ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಕುಸಿಯುವ ಹಂತದಲ್ಲಿ ಮೂರು ಅಂತಸ್ತಿನ ಮನೆ: ಸಚಿವ ಗೋಪಾಲಯ್ಯ ಭೇಟಿ

ಬೆಂಗಳೂರು,ಅ.13-ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವೃಷಭಾವತಿ ನಗರದಲ್ಲಿ ಮೂರು ಅಂತಸ್ತಿನ ಮನೆಯೊಂದು ಕುಸಿಯುವ ಹಂತದಲ್ಲಿದೆ.

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕಮಲಾನಗರದ ಶಂಕರ್‌ನಾಗ್ ಬಸ್‌ ನಿಲ್ದಾಣದ ಸನಿಹವಿರುವ ಮೂರು ಮಹಡಿಯ ಮನೆ ಕುಸಿಯುವ ಹಂತದಲ್ಲಿದೆ. ಕಟ್ಟಡವು ವಾಲುವಾಗ ಉಂಟಾದ ಶಬ್ದದಿಂದ ಭಯಭೀತರಾದ ನಿವಾಸಿಗಳು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಅಪಾಯ ತಪ್ಪಿದಂತಾಗಿದೆ.

ವಿಷಯ ತಿಳಿದೊಡನೆ ಸ್ಥಳಕ್ಕೆ ಧಾವಿಸಿರುವ ಎನ್‌ಡಿ‌ಆರ್‌ಎಫ್ ತಂಡ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.  ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕದ ಮನೆಗಳವರನ್ನೂ ತೆರವುಗೊಳಿಸಲಾಗಿದೆ. ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಕಟ್ಟಡವನ್ನು ನೆಲಸಮಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದಕ್ಕೆ ಸೂಕ್ತ ಯೋಜನೆಯನ್ನೂ ರೂಪಿಸಿದ್ದಾರೆ.

ಅಗತ್ಯ ವಸ್ತುಗಳೆಲ್ಲಾ ಮನೆಯಲ್ಲೇ ಇವೆ. ಬೆಲೆಬಾಳುವ ವಸ್ತುಗಳನ್ನೂ ಬಿಟ್ಟುಬಂದಿದ್ದೇವೆ. ಅವುಗಳನ್ನ ತಂದುಕೊಡಿ ಎಂದು ನಿವಾಸಿಗಳು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದದ್ದು ಕಂಡುಬಂತು. ಕಟ್ಟಡದಲ್ಲಿ ಒಟ್ಟು ಆರು ಮನೆಗಳಿವೆ. ನೀರಿನ ವ್ಯವಸ್ಥೆ ಇಲ್ಲ ಎಂದು ಈಗಾಗಲೇ ಮೂರು ಕುಟುಂಬಗಳು ಮನೆ ಖಾಲಿ ಮಾಡಿವೆ. ನಾವು ಕೂಡ ಬೇರೆ ಮನೆಗೆ ಹೋಗಲು ಸಿದ್ಧರಾಗಿದ್ದೆವು. ಮನೆ ನೋಡಿ ಹಾಲು ಉಕ್ಕಿಸಿ ಬಂದಿದ್ದೆವು. ಬುಧವಾರ ಬೆಳಿಗ್ಗೆ ಮನೆ ಖಾಲಿ ಮಾಡಲು ನಿರ್ಧರಿಸಿದ್ದೆವು. ಅಷ್ಟರಲ್ಲಿ ಹೀಗಾಗಿದೆ ಎಂದು ಕಟ್ಟಡದ ನಿವಾಸಿಯೊಬ್ಬರು ತಿಳಿಸಿದರು.

ಮಕ್ಕಳಿಬ್ಬರು ರಾತ್ರಿಪಾಳಿ ಇದ್ದಿದ್ದರಿಂದ ಕೆಲಸಕ್ಕೆ ಹೋಗಿದ್ದರು. ನಾನು, ಮಗಳು ಹಾಗೂ ಪತಿ ಮನೆಯ ಹಾಲ್‌ನಲ್ಲಿ ಮಾತನಾಡುತ್ತ ಕುಳಿತಿದ್ದೆವು. ಈ ವೇಳೆ ಜೋರು ಶಬ್ದ ಕೇಳಿಸಿತು. ಭಯಗೊಂಡು ಹೊರಗೆ ಓಡಿಬಂದು ನೋಡಿದರೆ ಕಟ್ಟಡ ವಾಲಿತ್ತು ಎಂದರು.

ರಾಜೇಶ್ವರಿ ಎಂಬುವವರು ಈ ಕಟ್ಟಡದ ಮಾಲೀಕರು. ಸುತ್ತಮುತ್ತಲಿನ ಜನರ ಬಳಿ ಸಾಲ ಮಾಡಿಕೊಂಡಿರುವ ಅವರು ವರ್ಷದ ಹಿಂದೆಯೇ ಬಡಾವಣೆ ಬಿಟ್ಟು ಹೋಗಿದ್ದಾರೆ. ಎಲ್ಲೊ ಪಿಜಿಯಲ್ಲಿದ್ದಾರೆ ಎಂಬುದು ಗೊತ್ತಾಗಿತ್ತು. ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿಸಿದರು.

ಸಚಿವ ಗೋಪಾಲಯ್ಯನವರೂ ಸ್ಥಳಕ್ಕೆ ಧಾವಿಸಿದ್ದು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಸ್ಥಳೀಯರಿಗೆ ಧೈರ್ಯ ತುಂಬಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮನೆಯಲ್ಲಿ ಬಾಡಿಗೆಗೆ ಇದ್ದವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಕ್ಕ ಪಕ್ಕದ ಮನೆಯಲ್ಲಿ ವಾಸವಿದ್ದವರನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಅವರುಗಳಿಗೆ ವಸತಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಯಾರಿಗೂ ಹಾನಿಯಾಗದಂತೆ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸೂಚಿಸಲಾಗಿದೆ. ಮನೆಯ ಮಾಲೀಕರು ನಾಪತ್ತೆಯಾಗಿದ್ದು. ಪೊಲೀಸರು ಹುಡುಕುವ ಯತ್ನದಲ್ಲಿದ್ದಾರೆ ನಿರಾಶ್ರಿತರಿಗೆ ನಮ್ಮ ಮತ್ತು ಸರ್ಕಾರ ಕಡೆಯಿಂದ ನೆರವು ನೀಡಲಾಗುವುದು ಎಂದು ತಿಳಿಸಿದರು.

ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡದ ಪಾಯ ಕುಸಿದಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಪಟ್ಟಿಯನ್ನು ಈಗಾಗಲೇ ಸಿದ್ಧಗೊಳಿಸಿದ್ದೇವೆ. ನಮ್ಮ ಪಟ್ಟಿಯಲ್ಲಿ ಈ ಕಟ್ಟಡವೂ ಇತ್ತು. ಸದ್ಯ ನಿವಾಸಿಗಳನ್ನೆಲ್ಲಾ ಬೇರೆಡೆ ಸ್ಥಳಾಂತರಿಸಿದ್ದೇವೆ. ಕಟ್ಟಡ ನೆಲಸಮಗೊಳಿಸುವಂತೆ ಸೂಚಿಸಲಾಗಿದೆ ತಿಳಿಸಿದ್ದಾರೆ.

 

Leave a Reply

comments

Related Articles

error: