
ಮೈಸೂರು
ಮೈಸೂರಿನಲ್ಲಿ ನಡೆಯುತ್ತಿರುವ ಕೊರೋನಾ ಲಸಿಕಾಭಿಯಾನ 2ನೇ ದಿನಕ್ಕೆ
ಮೈಸೂರು,ಅ.21:- ಮೈಸೂರು ಮಹಾನಗರ ಪಾಲಿಕೆಯು ಮೂರು ದಿನಗಳ ಮೆಗಾ ಕೊರೋನಾ ಲಸಿಕಾಭಿಯಾನವನ್ನು ನಿನ್ನೆಯಿಂದಲೇ ಆರಂಭಿಸಿದ್ದು, ಎರಡನೇ ದಿನಕ್ಕೆ ಕಾಲಿರಿಸಿದೆ.
ಮೈಸೂರು ನಗರದಾದ್ಯಂತ ಎಲ್ಲ 65ವಾರ್ಡ್ ಗಳಲ್ಲಿ ಬೆಳಿಗ್ಗೆ 10ಗಂಟೆಯಿಂದಲೇ ಬೃಹತ್ ಲಸಿಕಾಭಿಯಾನ ಆರಂಭವಾಗಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯೂ ಬರುತ್ತಿದೆ. ವಾರ್ಡ್ ಗೊಂದರಂತೆ ಆಯೋಜಿಸಲಾದ ಅಭಿಯಾನದಲ್ಲಿ ಓರ್ವ ನೋಡಲ್ ಅಧಿಕಾರಿ, ಮೇಲ್ವಿಚಾರಕ, ಡೇಟಾ ಎಂಟ್ರಿ ಆಪರೇಟರ್, ಸ್ಟಾಫ್ ನರ್ಸ್ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದಾರೆ. ನಾಗರಿಕರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ ಹಾಗೂ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಆಯಾ ವಾರ್ಡ್ ಗಳ ಪಾಲಿಕೆಯ ಸದಸ್ಯರು, ಜನಪ್ರತಿನಿಧಿಗಳು ಲಸಿಕೆ ಪಡೆಯದೇ ಇರುವವರನ್ನು ಕರೆತಂದು ಲಸಿಕೆ ಕೊಡಿಸುತ್ತಿದ್ದಾರೆ. ಪಾಲಿಕೆಯ ವತಿಯಿಂದ ಲಸಿಕೆ ಪಡೆಯದವರು ಲಸಿಕೆ ಪಡೆದುಕೊಳ್ಳಿ ಎಂದು ವಾಹನದಲ್ಲಿ ತೆರಳಿ ಮೈಕ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿನ್ನೆ ಒಂದೇ ದಿನ ನಗರದಲ್ಲಿ ಏಳುಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. (ಕೆ.ಎಸ್,ಎಸ್.ಎಚ್)