ಪೆರಿಯತಂಬಿ ರಸ್ತೆಯಲ್ಲಿರುವ ಎರಡು ಅಂತಸ್ತಿನ ಮನೆಯೊಂದು ಕುಸಿದು ಬಿದ್ದಿದೆ.
ಕಟ್ಟಡದ ಒಂದು ಪಾರ್ಶ್ವ ಕುಸಿಯುತ್ತಿದ್ದಂತೆಯೇ ಸ್ಥಳೀಯರು ಪಾಲಿಕೆಗೆ ದೂರವಾಣಿ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಅಭಯ್ ರಕ್ಷಣಾ ತಂಡದ ಕಾರ್ಯಕರ್ತರು ಮನೆಯಲ್ಲಿದ್ದ ರಾಣಿಯಮ್ಮ (65), ಪೂಜಾ ಮಣಿ (75) ಎಂಬುವವರನ್ನು ರಕ್ಷಿಸಿದ್ದಾರೆ.
ಕೆ.ಆರ್.ನಗರ ತಾಲೂಕಿನ ಬೇರ್ಯ, ಲಕ್ಷ್ಮೀಪುರ ಹಾಗೂ ತಿ.ನರಸೀಪುರದ ಅಂಕನಹಳ್ಳಿಯಲ್ಲಿ ತಲಾ 5 ಸೆಂ.ಮೀನಷ್ಟು ಮಳೆಯಾಗಿದೆ. ಹಳಿಯೂರು, ಮಾಯಿಗೌಡನಹಳ್ಳಿಯಲ್ಲಿ 4, ಸಾಲಿಗ್ರಾಮದಲ್ಲಿ 3, ಹುಣಸೂರು ತಾಲೂಕಿನ ಮೋದೋರಿನಲ್ಲಿ 4, ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಹಾಗೂ ಪಿರಿಯಾಪಟ್ಟಣದ ಬೆಟ್ಟದಪುರ, ಬೆಟ್ಟದತುಂಗದಲ್ಲಿ ತಲಾ 3 ಸೆಂ.ಮೀನಷ್ಟು ಮಳೆಯಾಗಿದೆ. ಇಂದೂ ಕೂಡ ಇದೇ ಸ್ವರೂಪದಲ್ಲಿ ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ. (ಕೆ.ಎಸ್,ಎಸ್.ಎಚ್)