ಮೈಸೂರು

ಬೆಳ್ಳಂಬೆಳಿಗ್ಗೆ ಮೈಸೂರಿನಲ್ಲಿ ಗುಡುಗು ಮಿಂಚು ಸಹಿತ ಮಳೆರಾಯನ ಅಬ್ಬರ : ಕೆರೆಯಾದ ಆರ್ ಎಂಪಿ ಕ್ವಾಟ್ರಸ್

ಮೈಸೂರು,ಅ.23:-ಇಂದು ಬೆಳ್ಳಂಬೆಳಿಗ್ಗೆ ಮೈಸೂರಿನಲ್ಲಿ ಮಳೆರಾಯ ಗುಡುಗು-ಮಿಂಚು ಸಹಿತ ಅಬ್ಬರಿಸಿದ್ದಾನೆ. ಇಂದು ಬೆಳಿಗ್ಗೆ 5.45ರಿಂದಲೇ ಭಾರೀ ಮಳೆ ಮೈಸೂರಿನಲ್ಲಿ ಸುರಿದಿದೆ.

ಭಾರೀ ಮಳೆ ಆರಂಭಗೊಂಡು ಸುಮಾರು 9.30ರ ವರೆಗೂ ಹನಿಹನಿಯಾಗಿ ಬೀಳುತ್ತಲೇ ಇತ್ತು. ಭಾರೀ ಗಾಳಿ ಮಳೆಯೊಂದಿಗೆ ಗುಡುಗು-ಮಿಂಚು ಇದ್ದ ಕಾರಣ ಹಲವೆಡೆ ವಿದ್ಯುತ್ ಸ್ಥಗಿತಗೊಂಡಿತ್ತು. ಬೆಳ್ಳಂಬೆಳಿಗ್ಗೆ ಉದ್ಯೋಗಕ್ಕೆ ತೆರಳುವವರು ವಿದ್ಯುತ್ ಸ್ಥಗಿತಗೊಂಡ ಕಾರಣ ಮನೆಯಲ್ಲಿನ ಕೆಲಸ ಪೂರ್ಣಗೊಳಿಸದೇ ಕಛೇರಿಗೆ ಬರುವಂತಾಗಿತ್ತು. ಭಾರೀ ಮಳೆಯಿಂದಾಗಿ 7ಗಂಟೆಯವರೆಗೂ ಕತ್ತಲು ಕವಿದ ವಾತಾವರಣವೇ ಕಂಡು ಬಂದಿತ್ತು.

ಭಾರೀ ಮಳೆಯ ಕಾರಣ  ಮೈಸೂರಿನ ಕುವೆಂಪುನಗರದ ಐಶ್ವರ್ಯ ಲೇ ಔಟ್​ನ ಆರ್‌ಎಂಪಿ ಕ್ವಾಟ್ರಸ್ ಕೆರೆಯಂತಾಗಿದೆ. ಮೇಯರ್ ಪ್ರತಿನಿಧಿಸುವ ವಾರ್ಡ್‌ನಲ್ಲಿಯೇ ಅವಾಂತರ ಸೃಷ್ಟಿಯಾಗಿದ್ದು, ಸೇತುವೆ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಭಾರೀ ಮಳೆಯಾದರೆ ಕ್ವಾಟ್ರಸ್ ಗೆ ನೀರು ನುಗ್ಗುತ್ತಿದ್ದು, ನಿವಾಸಿಗಳು ಪರದಾಡುವ ಪರಿಸ್ಥಿತಿ   ನಿರ್ಮಾಣವಾಗಿದೆ. ಕಳೆದ ಒಂದು ವರ್ಷದಿಂದ ಜನರು ಸಮಸ್ಯೆ ಎದುರಿಸುತ್ತಿದ್ದು, ಸಮಸ್ಯೆ ಪರಿಹರಿಸಲು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಮೈಸೂರಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ, ಅಕ್ಟೋಬರ್ 23ರವರೆಗೆ ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿತ್ತು. ಇದೀಗ ಅಕ್ಟೋಬರ್ 25 ಹಾಗೂ 26ರಂದು ವಿಪರೀತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹವಾಮಾನ ತಜ್ಞರ ಪ್ರಕಾರ ಅ. 25 ಅಥವಾ 26ರಂದು ಹಿಂಗಾರು ಮಳೆ ಆರಂಭವಾಗಲಿದ್ದು,  ಇಂದಿನಿಂದ ಅ. 26ರವರೆಗೆ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ.  ಅ. 24ರಂದು ಮಳೆ ಕೊಂಚ ಕಡಿಮೆ ಯಾಗಲಿದೆ. ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಕಡಿಮೆಯಾಗಿದ್ದು, ಇಂದಿನಿಂದ ಮೈಸೂರು, ಮಂಡ್ಯ,  ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ರಾಮನಗರ, ಕೋಲಾರ, ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ನಗರದಲ್ಲಿ ಯಾವುದೇ ಅನಾಹುತವಾಗಿರುವ ಕುರಿತು ಇದುವರೆಗೆ ವರದಿಯಾಗಿಲ್ಲ (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: