ದೇಶಪ್ರಮುಖ ಸುದ್ದಿ

ಲಖೀಂಪುರ್ ಖೇರಿ ಹಿಂಸಾಚಾರದ ವಿರುದ್ಧ ರೈತರ ‘ರೈಲ್‌ ರೋಖೋ’ ಪ್ರತಿಭಟನೆ

ದೇಶ(ನವದೆಹಲಿ)ಅ.18:-  ಇಂದು ಲಖೀಂಪುರ್ ಖೇರಿ ಹಿಂಸಾಚಾರದ ವಿರುದ್ಧ    ರೈತರು ಇಂದು ‘ರೈಲ್‌ ರೋಖೋ’ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತ ಸಂಘಟನೆಯು ದೇಶಾದ್ಯಂತ 6 ಗಂಟೆಗಳ ಕಾಲ ರೈಲ್‌ ರೋಖೋ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರಿಯಾಣದ ಎಲ್ಲಾ ರೈಲ್ವೆ ಹಳಿಗಳ ಮೇಲೆ ರೈತರು ಕುಳಿತು ಧರಣಿ ನಡೆಸುತ್ತಿದ್ದಾರೆ. ಪರಿಣಾಮ ಎಲ್ಲಾ ಮಾರ್ಗಗಳಲ್ಲಿ ರೈಲು ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರನೇ ಘಟನೆಗೆ ಕಾರಣವಾಗಿದ್ದು ಆ  ಕಾರಣದಿಂದ ಅಜಯ್ ಮಿಶ್ರಾರನ್ನು ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕಬೇಕೆಂಬ ಬೇಡಿಕೆಯನ್ನಿರಿಸಿ  ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ಮುಂದುವರೆಯಲಿದೆ.

ಅಕ್ಟೋಬರ್‌ 3ರಂದು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ 8 ಜನರ ಪೈಕಿ ನಾಲ್ವರು ರೈತರು. ಬಿಜೆಪಿ ಕಾರ್ಯಕರ್ತರಿದ್ದ ವಾಹನಗಳು ರೈತರ ಮೇಲೆ ಹರಿದು ನಾಲ್ವರು ರೈತರು ಸಾವಿಗೀಡಾಗಿದ್ದರು.   ಆಕ್ರೋಶಗೊಂಡ ಪ್ರತಿಭಟನಾಕಾರರು ವಾಹನದಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದರು. ಆ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಅವರ ವಾಹನ ಚಾಲಕ ಮೃತಪಟ್ಟಿದ್ದರು.

ರೈತರ ಮೇಲೆ ನುಗ್ಗಿದ ವಾಹನಗಳ ಪೈಕಿ ಒಂದರಲ್ಲಿ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಸಹ ಇದ್ದರು ಎಂದು ರೈತರು ಆರೋಪಿಸಿದ್ದಾರೆ. ರೈತರ ಸಾವಿನ ಪ್ರಕರಣದ ಸಂಬಂಧ ಅಕ್ಟೋಬರ್‌ 9ರಂದು ಆಶಿಶ್‌ ಮಿಶ್ರಾ ಅವರನ್ನು ಬಂಧಿಸಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: