ಕರ್ನಾಟಕಪ್ರಮುಖ ಸುದ್ದಿ

ಅರ್ಹರಿಗೆ ಅವರ ಮನೆ ಬಾಗಿಲಿಗೇ ಇನ್ನುಮುಂದೆ ಮಾಸಾಶನ ಮಂಜೂರಾತಿ ಆದೇಶ ದೊರೆಯಲಿದೆ : ಆರ್. ಅಶೋಕ್

ರಾಜ್ಯ(ದಾವಣಗೆರೆ) ಅ. 16 :- ಅರವತ್ತು ವರ್ಷ ಮೇಲ್ಪಟ್ಟವರು ಪಿಂಚಣಿ ಮಂಜೂರಾತಿ ಆದೇಶ ಪಡೆಯಲು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ, ಇನ್ನು ಮುಂದೆ ಅರ್ಹರ ಮನೆ ಬಾಗಿಲಿಗೇ ಪಿಂಚಣಿ ಮಂಜೂರಾತಿ ಆದೇಶ ದೊರೆಯುವಂತೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಜಿಲ್ಲೆಯ ನ್ಯಾಮತಿ ತಾಲ್ಲೂಕು ಸುರಹೊನ್ನೆ ಗ್ರಾಮದಲ್ಲಿ ಶನಿವಾರದಂದು ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು. ಹೀಗಾಗಿ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳೀಯವಾಗಿಯೇ ಅವುಗಳಿಗೆ ಪರಿಹಾರ ಕಲ್ಪಿಸುವುದು. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು, ಪೋಡಿ, ಪಿಂಚಣಿ, ಮುಟೇಷನ್ ಮುಂತಾದ ಸಮಸ್ಯೆಗಳ ಬಗ್ಗೆ ಅರ್ಜಿ ಹಿಡಿದು ಸಚಿವರು, ಉನ್ನತ ಅಧಿಕಾರಿಗಳಿಗೆ ರಸ್ತೆಗಳಲ್ಲಿಯೇ ಅರ್ಜಿ ಸಲ್ಲಿಸುವಂತಹ ಪರಿಸ್ಥಿತಿ ನೋಡಿದ್ದೇನೆ. ಸಮಸ್ಯೆಗಳನ್ನು ಹೊತ್ತಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ, ತಹಸಿಲ್ದಾರರ ಕಚೇರಿಗೆ ಅಲೆಯುವ ಸ್ಥಿತಿಯನ್ನು ತಪ್ಪಿಸುವ ಸಲುವಾಗಿಯೇ ಜಿಲ್ಲಾಡಳಿತವೇ ಗ್ರಾಮಕ್ಕೆ ಹೋಗಿ, ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ರೂಪಿಸಲಾಯಿತು. ಕೇವಲ ಜನರ ಅರ್ಜಿ ಪಡೆದು ಸಂಜೆಯ ವೇಳೆಗೆ ಅಧಿಕಾರಿಗಳು ಮರಳುವುದು ಕಾರ್ಯಕ್ರಮದ ಉದ್ದೇಶವಲ್ಲ, ಹೀಗಾಗಿಯೇ ಜಿಲ್ಲಾಧಿಕಾರಿಗಳನ್ನು ತಿಂಗಳಿಗೊಮ್ಮೆ ಗ್ರಾಮಗಳಲ್ಲಿಯೇ ವಾಸ್ತವ್ಯ ಮಾಡಲು ಸೂಚನೆ ನೀಡಲಾಗಿದೆ. ಗ್ರಾಮದ ಅಂಗನವಾಡಿಯಲ್ಲಿ ಊಟ ಮಾಡಬೇಕು, ಶಾಲೆಯಲ್ಲಿ ಮಲಗಬೇಕು, ಅಂದಾಗ ಮಾತ್ರ ಗ್ರಾಮಗಳಲ್ಲಿನ ನೀರು ಪೂರೈಕೆ, ಶೌಚಾಲಯ, ಶಾಲೆ, ಅಂಗನವಾಡಿಗಳ ಸ್ಥಿತಿಗತಿ ತಿಳಿಯುತ್ತದೆ. ಅಲ್ಲದೆ ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಇದನ್ನು ಆಲೋಚಿಸಿಯೇ ಇಂತಹ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಡಿಸಿ, ಎಸಿ, ತಹಸಿಲ್ದಾರರು, ಕಂದಾಯ ಅಧಿಕಾರಿಗಳು, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ತಪ್ಪದೆ ಪಾಲ್ಗೊಳ್ಳಲು ನಿರ್ದೇಶನ ನೀಡಲಾಗಿದೆ. 60 ವರ್ಷ ವಯಸ್ಸು ಮೀರಿದವರು ಪಿಂಚಣಿಗಾಗಿ ಇನ್ನು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೆ ಕಂದಾಯ ಇಲಾಖೆ ಬಳಿ ಜನರ ಆಧಾರ್ ದಾಖಲೆಗಳಿವೆ, ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲಾಗಿದೆ. ಬಿಪಿಎಲ್, ಎಪಿಎಲ್ ಕುಟುಂಬಗಳ ಮಾಹಿತಿ ಲಭ್ಯವಿದೆ. ಹೀಗಾಗಿ 60 ವರ್ಷ ಮೇಲ್ಪಟ್ಟವರಿಗೆ ಇನ್ನು ಮುಂದೆ ಅಧಿಕಾರಿಗಳೇ ಅವರ ಮನೆ ಬಾಗಿಲಿಗೆ ಪಿಂಚಣಿ ಆದೇಶ ಪತ್ರ ತಲುಪಿಸಬೇಕು. ದಾಖಲೆಗಳನ್ನು ಕೊಡಿ ಎಂದು ಸತಾಯಿಸುವ ಸ್ಥಿತಿ ಇರಬಾರದು. ರಾಜ್ಯದಲ್ಲಿ ಈ ರೀತಿ ಈಗಾಗಲೆ 2.75 ಲಕ್ಷ ಜನರಿಗೆ ಪಿಂಚಣಿ ಮಂಜೂರು ಮಾಡಲಾಗಿದ್ದು, ಪಿಂಚಣಿಗಾಗಿಯೇ ಸರ್ಕಾರ ವರ್ಷಕ್ಕೆ 9167 ಕೋಟಿ ರೂ. ಹಣ ಖರ್ಚು ಮಾಡುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರಿ ವಹಿಸಿಕೊಂಡ ಕೂಡಲೆ 1 ಸಾವಿರ ಇದ್ದ ಪಿಂಚಣಿಯನ್ನು 1200 ಕ್ಕೆ ಹಾಗೂ 600 ರಿಂದ 800 ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದರು, ಅಲ್ಲದೆ ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವ ಯೋಜನೆ ಜಾರಿಗೊಳಿಸಿದರು. ರಾಜ್ಯದಲ್ಲಿ 923 ಹಟ್ಟಿ, ತಾಂಡಾ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಈಗಾಗಲೆ ಅಧಿಸೂಚನೆ ಹೊರಡಿಸಲಾಗಿದ್ದು, ಇನ್ನೂ ಅರ್ಹವಿರುವ ಹಟ್ಟಿ, ತಾಂಡಾಗಳನ್ನು ಕೂಡ ಕಂದಾಯ ಗ್ರಾಮಗಳಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಆಸ್ಪತ್ರೆಗಳ ಸುಧಾರಣೆ, ಉಪಕರಣ, ಲಸಿಕಾಕರಣಕ್ಕಾಗಿಯೇ ಸರ್ಕಾರ 1442 ಕೋಟಿ ರೂ. ಖರ್ಚು ಮಾಡಿದೆ. ಕೋವಿಡ್‍ನಿಂದಾಗಿ ರಾಜ್ಯದಲ್ಲಿ 37931 ಜನರು ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಮೃತಪಟ್ಟವರ ಶವಸಂಸ್ಕಾರವನ್ನು ಗೌರವಯುತವಾಗಿ ಮಾಡುವುದರ ಜೊತೆಗೆ ಧಾರ್ಮಿಕ ವಿಧಿವಿಧಾನದಂತೆ ಪಿಂಡ ಪ್ರದಾನವನ್ನೂ ಕೂಡ ನೆರವೇರಿಸಿದ್ದೇವೆ. ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳಿಗೆ 1.5 ಲಕ್ಷ ರೂ. ಹಾಗೂ ಎಪಿಎಲ್ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ ನೀಡುವ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಸಚಿವ ಅಶೋಕ್ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಕೇವಲ 2 ಕೋಟಿ ಮನೆಗಳಿಗೆ ಮಾತ್ರ ನಲ್ಲಿ ನೀರು ಪೂರೈಕೆಯಾಗುತ್ತಿತ್ತು. ಇದೀಗ 5 ವರ್ಷಗಳಲ್ಲಿ 5 ಕೋಟಿ ಮನೆಗಳಿಗೆ ನಲ್ಲಿ ನೀರು ತಲುಪಿಸುವ ಕಾರ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಾಡಿದೆ. ಜಲಜೀವನ್ ಮಿಷನ್ ಯೋಜನೆಯಡಿ ಸುರಹೊನ್ನೆ ಗ್ರಾಮದ 133 ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ವರ್ಷ ಅಮೃತ ಗ್ರಾಮ ಯೋಜನೆಯಡಿ 750 ಗ್ರಾ.ಪಂ. ಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, ಮುಂದಿನ ವರ್ಷ ರಾಜ್ಯದ 1500 ಗ್ರಾಮ ಪಂಚಾಯತ್‍ಗಳಿಗೆ ಅಮೃತ್ ಗ್ರಾಮ ಯೋಜನೆ ವಿಸ್ತರಿಸಲಾಗುವುದು ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಗ್ರಾಮೀಣ ಮಟ್ಟದ ಜನರಿಗೆ ತುಂಬಾ ಅನುಕೂಲವಾಗಿದೆ. ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳು ತಕ್ಷಣಕ್ಕೆ ಮಂಜೂರಾತಿ ಆಗುವಂತಾಗಿದೆ. ಅರ್ಹರಿಗೆ ಸರ್ಕಾರದ ಸವಲತ್ತು ತಲುಪಬೇಕು ಎನ್ನುವ ಸಕಾರದ ಆಶಯ ಈಡೇರುತ್ತಿದೆ. ಸುರಹೊನ್ನೆ ಗ್ರಾಮ ಶೇ. 100 ರಷ್ಟು ಕೋವಿಡ್ ನಿರೋಧಕ ಲಸಿಕೆ ಪೂರ್ಣಗೊಳಿಸಿದ ಗ್ರಾಮವಾಗಿ ಘೋಷಣೆಯಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೆ 14 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಇನ್ನೂ 2 ಲಕ್ಷ ಮಾತ್ರ ಬಾಕಿ ಇದೆ. ಶೀಘ್ರವೇ ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮಾತನಾಡಿ, ಸರ್ಕಾರಿ ಸೌಲಭ್ಯವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕನಸು ಕಂದಾಯ ಸಚಿವರದ್ದಾಗಿದೆ. ಗುಡಿಸಲು ಮುಕ್ತ ಹಾಗೂ ಕಸಮುಕ್ತ ಗ್ರಾಮಗಳ ನಿರ್ಮಾಣದ ಕನಸನ್ನು ನನಸಾಗಿಸಲು ಸರ್ಕಾರ ಶ್ರಮಿಸುತ್ತಿದೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ವಿಶೇಷವಾಗಿ ಅನುದಾನ ಒದಗಿಸುತ್ತಿದ್ದಾರೆ. ನ್ಯಾಮತಿ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವಂತಾಗಬೇಕು, ಇದಕ್ಕಾಗಿ ಮಿನಿ ವಿಧಾನಸೌಧವನ್ನು ಮಂಜೂರು ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಇದಕ್ಕೆ ತಮ್ಮ ಭಾಷಣದಲ್ಲಿ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನ್ಯಾಮತಿ ಪಟ್ಟಣದಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ ಶೀಘ್ರ ಮಂಜೂರು ಮಾಡಲಾಗುವುದು ಎಂದು ಘೋಷಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಜನವರಿ 2021 ರಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪ್ರಾರಂಭಿಸಿ, ಎರಡು ತಿಂಗಳು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಈ ಕಾರ್ಯಕ್ರಮವನ್ನು ಪುನರ್ ಪ್ರಾರಂಭಿಸಲಾಗಿದೆ ಎಂದರು.
ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಗಣ್ಯರನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರೇ ಖುದ್ದು ಎತ್ತಿನ ಗಾಡಿ ಚಲಾಯಿಸಿಕೊಂಡು, ಅದ್ಧೂರಿ ಮೆರವಣಿಗೆ ಮೂಲಕ ಸಮಾರಂಭದ ವೇದಿಕೆ ಆವರಣದೊಳಗೆ ಕರೆತಂದರು. ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದು, ಗಣ್ಯಾತಿಗಣ್ಯರಿಗೆ ಸುರಹೊನ್ನೆ ಗ್ರಾಮಕ್ಕೆ ಭವ್ಯ ಸ್ವಾಗತ ನೀಡಿದರು. ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು, ನ್ಯಾಮತಿ-ಸುರಹೊನ್ನೆ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ 26 ಘನತ್ಯಾಜ್ಯ ವಿಲೇವಾರಿ ವಾಹನಗಳ ಉದ್ಘಾಟನೆ ನೆರವೇರಿಸಿದರು, ಅಲ್ಲದೆ ಸಮಾರಂಭದ ಆವರಣದಲ್ಲಿ ವಿವಿಧ ಇಲಾಖೆಗಳಿಂದ ನಿರ್ಮಿಸಲಾಗಿದ್ದ ವಸ್ತುಪ್ರದರ್ಶನ ಮಳಿಗೆಗಳನ್ನು ಕೂಡ ಉದ್ಘಾಟಿಸಿದರು. ವಿವಿಧ ಇಲಾಖೆಗಳ ಮೂಲಕ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಿದರು.
ಶಾಸಕರುಗಳಾದ ಮಾಡಾಳ್ ವಿರುಪಾಕ್ಷಪ್ಪ, ಪ್ರೊ. ಲಿಂಗಣ್ಣ, ಎಸ್.ವಿ. ರಾಮಚಂದ್ರ, ದಾವಣಗೆರೆ ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಎಸ್‍ಪಿ ಸಿ.ಬಿ. ರಿಷ್ಯಂತ್, ಸುರಹೊನ್ನೆ ಗ್ರಾ.ಪಂ. ಅಧ್ಯಕ್ಷ ಹಾಲೇಶಪ್ಪ ಹೆಚ್, ಉಪಾಧ್ಯಕ್ಷೆ ರುಕ್ಮೀಣಿಯಮ್ಮ ಮುಂತಾದ ಗಣ್ಯರು ಉಪಸ್ಥಿತರಿದ್ದರು. (ಜಿಕೆ,ಎಸ್.ಎಚ್)

Leave a Reply

comments

Related Articles

error: