ಮೈಸೂರು

ಧಾರಾಕಾರವಾಗಿ ಸುರಿದ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿ

ಮೈಸೂರು,ಅ.16:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ ಸಂಜೆ  ಜಂಬೂಸವಾರಿ ಮುಗಿಯುತ್ತಿದ್ದಂತೆಯೇ ಧಾರಾಕಾರವಾಗಿ ಸುರಿಯತೊಡಗಿದ ಮಳೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುರಿಯಿತು.

ಸುರಿದ ಮಳೆಯಿಂದ ರೈತರ ಮೊಗದಲ್ಲಿ ಸಂತಸವರಳಿತು. ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆಯಾಗಿದ್ದ ಬೆಳೆಗಳು ಜೀವಂತಿಕೆ ಪಡೆದವು. ಆದರೆ ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನೂರಾರು ಮಂದಿ ತೊಂದರೆ ಅನುಭವಿಸಿದರು.

ನಗರದಲ್ಲಿ ಬರೋಬ್ಬರಿ 8 ಸಂ.ಮೀನಷ್ಟು ಮಳೆ ದಾಖಲಾಗಿದ್ದು, ನಗರದ ಬೆಂಗಳೂರು- ನೀಲಗಿರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಮಳೆಯಿಂದ ಜಲಾವೃತಗೊಂಡಿತ್ತು.  ಗ್ರಾಮಾಂತರ ಬಸ್‌ನಿಲ್ದಾಣದ ಆಸುಪಾಸಿನಲ್ಲಿದ್ದ ಬಹುತೇಕ ಹೋಟೆಲ್‌ಗಳಿಗೆ ನೀರು ನುಗ್ಗಿ ಅವಾಂತರವನ್ನು ಸೃಷ್ಟಿಸಿತ್ತು.

ಎಂ.ಜಿ.ರಸ್ತೆ ಸಮೀಪದ ಮಧುವನ ಬಡಾವಣೆ, ರಾಮಕೃಷ್ಣನಗರದ ಕೆಲವು ಭಾಗಗಳು, ಗಣೇಶನಗರ, ಸುಭಾಷನಗರ, ಸತ್ಯನಗರ, ವಿವೇಕಾನಂದ ನಗರದ ಕೆಲವು ಭಾಗಗಳು, ಜಲಪುರಿ, ಎಸ್.ಪಿ.ಕಚೇರಿಯ ಹಿಂಭಾಗದ ರಸ್ತೆಯಲ್ಲಿರುವ ಮನೆಗಳು ಸೇರಿದಂತೆ ಹಲವು ಭಾಗಗಳಲ್ಲಿನ ಮನೆಗಳಿಗೆ ನೀರು ನುಗ್ಗಿತು.

ಮಳೆ ಸುರಿಯುತ್ತಿರುವಾಗ ಮುನ್ನಚ್ಚರಿಕಾ ಕ್ರಮವಾಗಿ ಹಲವೆಡೆ ದಸರಾ ದೀಪಾಲಂಕಾರವನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ನಿಂತ ನಂತರ ದೀಪಾಲಂಕಾರ ಮತ್ತೆ ಆರಂಭವಾಯಿತು. ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು.

ಮೈಸೂರು ತಾಲೂಕಿನ ಮರಟಿಕ್ಯಾತನಹಳ್ಳಿಯಲ್ಲಿ4, ವರುಣಾ ಹೋಬಳಿಯಲ್ಲಿ3.5, ಟಿ.ನರಸೀಪುರದ ಸೋಸಲೆ ಭಾಗದಲ್ಲಿ 4, ತುಂಬಲದಲ್ಲಿ 3.5, ಭೈರಾಪುರದಲ್ಲಿ 3, ಹುಣಸೂರಿನ ಮರದೂರು ಮತ್ತು ಬಿಳಿಕೆರೆಯಲ್ಲಿ 3 ಸೆಂ.ಮೀನಷ್ಟು ಮಳೆಯಾಗಿದೆ. ಇಂದೂ ಕೂಡ ಅದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ತಡರಾತ್ರಿವರೆಗೂ ಕಾರ್ಯಾಚರಣೆ ನಡೆದಿದ್ದು, ಮಳೆಯಿಂದ ನೀರು ನುಗ್ಗಿದ ಕಡೆ ಜನರನ್ನು ರಕ್ಷಿಸಲು ಪಾಲಿಕೆಯ ಎಲ್ಲ 3 ಅಭಯ್ ರಕ್ಷಣಾ ತಂಡಗಳು ಹಾಗೂ 6 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿದವು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: