ಕರ್ನಾಟಕಪ್ರಮುಖ ಸುದ್ದಿಮೈಸೂರು

ಜನ್ಮದಾತೆಯ 94ನೇ ಹುಟ್ಟಹಬ್ಬದ ಕೋರಿಕೆ ನೆರವೇರಿಸಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು/ಬೆಂಗಳೂರು,ಅ.20:- ಮೈಸೂರು-ಚಾಮರಾಜನಗರ  ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಮ್ಮ ಜನ್ಮದಾತೆ  ಸೀತಮ್ಮ ತಿಮ್ಮೇಗೌಡ ಅವರ ಹುಟ್ಟುಹಬ್ಬವನ್ನು ಕಳೆದ ವಾರವಷ್ಟೇ ಆಚರಿಸಿದರು. ಮಗನ ಬಳಿ ತಾಯಿ ಸೀತಮ್ಮ ಹುಟ್ಟುಹಬ್ಬಕ್ಕೆ  ಕೇಳಿದ ಗಿಫ್ಟ್  ಮಾತ್ರ  ವಿಶೇಷವಾಗಿತ್ತು.

ಹುಟ್ಟುಹಬ್ಬಕ್ಕೆ ಏನು ಕೊಡಬೇಕು ತಮಗೆ ಎಂದು ಸಚಿವರು ತಮ್ಮ ಮಾತೃಶ್ರೀಯವರಲ್ಲಿ ಕೇಳಿದ್ದರು. ಆಗ ಅವರು ನನಗೆ ವಯಸ್ಸು 94 ಆಗುತ್ತಿದೆ. ನನಗೆ ಏನೇನು ಅವಶ್ಯಕತೆಗಳಿವೆಯೋ ಅದನ್ನೆಲ್ಲ ನೀನು ಪೂರೈಸಿದ್ದೀಯ. ಅದರೆ ನಾನು ರಾಜಕೀಯ ನಾಯಕ, ಮಾಜಿ ಮುಖ್ಯಮಂತ್ರಿಗಳಾದ   ಎಸ್ ಎಂ ಕೃಷ್ಣ ಅವರ ಅಭಿಮಾನಿ. ಅವರನ್ನು ಒಮ್ಮೆ ಭೇಟಿ ಮಾಡಬೇಕು ಎಂದು ಕೇಳಿದ್ದರಂತೆ.

ಅದಕ್ಕೆ ಸಚಿವರು ಈ ವಿಷಯವನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಗಳಾದ   ದಿನೇಶ್ ಗೂಳಿಗೌಡ ಅವರಿಗೆ ತಿಳಿಸಿದ್ದು, ಅವರು  ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಬಳಿ ಸಚಿವರ ಮಾತೃಶ್ರೀಯವರ ಹುಟ್ಟುಹಬ್ಬದ ಕೋರಿಕೆಯನ್ನು ತಿಳಿಸಿದ್ದರಂತೆ, ತಮ್ಮ ಮನೆಗೆ ಯಾವಾಗ,ಯಾವ ಸಮಯಕ್ಕೆ ಸಚಿವರ ತಾಯಿಯವರನ್ನು ಕರೆದುಕೊಂಡು  ಬರಬೇಕೆಂದು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಬಳಿ ಕೇಳಿದಾಗ  ಇದನ್ನು ಕೇಳಿದ ಎಸ್.ಎಂ. ಕೃಷ್ಣ ಅವರು ಸಚಿವರ ಮಾತೃಶ್ರೀಯವರು ನನಗಿಂತ ಹಿರಿಯರು. ಹಾಗಾಗಿ ಅವರು ನಮ್ಮ ಮನೆಗೆ ಬರುವುದು ಉಚಿತವಲ್ಲ.  ನಾನೇ ಅವರ ಮನೆಗೆ ಬಂದು ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದು, ಕೊಟ್ಟ ಮಾತಿನಂತೆ ಮಂಗಳವಾರ ರಾತ್ರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ  ಎಸ್ .ಎಂ. ಕೃಷ್ಣ ಭೇಟಿ ನೀಡಿದ್ದರು. ಸಚಿವರ ಮಾತೃಶ್ರೀ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸುವ ಮೂಲಕ ಅವರ ಕೋರಿಕೆಯನ್ನು ಈಡೇರಿಸಿದ್ದಾರೆ. ತಮ್ಮ ತಾಯಿಯ ಕೋರಿಕೆಯನ್ನು ನೆರವೇರಿಸಲು ಕೃಷ್ಣ ಅವರೇ ತಮ್ಮ ಮನೆಗೆ ಆಗಮಿಸಿದ್ದನ್ನು ಕಂಡು ಸಚಿವ ಎಸ್ ಟಿ ಸೋಮಶೇಖರ್ ಅವರ ಕಣ್ಗಳಲ್ಲಿ ಆನಂದಭಾಷ್ಪ ಹರಿದಿತ್ತು.

ಈ ಸಂದರ್ಭದಲ್ಲಿ ಸಚಿವರ ಪತ್ನಿ ರಾಧಾ ಸೋಮಶೇಖರ್ ಹಾಗೂ ಪುತ್ರ ನಿಶಾಂತ್ ಸೋಮಶೇಖರ್ ಕೂಡ ಸ್ಥಳದಲ್ಲಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: