ಕರ್ನಾಟಕಪ್ರಮುಖ ಸುದ್ದಿ

ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮವಹಿಸಿದ್ದೇವೆ: ಎಸ್.ಅಶ್ವಥಿ

ರಾಜ್ಯ(ಮಂಡ್ಯ) ಅ 16:- ಗ್ರಾಮದಲ್ಲಿನ ಸಮಸ್ಯೆಗಳಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನನ್ನ ಬಳಿ ಪರಿಹರಿಸುವ ಸಮಸ್ಯೆಗಳಿಗೆ ನನ್ನ ಮಟ್ಟದಲ್ಲೇ ಬಗೆಹರಿಸಲು ಕ್ರಮವಹಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳಾದ ಎಸ್.ಅಶ್ವಥಿ  ಅವರು ಹೇಳಿದರು.

ಮಂಡ್ಯ ತಾಲೂಕು ಗಂಟಗೌಡನಹಳ್ಳಿಯಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಆಡಳಿತವತಿಯಿಂದ ನಡೆದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ’ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸದ್ಯದ ಪರಿಸ್ಥಿತಿಯಲ್ಲಿ ನಿಯಂತ್ರಣದಲ್ಲಿದ್ದು ಗ್ರಾಮ ವಾಸ್ತವ್ಯವನ್ನು ಪುನರ್ ಆರಂಭಿಸಿ, ಜನರಿಗೆ ಎಲ್ಲಾ ರೀತಿಯ ಅನುಕೂಲವಾಗುವಂತೆ ಕ್ರಮವಹಿಸಿ ಎಂದು ಕಂದಾಯ ಸಚಿವರಾದ ಆರ್ ಅಶೋಕ್ ರವರ ನಿರ್ದೇಶನದಂತೆ ಈ ಕಾರ್ಯಕ್ರಮ‌ ಯಶಸ್ವಿಯಾಗಿದೆ ಎಂದರು.

ಗಂಟಗೌಡನಹಳ್ಳಿಗೆ ಭೇಟಿ ನೀಡಿ, ಗ್ರಾಮಸ್ಥರ ಮೂಲಭೂತ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿದ್ದೇವೆ ಎಂದರು.

ಗ್ರಾಮದ ಯುವಕರ, ಮಹಿಳೆಯರ, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ ಎಂದರು.

ಗ್ರಾಮದ ಜನರ, ವಿಧವಾವೇತನ, ವೃದ್ಧಾಪ್ಯವೇತನ, ಆರೋಗ್ಯ ಕಾರ್ಡ್, ಆರ್.ಟಿ.ಸಿ, ಪೌತಿಖಾತೆ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಮಾಣಪತ್ರವನ್ನು ನೀಡಿದ್ದೇವೆ ಎಂದರು.
ಸರ್ಕಾರದ ಯೋಜನೆಗಳು, ವಿವಿಧ ಇಲಾಖೆಯ ಸೌಲಭ್ಯ ಗಳ ಬಗ್ಗೆ ಮಾಹಿತಿ ಒದಗಿಸಿದ್ದೇವೆ ಹಾಗೂ ಗ್ರಾಮದಲ್ಲಿ ಸ್ವಚ್ವತಾ ಕಾರ್ಯವನ್ನು ಕೈಗೊಂಡು, ಶುಚಿತ್ವ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಗಂಟಗೌಡನಹಳ್ಳಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರಮಾಣಪತ್ರ ನೀಡಲಾಯಿತು.

ರಸ್ತೆ, ಸಾರಿಗೆ ಸಮಸ್ಯೆಯನ್ನು ಆಲಿಸಿ, ಅಧಿಕಾರಿಗಳಿಗೆ ಸೂಚಿಸಿ ಸೂಕ್ತ ವ್ಯವಸ್ಥೆಗೆ ಕ್ರಮವಹಿಸಲಾಯಿತು.

ಅರ್ಹ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್‍ನ್ನು ವಿತರಿಸಲಾಯಿತು. ತೋಟಗಾರಿಕೆ ಇಲಾಖೆಯಿಂದ ಅರ್ಹಫಲಾನುಭವಿಗಳಿಗೆ ಸಹಾಯಧನವನ್ನು ನೀಡಲಾಯಿತು. ಪೋಡಿಮುಕ್ತ ಅಭಿಯಾನ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಆರ್.ಟಿ.ಸಿ ವಿತರಿಸಲಾಯಿತು. ಕೃಷಿ ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹನಿ ನೀರಾವರಿಯ ಸಲಕರಣೆಗಳನ್ನು ವಿತರಿಸಲಾಯಿತು. ಆರೋಗ್ಯ ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಿಶೇಷಚೇತನ ಪ್ರಮಾಣ ಪತ್ರ ನೀಡಲಾಯಿತು.

130 ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ ಹೆಲ್ತ್ ಕಾರ್ಡ್ ನ್ನು ಸ್ಥಳದಲ್ಲೇ ವಿತರಿಸಲಾಯಿತು ಈ ಸಂಬಂಧ ಒಂದು ಕಾರ್ಡ್ 2 ಲಕ್ಷ ವಿಮೆ ಹೊಂದಿದ್ದು, ಒಟ್ಟು 2 ಕೋಟಿ 60 ಲಕ್ಷ ರೂ ಗಳ ವಿಮೆಯನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು.

ಆರೋಗ್ಯ ಇಲಾಖೆಯಿಂದ ವ್ಯಾಕ್ಸಿನೇಷನ್‌ ಕಾರ್ಯಕ್ರಮವನ್ನು ಹಮ್ಮಿಕೊಂಡು ಶೇ 100 ರಷ್ಟು ಲಸಿಕೆಯನ್ನು ಪೂರ್ಣಗೊಳಿಸಲಾಯಿತು.

ಅರ್ಹ ಫಲಾನುಭವಿಗಳಿಗೆ ಆರ್.ಟಿ.ಸಿ ಪಟ್ಟಾಪುಸ್ತಕವನ್ನು ವಿತರಿಸಲಾಯಿತು. ಅರ್ಹ ಫಲಾನುಭವಿಗಳಿಗೆ ಪೌತಿಖಾತೆ ಪತ್ರವನ್ನು ನೀಡಲಾಯಿತು.

ಚೋಕನಹಳ್ಳಿ ಗ್ರಾಮದ ಸರ್ವೆ ನಂ 90 ರಲ್ಲಿ 9 ಎಕರೆ ಜಾಗ ಅಳತೆ ಮಾಡಿ ಸಾರಿಗೆ ಇಲಾಖೆಯ RTO ರವರ ವಶಕ್ಕೆ ನೀಡಲು ಕ್ರಮ ಜರುಗಿಸಲಾಯಿತು.

ಸ್ಮಶಾನ ಒತ್ತುವರಿ ತೆರವು ಸಂಬಂಧ ಗಂಟಗೋಡನಹಳ್ಳಿ ಗ್ರಾಮಕ್ಕೆ 20 ಗುಂಟೆಯನ್ನು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸಮ್ಮುಖದಲ್ಲಿ ಪಿಡಿಒ ಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಳಾದ ಐಶ್ವರ್ಯ, ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಗಾಲಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. (ಜಿಕೆ,ಎಸ್.ಎಚ್)

Leave a Reply

comments

Related Articles

error: