ಮೈಸೂರು

ಪ್ರಜಾಪ್ರಭುತ್ವ ಅಪಾಯದ ಅಂಚಿಗೆ : ಜನಜಾಗೃತಿ ಹಮ್ಮಿಕೊಳ್ಳಲು ನಿರ್ಧರಿಸಿದ ‘ ಸ್ವ ಪ್ರತಿಷ್ಠೆ ಅಳಿಸಿ- ಪ್ರಜಾಪ್ರಭುತ್ವ ಉಳಿಸಿ ‘ ವೇದಿಕೆ

ಮೈಸೂರು,ಅ.19:-  ತತ್ವ ರಾಜಕಾರಣ ಮರೆಯಾಗಿ ಸ್ವ ಪ್ರತಿಷ್ಠೆಯ ರಾಜಕಾರಣ ಮುನ್ನೆಲೆಗೆ ಬಂದ ಕಾರಣದಿಂದಲೇ ಇಂದು ಪ್ರಜಾಪ್ರಭುತ್ವ ಅಪಾಯದ ಅಂಚಿಗೆ ತಲುಪಿದೆ. ಇದರ ವಿರುದ್ಧ ಹಂತ ಹಂತವಾಗಿ ಜನಜಾಗೃತಿ ಹಮ್ಮಿಕೊಳ್ಳಲು  ‘ ಸ್ವ ಪ್ರತಿಷ್ಠೆ ಅಳಿಸಿ- ಪ್ರಜಾಪ್ರಭುತ್ವ ಉಳಿಸಿ ‘ ವೇದಿಕೆ ನಿರ್ಧರಿಸಿದೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಇಂದು ನಡೆದ ಚಿಂತನ ಮಂಥನದಲ್ಲಿ ಹಿರಿಯ ಸಾಹಿತಿಗಳು, ಪ್ರತಿಪರ ಚಿಂತಕರು, ಭಾಗವಹಿಸಿ  ಪ್ರಸ್ತುತ ರಾಜಕೀಯ ನಾಯಕರ ನಡವಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಇಂದು‌ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವೆ ದೊಡ್ಡ ಸಂಘರ್ಷ ಏರ್ಪಟ್ಟಿದ್ದು, ನಮ್ಮದು ಜಾತ್ಯಾತೀತ ಸಿದ್ಧಾಂತ ಪಕ್ಷ ಗಳ ನಾಯಕರೂ ಸಹ ತಮ್ಮ ಸ್ವ‌ಪ್ರತಿಷ್ಠೆಯ ರಾಜಕಾರಣದಿಂದಾಗಿ ಪರೋಕ್ಷವಾಗಿ ಕೋಮುವಾದಿ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವುದು  ಅತ್ಯಂತ ಅಪಾಯಕಾರಿ  ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಕೆಸರೆರಚಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ನೈತಿಕ ಪೊಲೀಸ್ ಗಿರಿ ಸಮರ್ಥನೆಯನ್ನು ಖಂಡಿಸಿದ ಸಭೆಯು, ಈ ನೆಲದ ಕಾನೂನಿನ ಮೇಲೆ ನಂಬಿಕೆ ಇರದ ವ್ಯಕ್ತಿಯೋರ್ವ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್. ಜನರ ಕೈಗೆ ಕಾನೂನು ಕೊಡುವುದಾದರೆ, ನೀವೇಕೆ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು‌ ಎಂದು ಸಭೆ ಪ್ರಶ್ನಿಸಿತು.

ಸಭೆಯಲ್ಲಿ  ಸ್ವ ಪ್ರತಿಷ್ಠೆ ಅಳಿಸಿ – ಪ್ರಜಾಪ್ರಭುತ್ವ ಉಳಿಸಿ’ ಘೋಷಣೆಯಡಿ ಜನಜಾಗೃತಿಗಾಗಿ ಒಂದು‌ ದಿನದ ಪ್ರತಿಭಟನೆ, ತತ್ವ ರಾಜಕಾರಣ ಮರು ಸ್ಥಾಪನೆಯ ಉದ್ದೇಶದಿಂದ ವಿಚಾರ ಸಂಕಿರಣ ಆಯೋಜನೆ. ಕೋಮುವಾದಿಗಳ ವಿರುದ್ಧ ಜಾತ್ಯಾತಿತ ಶಕ್ತಿಗಳನ್ನು ಒಗ್ಗೂಡಿಸಲು ಪರ್ಯಾಯ ರಾಜಕೀಯ ಮೈತ್ರಿ ಬಗ್ಗೆ ರಾಜಕೀಯ ನಾಯಕರಲ್ಲಿ ಮನವಿ ಮಾಡಲು ನಿರ್ಧರಿಸಲಾಯಿತು.

ನಿವೃತ್ತ ಪ್ರಾಧ್ಯಾಪಕ  ಪ್ರೊ. ಮಹೇಶ್ ಚಂದ್ರಗುರು ಮಾತನಾಡಿ  ದೇಶದಲ್ಲಿ ಸರ್ವಾಧಿಕಾರಿ ಧೋರಣೆಯನ್ನು ಮಟ್ಟ ಹಾಕಲು ಎಲ್ಲ ಜಾತ್ಯಾತೀತ ಶಕ್ತಿಗಳು ಸ್ವ ಪ್ರತಿಷ್ಠೆ ಬಿಟ್ಟು ಒಂದಾಗಬೇಕು. ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು ಇದ್ದಂತೆ‌. ಈ ಎರಡು ಪಕ್ಷ ಹೊರತು ಪಡಿಸಿ ಕಾಂಗ್ರೆಸ್, ಬಿಎಸ್ಪಿ, ಎಸ್ ಡಿ ಪಿ ಐ, ಸಿಪಿಐ ಎಂ, ರೈತ, ದಲಿತ, ವಿದ್ಯಾರ್ಥಿ,  ಕಾರ್ಮಿಕ ಸಂಘಟನೆಗಳು ಒಗ್ಗೂಡಬೇಕಿದೆ ಎಂದರು.

ಇತಿಹಾಸ ತಜ್ಞ   ಪ್ರೊ. ನಂಜರಾಜ ಅರಸ್ ಮಾತನಾಡಿ  ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಕಿತ್ತಾಟದಿಂದ ರಾಜ್ಯದಲ್ಲಿ ಕೋಮು ಶಕ್ತಿಗಳು ಬಲಗೊಳ್ಳುತ್ತಿವೆ. ಸಿದ್ದರಾಮಯ್ಯ ಅವರಿಗೆ ನಿಜವಾದ ಶತ್ರು ಬಿಜೆಪಿಯೆ ? ಅಥವಾ ಕುಮಾರಸ್ವಾಮಿಯೆ ? ಹಾಗೆಯೆ ಕುಮಾರಸ್ವಾಮಿ ಅವರಿಗೆ ತಮ್ಮ ಶತ್ರು ಸಿದ್ದರಾಮಯ್ಯ ಅವರೇ ? ಅಥವಾ ಬಿಜೆಪಿಯೆ ? ಈ ಬಗ್ಗೆ ಇಬ್ಬರೂ ನಾಯಕರು ರಾಜ್ಯದ ಜನತೆಗೆ ಉತ್ತರ ನೀಡಬೇಕು ಎಂದರು.

ಲೇಖಕ ನಾ.ದಿವಾಕರ್, ಸಿಪಿಐಎಂನ   ಲ.ಜಗನ್ನಾಥ್, ದಲಿತ ಪರ ಹೋರಾಟಗಾರರಾದ   ಲಕ್ಷ್ಮಣ ಹೊಸಕೋಟೆ, ಲೇಖಕ ಬಾರಕೋಲು ರಂಗಸ್ವಾಮಿ, ಶಬೀರ್ ಮುಸ್ತಾಫ, ಸಂಶೋದನ ವಿದ್ಯಾರ್ಥಿ ಕಾರ್ತಿಕ್ ಪ್ರಜ್ವಲ್, ಅರವಿಂದ‌ ಶರ್ಮ, ಕುಕ್ಕರಹಳ್ಳಿ ನಂಜುಂಡಸ್ವಾಮಿ ಮೊದಲಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: