ಕ್ರೀಡೆಪ್ರಮುಖ ಸುದ್ದಿವಿದೇಶ

ಐಪಿಎಲ್ ಟೂರ್ನಿಯ ಚೊಚ್ಚಲ ಪ್ರಶಸ್ತಿಗೆ ಮುತ್ತಿಡುವ ವಿರಾಟ್ ಕೊಹ್ಲಿ ಕನಸು ಭಗ್ನ

ಕೆಕೆಆರ್ ವಿರುದ್ಧ ಸೋತು ಅಭಿಯಾನ ಮುಗಿಸಿದ ಆರ್ ಸಿಬಿ; 2ನೇ ಕ್ವಾಲಿಫೈಯರ್ ಗೆ ಕೆಕೆಆರ್

ಶಾರ್ಜಾ,(ಯುಎಇ),ಅ.12-ನಾಯಕನಾಗಿ ಆರ್ ಸಿಬಿಗೆ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಡುವ ವಿರಾಟ್ ಕೊಹ್ಲಿಯ ಕನಸು ನುಚ್ಚುನೂರಾಗಿದೆ. ತಂಡದ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟು ನಾಯಕತ್ವಕ್ಕೆ ವಿದಾಯ ಹೇಳಲು ವಿರಾಟ್ ಕೊಹ್ಲಿ ಬಯಸಿದ್ದರು ಆದರೆ ಅದು ಈಡೇರಲಿಲ್ಲ.

ಐಪಿಎಲ್ ಟೂರ್ನಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಸೋತು ಐಪಿಎಲ್ 14ನೇ ಆವೃತ್ತಿಯಲ್ಲಿ ತನ್ನ ಅಭಿಯಾನ ಕೊನೆಗೊಳಿಸಿತು.

ಇನ್ನು ಕೆಕೆಆರ್ ತಂಡ ಆರ್ ಸಿಬಿ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸುವ ಮೂಲಕ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದುಕೊಂಡಿದೆ.

139 ರನ್‌ ಗುರಿ ಹಿಂಬಾಲಿಸಿದ್ದ ಕೆಕೆಆರ್ ತಂಡವನ್ನು 11 ಓವರ್‌ಗಳಿಗೆ 79ಕ್ಕೆ 3 ವಿಕೆಟ್‌ ಪಡೆಯುವ ಮೂಲಕ ಆರ್‌ಸಿಬಿ ಬೌಲರ್‌ಗಳು ನಿಯಂತ್ರಿಸಿದ್ದರು. ಆದರೆ, 12 ಓವರ್‌ನಲ್ಲಿ ಡೇನಿಯಲ್‌ ಕ್ರಿಸ್ಚಿಯನ್‌, ಸುನೀಲ್‌ ನರೇನ್‌ಗೆ ಮೂರು ಸಿಕ್ಸರ್‌ ಜೊತೆಗೆ ಒಟ್ಟು 22 ರನ್‌ ಬಿಟ್ಟುಕೊಡುವ ಮೂಲಕ ಆರ್‌ಸಿಬಿ ಪಾಲಿಗೆ ವಿಲನ್‌ ಆದರು.

ಇದರ ಹೊರತಾಗಿಯೂ ನಂತರ ಯುಜ್ವೇಂದ್ರ ಚಹಲ್‌, ಹರ್ಷಲ್‌ ಪಟೇಲ್‌ ಬಿಗುವಿನ ದಾಳಿ ನಡೆಸಿ ಮತ್ತೆ ಆರ್‌ಸಿಬಿ ಕಮ್‌ಬ್ಯಾಕ್‌ ಮಾಡಲು ನೆರವಾಗಿದ್ದರು. ಆ ಮೂಲಕ ಕೊನೆಯ 3 ಓವರ್‌ಗೆ ಕೆಕೆಆರ್ ಗೆಲುವಿಗೆ 15 ರನ್‌ ಅಗತ್ಯವಿತ್ತು. ನಂತರ, 18ನೇ ಓವರ್‌ನಲ್ಲಿ ಅತ್ಯುತ್ತಮ ಬೌಲ್‌ ಮಾಡಿದ ಮೊಹಮ್ಮದ್‌ ಸಿರಾಜ್‌, ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ಸುನೀಲ್‌ ನರೇನ್‌(26) ಹಾಗೂ ದಿನೇಶ್‌ ಕಾರ್ತಿಕ್‌(10) ಅವರನ್ನು ಔಟ್‌ ಮಾಡುವ ಮೂಲಕ ಕೇವಲ 3 ರನ್‌ ಮಾತ್ರ ನೀಡಿದ್ದರು.

ನಂತರ, 19ನೇ ಓವರ್‌ನಲ್ಲಿ ಜಾರ್ಜ್‌ ಗಾರ್ಟನ್‌ ಕೇವಲ 5 ರನ್‌ ನೀಡಿದ್ದರು. ಆ ಮೂಲಕ ಕೊನೆಯ ಓವರ್‌ನಲ್ಲಿ ಕೆಕೆಆರ್‌ಗೆ 7 ರನ್‌ ಅಗತ್ಯವಿದ್ದಾಗ, ಬೌಲ್‌ ಮಾಡಿದ ಡೇನಿಯಲ್‌ ಕ್ರಿಸ್ಚಿಯನ್‌ ಮೊದಲನೇ ಎಸೆತದಲ್ಲಿಯೇ ಶಕಿಬ್ ಅಲ್‌ ಹಸನ್‌ಗೆ ಬೌಂಡರಿ ಕೊಡುವ ಮೂಲಕ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳಿಗೆ ಆಘಾತ ನೀಡಿದರು. ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಕೆಕೆಆರ್‌ 4 ವಿಕೆಟ್‌ ಗೆಲುವು ಸಾಧಿಸಿ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸಿತು.

ಆರ್‌ಸಿಬಿ ಪರ ಯುಜ್ವೇದ್ರ ಚಹಲ್‌(16ಕ್ಕೆ 2), ಮೊಹಮ್ಮದ್‌ ಸಿರಾಜ್‌(19ಕ್ಕೆ 2) ಹಾಗೂ ಹರ್ಷಲ್‌ ಪಟೇಲ್‌ (19ಕ್ಕೆ 2) ಯಶಸ್ವಿ ಬೌಲರ್‌ಗಳೆನಿಸಿಕೊಂಡರೆ, ಡೇನಿಯಲ್‌ ಕ್ರಿಶ್ಚಿಯನ್‌ ಕೇವಲ 1.4 ಓವರ್‌ಗಳಿಂದ 29 ರನ್‌ ನೀಡುವ ಮೂಲಕ ಆರ್‌ಸಿಬಿಯ ಚೊಚ್ಚಲ ಪ್ರಶಸ್ತಿಯ ಕನಸನ್ನು ಭಗ್ನಗೊಳಿಸಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 138 ರನ್‌ ಗಳಿಸಿತ್ತು. ಓಪನರ್‌ಗಳಾದ ನಾಯಕ ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ 5 ಓವರ್‌ಗಳ ಅಂತ್ಯಕ್ಕೆ 49 ರನ್‌ ಗಳಿಸಿ ಉತ್ತಮ ಆರಂಭ ತಂದುಕೊಟ್ಟಿದ್ದರು. ಆದರೆ, ಪವರ್‌ಪ್ಲೇ ಕೊನೆಯ ಓವರ್‌ನಲ್ಲಿ ದೇವದತ್‌ ಪಡಿಕ್ಕಲ್‌(21), ಲಾಕಿ ಫರ್ಗೂಸನ್‌ಗೆ ವಿಕೆಟ್‌ ಒಪ್ಪಿಸಿದರು.

ಕಳೆದ ಪಂದ್ಯದಲ್ಲಿ ಅಜೇಯ 78 ರನ್‌ ಗಳಿಸಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟಿದ್ದ ಶೀಕರ್‌ ಭರತ್‌(9), ಸುನೀಲ್‌ ನರೇನ್‌ ಎಸೆತದಲ್ಲಿ ಲಾಂಗ್‌ ಆಫ್‌ನಲ್ಲಿ ಕ್ಯಾಚಿತ್ತರು. ಒಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದ ವಿರಾಟ್‌, 33 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 39 ರನ್‌ ಗಳಿಸಿ ತಂಡಕ್ಕೆ ಭರವಸೆ ಮೂಡಿದ್ದರು. ಆದರೆ, ಸುನೀಲ್‌ ನರೇನ್‌ ಎಸೆತವನ್ನು ಅರಿಯುವಲ್ಲಿ ವಿಫಲರಾದ ಕೊಹ್ಲಿ, ಕ್ಲೀನ್‌ ಬೌಲ್ಡ್ ಆದರು.

ಇವರ ಹಿಂದೆಯೇ ಕೀ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್(11) ಕೂಡ ವಿಂಡೀಸ್‌ ಸ್ಪಿನ್ನರ್‌ಗೆ ಕ್ಲೀನ್‌ ಬೌಲ್ಡ್ ಆದರು. ಗ್ಲೆನ್‌ ಮ್ಯಾಕ್ಸ್‌ವೆಲ್‌(15), ಶಹಬಾಝ್‌ ಅಹಮದ್‌(13), ಡೇನಿಯಲ್‌ ಕ್ರಿಶ್ಚಿಯನ್‌(9) ಹಾಗೂ ಕೊನೆಯಯಲ್ಲಿ ಹರ್ಷಲ್‌ ಪಟೇಲ್‌ ನಿರ್ಣಾಯಕ 8 ರನ್‌ ಗಳಿಸಿದರು.

ಕೆಕೆಆರ್‌ ಪರ ಅತ್ಯುತ್ತಮ ಬೌಲ್‌ ಮಾಡಿದ ಸುನೀಲ್‌ ನರೇನ್‌ ಹಾಕಿದ 4 ಓವರ್‌ಗಳಿಗೆ ಕೇವಲ 21 ರನ್‌ ನೀಡಿ ಪ್ರಮುಖ 4 ವಿಕೆಟ್‌ ಕಬಳಿಸಿದರೆ, ಲಾಕಿ ಫರ್ಗೂಸನ್‌ 4 ಓವರ್‌ಗಳಿಗೆ 30 ರನ್‌ ನೀಡಿ ಎರಡು ವಿಕೆಟ್‌ ತನ್ನದಾಗಿಸಿಕೊಂಡರು.

ಸ್ಕೋರ್ವಿವರ: ರಾಯಲ್ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಿಗೆ 138/7 (ವಿರಾಟ್‌ ಕೊಹ್ಲಿ 39, ದೇವದತ್ ಪಡಿಕ್ಕಲ್‌ 21, ಗ್ಲೆನ್‌ ಮ್ಯಾಕ್ಸ್‌ವೆಲ್‌ 15, ಶಹಬಾಝ್‌ ಅಹಮದ್‌ 13; ಸುನೀಲ್‌ ನರೇನ್‌ 21ಕ್ಕೆ 4, ಲಾಕಿ ಫರ್ಗೂಸನ್‌ 30ಕ್ಕೆ 2), ಕೋಲ್ಕತಾ ನೈಟ್ರೈಡರ್ಸ್: 19.4 ಓವರ್‌ಗಳಿಗೆ 139ಕ್ಕೆ 6 (ಶುಭಮನ್‌ ಗಿಲ್‌ 29, ವೆಂಕಟೇಶ್‌ ಅಯ್ಯರ್‌ 26, ಸುನೀಲ್ ನರೇನ್‌ 26; ಯುಜ್ವೇಂದ್ರ ಚಹಲ್‌ 16ಕ್ಕೆ 2, ಮೊಹಮ್ಮದ್‌ ಸಿರಾಜ್‌ 19ಕ್ಕೆ 2, ಹರ್ಷಲ್‌ ಪಟೇಲ್‌ 19ಕ್ಕೆ 2), ಪಂದ್ಯ ಶ್ರೇಷ್ಠ ಪ್ರಶಸ್ತಿ: ಸುನೀಲ್‌ ನರೇನ್‌.

ಬುಧವಾರ ಇದೇ ಅಂಗಳದಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡ, ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಲಿದೆ.(ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: