ಪ್ರಮುಖ ಸುದ್ದಿಮೈಸೂರು

ವಿಶ್ವಕ್ಕೆ ರಾಮರಾಜ್ಯದ ಪರಿಕಲ್ಪನೆಯನ್ನು ಪರಿಚಯ ಮಾಡಿಕೊಟ್ಟ ಮಹಾನ್ ದಾರ್ಶನಿಕ ವಾಲ್ಮೀಕಿ ಮಹರ್ಷಿ : ಸಚಿವ ಎಸ್.ಟಿ.ಸೋಮಶೇಖರ್ ಬಣ್ಣನೆ

ಮೈಸೂರು,ಅ.20:- ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿಗಳು ಇಡೀ ವಿಶ್ವಕ್ಕೆ ರಾಮರಾಜ್ಯದ ಪರಿಕಲ್ಪನೆಯನ್ನು ಪರಿಚಯ ಮಾಡಿಕೊಟ್ಟ ಮಹಾನ್ ದಾರ್ಶನಿಕ. ಬೇಡನೊಬ್ಬ ಮಹಾನ್ ಕವಿಯಾಗಿದ್ದು ಮಾತ್ರವಲ್ಲದೆ ಆದರ್ಶ ಶಿಕ್ಷಕನಾಗಿ, ಪ್ರಜೆಗಳನ್ನು ಯಾವ ರೀತಿ ರಕ್ಷಿಸಬೇಕು, ಯಾವ ರೀತಿ ಆಡಳಿತ ನಡೆಸಬೇಕು ಎಂಬುದರ ಕುರಿತು ಪ್ರಜಾಪ್ರಭುತ್ವದ ಸಮಗ್ರ ಪರಿಕಲ್ಪನೆಯನ್ನು ರಾಮಾಯಣದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟ ಮಹಾಕವಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬಣ್ಣಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಅಖಂಡ ಭಾರತದ ಪ್ರಕೃತಿ ಸೌಂದರ್ಯ, ಬೆಟ್ಟಗುಡ್ಡ ಪರ್ವತಗಳು ಸೇರಿದಂತೆ ಪ್ರತಿಯೊಂದು ಸ್ಥಳವನ್ನು ಒಂದು ಸ್ಥಳದಲ್ಲೇ ಕೂತು ಕರಾರುವಕ್ಕಾಗಿ ಮಹಾಕಾವ್ಯದಲ್ಲಿ ಉಲ್ಲೇಖಿಸಿದ್ದಾರೆ. ಮಾತ್ರವಲ್ಲದೆ ವಿಶ್ವಕ್ಕೆ ಸಂಸ್ಕೃತಿಯನ್ನು ಪಸರಿಸಿದ ಆದಿಕವಿ ವಾಲ್ಮೀಕಿ ಜಯಂತಿಯನ್ನು ಇಂದು ನಾವೆಲ್ಲಾ ಆಚರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಸಾಮಾನ್ಯ ವ್ಯಕ್ತಿಯೊಬ್ಬ ಮಹಾನ್ ಕಾವ್ಯ ರಚಿಸುವಷ್ಟರಮಟ್ಟಿಗೆ ತಪಸ್ಸು ಮಾಡಿ ಜ್ಞಾನ ಸಂಪಾದನೆ ಮಾಡಿದ ಮಹರ್ಷಿ ವಾಲ್ಮೀಕಿ, ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ದಾರಿಯನ್ನು ತೋರಿಸಿಕೊಟ್ಟ ಇಂತಹ ಮೇರು ವ್ಯಕ್ತಿ ಈ ಪುಣ್ಯ ಭೂಮಿಯಲ್ಲಿ ಜನಿಸಿದ್ದು ನಾವೆಲ್ಲಾ ಹೆಮ್ಮೆ ಪಡುವಂತಹದ್ದು ಎಂದಿದ್ದಾರೆ.

ರಾಮಾಯಣ ಇಲ್ಲದೆ ವಾಲ್ಮೀಕಿ ಇಲ್ಲ, ವಾಲ್ಮೀಕಿ ಇಲ್ಲದೆ ರಾಮಾಯಣವಿಲ್ಲ. ರಾಮಾಯಣವನ್ನು ಆಧರಿಸಿ ಅನೇಕ ಕಾವ್ಯ, ಕೃತಿಗಳು ಹೊರಬಂದಿವೆಯಾದರೂ ಅವೆಲ್ಲವೂ ವಾಲ್ಮೀಕಿ ರಾಮಾಯಣ ಜನ್ಮದಾತೆಯಾಗಿದೆ. ವಾಲ್ಮೀಕಿ ರಾಮಾಯಣ ಧಾರ್ಮಿಕ, ಸಾಮಾಜಿಕ, ಸದ್ಗುಣಗಳನ್ನು ಪ್ರತಿಪಾದಿಸುವ ದಾರಿದೀಪವಾಗಿದೆ. ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವುದರ ಜೊತೆಗೆ ಪ್ರತಿಯೊಬ್ಬರು ಅದರಲ್ಲೂ ಯುವಜನತೆ ಮತ್ತು ವಿದ್ಯಾರ್ಥಿಗಳು ಅವರು ರಚಿಸಿರುವ ರಾಮಾಯಣವನ್ನು ಓದಿ ಮೈಗೂಡಿಸಿಕೊಳ್ಳಬೇಕು ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: