ಮೈಸೂರು

ಕಿತ್ತೂರು ರಾಣಿ ಚನ್ನಮ್ಮ ಮಹಿಳೆಯರಿಗೆ ಸ್ಫೂರ್ತಿ : ಡಾ.ವೈ ಡಿ ರಾಜಣ್ಣ

ಮೈಸೂರು,ಅ.23:- ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಯುವ ಭಾರತ್ ಸಂಘಟನೆ ವತಿಯಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವವನ್ನು ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹಿರಿಯ ಸಮಾಜ ಸೇವಕ  ಡಾ ಕೆ ರಘುರಾಂ ವಾಜಪೇಯಿ  ಮಾತನಾಡಿ ಕಿತ್ತೂರು ರಾಣಿ ಚನ್ನಮ್ಮ ನಂತಹ ಧೀರ ಮಹಿಳೆಯ ಸ್ಮಾರಕ, ಪುತ್ಥಳಿ  ಮೈಸೂರಿನಲ್ಲಿ ಸ್ಥಾಪನೆಯಾಗಬೇಕು. ಆ ಮೂಲಕ ರಾಜಪ್ರಭುತ್ವದ ಮೈಸೂರಿನಲ್ಲೂ ಕೂಡ ವೀರ ಮಹಿಳೆಯನ್ನು  ನೆನಪಿಸುವ ಕೆಲಸ ಆ ಮೂಲಕ ಆಗಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್  ನಿಕಟಪೂರ್ವ ಅಧ್ಯಕ್ಷ ಡಾ.ವೈ ಡಿ ರಾಜಣ್ಣ  ಮಾತನಾಡಿ  ಕಿತ್ತೂರು ರಾಣಿ ಚನ್ನಮ್ಮ  ಭಾರತದ ಧೀರ ಮಹಿಳೆ ಯರಲ್ಲಿ ಪ್ರಮುಖರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಮುಂಚೆ ಬ್ರಿಟಿಷರ ಅಧಿಪತ್ಯಕ್ಕೆ ಧಿಕ್ಕಾರವನ್ನು ಹೇಳಿ ಈ ನೆಲದ ಸ್ವಾಭಿಮಾನ ಹಾಗೂ ಶೌರ್ಯಕ್ಕೆ ಮತ್ತೊಂದು ಹೆಸರಾಗಿ ತಮ್ಮ ಬದುಕನ್ನು ಇವತ್ತಿಗೂ ಮಾದರಿಯಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಪ್ರಜಾಪ್ರಭುತ್ವ ಸರ್ಕಾರಗಳು  ಮಹಿಳೆಯರಿಗೆ ಆಡಳಿತಾತ್ಮಕ ಮೀಸಲಾತಿ ಕೊಡುವುದರ ಸಂದರ್ಭದಲ್ಲಿ ಮೀನಾಮೇಷ ಎಣಿಸುತ್ತಿರುವ ಸಂದರ್ಭದಲ್ಲೇ ಕಿತ್ತೂರು ರಾಣಿ ಚನ್ನಮ್ಮ ಈ ನೆಲದ  ಮಹಿಳೆಯರ ಅಸ್ಮಿತೆಯಾಗಿ ಅಸ್ತಿತ್ವವನ್ನು  ತೋರಿಸಿದ್ದಾರೆ. ನಮ್ಮ ಸರ್ಕಾರಗಳು ಕಿತ್ತೂರು ರಾಣಿ ಚನ್ನಮ್ಮನವರ ಹಿನ್ನೆಲೆಯ  ನೆಲೆಯನ್ನು ಗಮನಿಸಿ ಇನ್ನು ಮುಂದಾದರೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಕೊಡಬೇಕೆಂದು  ಸರ್ಕಾರಕ್ಕೆ  ಮನವಿ ಮಾಡಿದರು.

ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ಮಾತನಾಡಿ ಛಲ ಮತ್ತು ಪ್ರತಿಭೆ ಇದ್ದಲ್ಲಿ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂಬುದನ್ನು ಚನ್ನಮ್ಮನಿಂದ ನಾವು ಕಲಿಯಬೇಕು. ಇತಿಹಾಸದಲ್ಲಿ ಹೆಣ್ಣನ್ನು ಭೂಮಿ, ದೇವಿ, ದುರ್ಗಿಗೆ ಹೋಲಿಸಲಾಗಿದೆ. ತಾಳ್ಮೆಗೂ ಒಂದು ಮಿತಿ ಇದೆ. ಅದನ್ನು ಮೀರಿದರೆ ಹೆಣ್ಣು ದುರ್ಗಿ ಅವತಾರ ತಾಳುತ್ತಾಳೆ ಎಂಬುದಕ್ಕೆ ರಾಣಿ ಚನ್ನಮ್ಮ ನಿದರ್ಶನ. ತನ್ನ ಸಣ್ಣ ಸಾಮ್ರಾಜ್ಯ ಕಾಪಾಡಿಕೊಳ್ಳಲು ಬ್ರಿಟಿಷರ ವಿರುದ್ಧ ಸಿಡಿದೆದ್ದ ದಿಟ್ಟ ಮಹಿಳೆ ಚನ್ನಮ್ಮ. ಆಕೆಯ ಧೈರ್ಯ, ಸಾಹಸವನ್ನು ನಾವು ನೆನ‍ಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಯುವ ಭಾರತ್ ಸಂಘಟನೆ ಅಧ್ಯಕ್ಷ ಜೋಗಿ ಮಂಜು ,ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್ ,ಜೀವಧಾರ ಗಿರೀಶ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ರಾಜ್ಯ ನಿರ್ದೇಶಕಿ ರೇಣುಕಾ ರಾಜ್ ,ಮೃಗಾಲಯ ಪ್ರಾಧಿಕಾರದ ನಿರ್ದೇಶಕಿ ಜ್ಯೋತಿ ರಚನಾ ,ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ,ಚಾಮರಾಜ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮಿ ,ಕೆಂಪೇಗೌಡ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ್ ಗೌಡ ,ಸುದರ್ಶನ್ ,ಶ್ರೀನಿವಾಸ್, ವಿಘ್ನೇಶ್ವರ್ ಭಟ್ ,ಮುರುಗೇಶ್ ,ಸನತ್ ,ಚರಣ್ ,ಮಹೇಂದರ್ ಶೈವ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: