
ಕರ್ನಾಟಕಪ್ರಮುಖ ಸುದ್ದಿಮೈಸೂರು
ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಗೈದ ಸಿಎಂ : ನಾಡಹಬ್ಬ ಮೈಸೂರು ದಸರಾ ಸಂಭ್ರಮಕ್ಕೆ ವಿದ್ಯುಕ್ತ ತೆರೆ
ಮೈಸೂರು,ಅ.15: – ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಾಡಹಬ್ಬ ದಸರಾ ಸಂಭ್ರಮಕ್ಕೆ ಜಂಬೂಸವಾರಿ ನಂತರ ವಿದ್ಯುಕ್ತ ತೆರೆ ಬಿದ್ದಿದೆ.
ಜೋಡಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದರು. ಆ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಜೋಡಿ ನಂದಿ ಧ್ವಜಕ್ಕೆ ಶುಭ ಮೀನ ಲಗ್ನದಲ್ಲಿ ಪೂಜೆ ಸಲ್ಲಿಸಲಾಯಿತು. ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ಪೂಜೆ ಸಲ್ಲಿಸಲಾಯಿತು. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಗೈದರು. ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ದೇವಿಗೆ ಪುಷ್ಪಾರ್ಚನೆ ಮಾಡಲಾಯಿತು. ಶುಭ ಮೀನ ಲಗ್ನದಲ್ಲಿ ಪುಷ್ಪಾರ್ಚನೆ ಮಾಡಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಎಸ್.ಟಿ. ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ, ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರುಗಳು ಕೂಡ ಪುಷ್ಪಾರ್ಚನೆ ಗೈದರು.
ಬಳಿಕ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಆನೆ ಸಾಗಿತು. ಕ್ಯಾಪ್ಟನ್ ಅಭಿಮನ್ಯುಗೆ ಈ ಬಾರಿ ಐದು ಆನೆಗಳು ಸಾಥ್ ನೀಡಿವೆ. ಅಭಿಮನ್ಯು ಅಕ್ಕಪಕ್ಕ ಕಾವೇರಿ, ಚೈತ್ರಾ ಆನೆಗಳು ಹೆಜ್ಜೆ ಹಾಕಿವೆ. ಕುಮ್ಕಿ ಆನೆಗಳಾಗಿ ಚೈತ್ರಾ, ಕಾವೇರಿ ಆನೆಗಳು ಸಾಥ್ ನೀಡಿತ್ತು. ನಿಶಾನೆ ಆನೆಯಾಗಿ ಧನಂಜಯ, ನೌಪತ್ ಆನೆಯಾಗಿ ಗೋಪಾಲಸ್ವಾಮಿ ಹಾಗೂ ಸಾಲಾನೆಯಾಗಿ ಅಶ್ವತ್ಥಾಮ ಆನೆ ಹೆಜ್ಜೆ ಹಾಕಿದವು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸಹ ಹಿನ್ನೆಲೆಯಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಭಾಗದವರಾಗಿರುವ ಕಾರಣ ಅವರಿಗೆ ನಂದಿ ಧ್ವಜ ಸಮಿತಿ ಸದಸ್ಯರು ಸವದತ್ತಿ ಯಲ್ಲಮ್ಮನ ವಿಗ್ರಹ ಉಡುಗೊರೆ ನೀಡಿದರು. ಸಚಿವ ಎಸ್.ಟಿ. ಸೋಮಶೇಖರ್ ಸಾಂಪ್ರದಾಯಿಕ ರೇಷ್ಮೆ ಕುರ್ತಾ, ರೇಷ್ಮೆ ಪಂಚೆ, ರೇಷ್ಮೆ ಶಲ್ಯ ಧರಿಸಿದ್ದರು.
ಅತ್ಯಂತ ಭಕ್ತಿ ಭಾವದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದೇನೆ. ರಾಜ್ಯದಾದ್ಯಂತ ಉತ್ತಮ ಮಳೆ ಬೆಳೆ ಆಗಲಿ ಎಂದು ಹಾರೈಸುತ್ತೇನೆ. ಉತ್ತಮ ಬೆಳೆ ಬಂದು ರೈತರಿಗೆ ಒಳ್ಳೆಯದಾಗಲಿ. ರಾಜ್ಯದ ಜನತೆಗೆ ವಿಜಯದಶಮಿ ಶುಭಾಶಯ ಎಂದು ಹೇಳಿದರು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಸಿಎಂ ಶುಭಕೋರಿದರು. ಶಾಸಕರಾದ ರಾಮದಾಸ್, ಎಲ್.ನಾಗೇಂದ್ರ, ಸಂಸದರಾದ ಮುನಿಸ್ವಾಮಿ, ಪ್ರತಾಪ್ ಸಿಂಹ ಮುಖ್ಯಮಂತ್ರಿ ಜೊತೆಗಿದ್ದರು.
ಕಣ್ಮನ ಸೆಳೆಯುವ ಸ್ತಬ್ಧಚಿತ್ರಗಳು
ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಗಾಂಭೀರ್ಯ ಹೆಜ್ಜೆ ಹಾಕಿದ್ದು ಕಂಡು ಬಂತು. ಮೆರವಣಿಗೆಯಲ್ಲಿ ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ , ಕಂಸಾಳೆ,ಚಂಡೆ ಸೇರಿದಂತೆ
ಜಾನಪದ ತಂಡಗಳು ಗಮನ ಸೆಳೆದವು. ಜಂಬೂಸವಾರಿ ಮೆರವಣಿಗೆಯಲ್ಲಿ 6 ಸ್ತಬ್ಧಚಿತ್ರಗಳು ಸಾಗಿ ಬಂತು. ಪ್ರತಿ ಬಾರಿ 45ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಭಾಗಿಯಾಗುತ್ತಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಸರಳ ದಸರಾ ಮತ್ತು ಅರಮನೆ ಆವರಣಕ್ಕಷ್ಟೇ ಜಂಬೂಸವಾರಿ ಸೀಮಿತವಾಗಿದ್ದ ಹಿನ್ನೆಲೆಯಲ್ಲಿ ಸ್ತಬ್ಧಚಿತ್ರಗಳನ್ನು ಸೀಮಿತಗೊಳಿಸಲಾಗಿತ್ತು.
ಮೈಸೂರಿನಲ್ಲಿ ನಿವೇಶನಗಳ ಬಗ್ಗೆ ಮುಡಾದಿಂದ ಸ್ತಬ್ಧ ಚಿತ್ರ, ಬೇಡ ನನಗೆ ಕೊಡಲಿ ನೆರಳನೇಕೆ ಕೊಡಲಿ ಸ್ತಬ್ಧಚಿತ್ರ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ , ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಮಗ್ರ ಕೃಷಿ ಸ್ತಬ್ಧಚಿತ್ರ, ಆರೋಗ್ಯ ಇಲಾಖೆಯಿಂದ ಕೊವಿಡ್ ಮುಕ್ತ ಕರ್ನಾಟಕ ಸ್ತಬ್ಧಚಿತ್ರ , ಮೈಸೂರು ದಸರಾ ಉಪಸಮಿತಿಯ ಸ್ತಬ್ಧಚಿತ್ರ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಸ್ತಬ್ಧಚಿತ್ರ, ಅರಮನೆ ವಾದ್ಯಗೋಷ್ಠಿಯ ಸ್ತಬ್ಧಚಿತ್ರ ಕಂಡು ಬಂತು.