ಮೈಸೂರು

ಮ್ಯಾನ್ ಹೋಲ್ ದುರಸ್ತಿಗೆ ಆಗಮಿಸುವ ಪೌರಕಾರ್ಮಿಕರಿಗಿಲ್ಲ ಸುರಕ್ಷತೆ!?

ಮೈಸೂರು, ಮೇ.4:  ಸಾಂಸ್ಕೃತಿಕ ನಗರಿ ಮೈಸೂರು ಈಗಾಗಲೇ ವಿಶ್ವದಾದ್ಯಂತ ಗುರುತಿಸಿಕೊಂಡಿದೆ. ಸ್ವಚ್ಛ ನಗರಿ ಎಂಬ ಪಟ್ಟವನ್ನು ಎರಡು ಬಾರಿ ಈಗಾಗಲೇ ಅಲಂಕರಿಸಿದೆ. ಈ ಸ್ವಚ್ಛನಗರಿಗೆ ಕಾರಣರಾದವರು ಇಲ್ಲಿನ ಪೌರಕಾರ್ಮಿಕರು. ಆದರೆ ಸಂಬಂಧಪಟ್ಟವರು ಅವರನ್ನೇ ಮರೆಯುತ್ತಿದ್ದಾರಾ ಹೀಗೊಂದು ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಪೌರ ಕಾರ್ಮಿಕರು ಮ್ಯಾನ್ ಹೋಲ್ ದುರಸ್ತಿ ಕಾರ್ಯವನ್ನೂ ನಡೆಸುತ್ತಾರೆ. ಎಲ್ಲಾದರೂ ಬ್ಲಾಕ್ ಆದರೆ ಸರಾಗವಾಗಿ ಹರಿದುಹೋಗುವಂತೆ ಮಾಡಲು ಪೌರ ಕಾರ್ಮಿಕರ ಅವಶ್ಯಕತೆ ಬಹಳ ಇರಲಿದೆ. ಆದರೆ ಅವರು ಮ್ಯಾನ್ ಹೋಲ್ ದುರಸ್ತಿಗಿಳಿಯುವಾಗ ಸುರಕ್ಷತೆಗಳಿವೆಯೇ ಎಂಬುದನ್ನು ಕೇಳಿದರೆ ಅದಕ್ಕೆ ಉತ್ತರವಿಲ್ಲವಾಗಿದೆ. ಗುರುವಾರ ಮೈಸೂರಿನ ಬೋಗಾದಿ ಜಂಕ್ಷನ್ ಬಳಿಯ ರಿಂಗ್ ರಸ್ತೆಯಲ್ಲಿ ಮ್ಯಾನ್ ಹೋಲೊಂದು ಕೆಟ್ಟಿತ್ತು. ಅದರ ದುರಸ್ತಿಗಾಗಿ ಆಗಮಿಸಿದ ಪೌರಕಾರ್ಮಿಕ ಯಾವುದೇ ಸುರಕ್ಷತಾ ಕ್ರಮಗಳನ್ನೂ ಕೈಗೊಂಡಿರಲಿಲ್ಲ. ಕೈಗೆ ಗ್ಲೌಸ್ ಇಲ್ಲ. ಯಾವುದೇ ಸುರಕ್ಷತೆಯಿಲ್ಲ. ನಿಮಗೇನೂ ಭದ್ರತೆಗಾಗಿ ನೀಡಿಲ್ಲವೇ ಎಂದು ಪ್ರಶ್ನಿಸಿದಾಗ ಗ್ರಾಮಪಂಚಾಯತ್ ನವರು ಮ್ಯಾನ್ ಹೋಲ್ ನಿಂದ ನೀರು ಸುರಿಯುತ್ತಿದೆ. ದುರಸ್ತಿ ಮಾಡಿ ಎಂದು ಕಳುಹಿಸಿದ್ದಾರೆ ಏನೂ ನೀಡಿಲ್ಲ ಎಂದರು. ಗ್ಲೌಸ್ ಧರಿಸದೇ ಬರಿಕೈನಲ್ಲೇ ದುರಸ್ತಿ ಕಾರ್ಯ ನಡೆಸಿದರೆ ಮುಂದೆ ಅವರ ಆರೋಗ್ಯದ ಗತಿ?

ಪೌರಕಾರ್ಮಿಕರ ಹಿತ ಯಾವ ರೀತಿ ಕಾಪಾಡುತ್ತಾರೆ ಎನ್ನುವುದು ಇದರಿಂದಲೇ ತಿಳಿದುಬರಲಿದೆ. ಅಷ್ಟೇ ಅಲ್ಲ ಮನೆ ಮನೆ ಕಸ ಸಂಗ್ರಹಕ್ಕೆ ಬರುವವರೂ ಕೂಡ ಗ್ಲೌಸ್ ಧರಿಸಬೇಕು. ಆದರೆ ಅವರೂ ಬರಿಕೈನಲ್ಲೇ ಕಸವನ್ನು ಎತ್ತಿ ಹಿಡಿದು ಡಬ್ಬದಲ್ಲಿ ಹಾಕಿ ಹೋಗುತ್ತಾರೆ. ಇನ್ನಾದರೂ ಸಂಬಂಧಪಟ್ಟವರು ತಾವು ಮಾತ್ರ ಕ್ಷೇಮವಾಗಿದ್ದರೆ ಸಾಲದು ಎಂಬುದನ್ನರಿತು ಪೌರಕಾರ್ಮಿಕರ ಕ್ಷೇಮದ ಕುರಿತೂ ಗಮನ ಹರಿಸಿದರೆ ಒಳ್ಳೆಯದು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: