ಮೈಸೂರು

ಶಾಶ್ವತ ನೀರಾವರಿಯ ಮೂಲಕ ಎಲ್ಲೆಡೆ ಹಸಿರು ಕಾಣುವುದು ನನ್ನ ಕನಸು :  ಶಾಸಕ ಹರ್ಷವರ್ಧನ್

ಮೈಸೂರು, ಅ.23:-  ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಜಾರಿಗೊಳಿಸಿ ಇಡೀ ಕ್ಷೇತ್ರದಲ್ಲಿ ಶಾಶ್ವತ ನೀರಾವರಿಯ ಮೂಲಕ ಎಲ್ಲಿ ನೋಡಿದರೂ ಹಸಿರು ಕಾಣಬೇಕು ಎನ್ನುವ ಗುರಿ ಹೊತ್ತು ಸಾಗುತ್ತಿರುವ ಶಾಸಕ ಬಿ.ಹರ್ಷವರ್ಧನ್, ನಂಜನಗೂಡು ಕ್ಷೇತ್ರದ ಹಸಿರು ಕ್ರಾಂತಿಯ ಹರಿಕಾರರಾಗುವತ್ತ ಸಾಗುತ್ತಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈಮ೯ಲ್ಯ ಇಲಾಖೆಯ ವತಿಯಿಂದ 9 ಕೋಟಿ ರೂ. ವೆಚ್ಚದಲ್ಲಿ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹಾಗೂ ಇತರ 55 ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪುನಃಶ್ಚೇತನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಹರ್ಷವರ್ಧನ್, ಕ್ಷೇತ್ರವನ್ನು ಹಸಿರಿಕರಣಗೊಳಿಸುವ ತಮ್ಮ ಕನಸನ್ನು ಎಳೆಎಳೆಯಾಗಿ ಬಿಡಿಸಿಟ್ಟರು.ಜೊತೆಗೆ, ಕ್ಷೇತ್ರಕ್ಕೆ ಹಿಂದಿನಿಂದಲೂ ಆಗುತ್ತಿರುವ ಅನ್ಯಾಯದ ಕುರಿತೂ ವಿವರಿಸಿದ ಅವರು, ಕಳೆದ ಮೂರೂವರೆ ವರ್ಷದ ತಮ್ಮ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ 500 ಕೋಟಿ ರೂ.ಗಳಿಗಿಂತ ಹೆಚ್ಚಿನ ಕಾಮಗಾರಿ ಮಾಡಿಸಲಾಗಿದ್ದು, ಇದರಲ್ಲಿ 300 ಕೋಟಿ ರೂಗಳಿಗಿಂತ ಹೆಚ್ಚು ನೀರಾವರಿ  ಕಾಮಗಾರಿಯಾಗಿದೆ ಎಂದು ಮಾಹಿತಿ ನೀಡಿದರು.

‘ನಾನು ಚುನಾವಣೆ ಸಂದಭ೯ದಲ್ಲಿ ಈ ಭಾಗದ ಹಳ್ಳಿಗಳಿಗೆ ತೆರಳಿದಾಗ ಜನರು ಕುಡಿಯುವ ನೀರಿನ ಸಮಸ್ಯೆಯ ಕುರಿತು ಹೇಳುತ್ತಿದ್ದರು. ಅದರಲ್ಲೂ ವಿಶೇಷವಾಗಿ ಮಹಿಳೆಯರು ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ರಸ್ತೆಯುದ್ದಕ್ಕೂ ಸಾಲಿನಲ್ಲಿ ನಿಲ್ಲುತ್ತಿದ್ದ ದೃಶ್ಯ ಕಂಡು ನಾನು ತುಂಬಾ ಮರುಗಿದ್ದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಶಾಶ್ವತ ಯೋಜನೆ ರೂಪಿಸುವುದು ನನ್ನ  ಗುರಿಯಾಗಿತ್ತು. ಅದರಂತೆ ಶ್ರಮಿಸಿ ಇಂದು ಅಡಿಗಲ್ಲು ಹಾಕಿದ್ದೇನೆ” ಎಂದು ಹರ್ಷವರ್ಧನ್ ವಿವರಿಸಿದರು.

ಹಿಂದೆ ಅನೇಕರು ಹಲವಾರು ಭರವಸೆಗಳನ್ನು ನೀಡಿದ್ದರು. ಗುದ್ದಲಿ ಪೂಜೆಗಳನ್ನೂ ಮಾಡಿದ್ದರು.  ಕೆಲಸಗಳು ಮಾತ್ರ ಆಗಲಿಲ್ಲ. ಆದರೆ ನಾನು ಕೊರೋನಾ ಸಂದರ್ಭದಲ್ಲೂ ಕೈಕಟ್ಟಿ ಕುಳಿತುಕೊಳ್ಳದೆ ಪ್ರಸ್ತಾವಿತ ಯೋಜನೆಗಳನ್ನು ಮಂಜೂರು ಮಾಡಿಸಲು ಫಾಲೋ ಅಪ್ ಮಾಡುತ್ತಲೇ ಇದ್ದೆ. ಆದರೆ ಆಗ ಹೆಚ್ಚಿನ ಸಿಬ್ಬಂದಿಗಳು ಕಚೇರಿಗೆ ಬಾರದೇ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ. ಇದನ್ನು ಯಾರೂ ತಪ್ಪಾಗಿ ತಿಳಿಯುವ ಅಗತ್ಯವಿಲ್ಲ. ಈಗ ಮುಂದಿನ ಒಂದೂವರೆ ವರ್ಷದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ನನ್ನ ಗುರಿ ಎಂದು ಘೋಷಿಸಿದರು.

ರೈತರಿಗೆ ಶಾಶ್ವತವಾಗಿ ನೀರು ಸಿಗಬೇಕು. ಇಡೀ ನಂಜನಗೂಡು ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಹಸಿರೇ ಕಾಣಬೇಕು. ಇದು ನನ್ನ ಕನಸು. ಈಗಾಗಲೆ ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ನನ್ನ ಮಾತು ಸ್ವಲ್ಪ ಒರಟು ಎನಿಸಿದರೂ ಜನಪರ ಕೆಲಸ ಮಾಡುವುದರಲ್ಲಿ ನಾನು ಹಿಂದೆ ಮುಂದೆ ನೋಡುವುದಿಲ್ಲ ಎಂದ ಅವರು, ಕ್ಷೇತ್ರದ ನೀರಾವರಿ ಯೋಜನೆಗಳ ಮಂಜೂರಾತಿಗೆ ಸಹಕರಿಸಿದ ಎಲ್ಲ ಅಧಿಕಾರಿ ವಗ೯ದವರಿಗೂ, ಅದರಲ್ಲೂ ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪನವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಇದಕ್ಕೂ ಮೊದಲು ಮಾತನಾಡಿದ ವಿವಿಧ ಗಣ್ಯರು, 2008ರಲ್ಲೇ ಬಿ.ಎಸ್.ಯಡಿಯೂರಪ್ಪ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ನಂತರದಲ್ಲಿ ಕಾಮಗಾರಿ ಮುಂದುವರಿಯಲೇ ಇಲ್ಲ. ಇದನ್ನು ಸಾಕಾರ ಮಾಡಲು ಮತ್ತೆ ಬಿಜೆಪಿ ಸರಕಾರವೇ ಬರಬೇಕಾಯಿತು ಎಂದರು.

ನಂಜನಗೂಡಿಗೆ ಇಷ್ಟೊಂದು ದೊಡ್ಡ ಮೊತ್ತದ ಅನುದಾನವನ್ನು ಹಿಂದೆ ಯಾರೂ ತಂದಿರಲಿಲ್ಲ. 70 ಕೋಟಿ ರೂ. ವೆಚ್ಚದಲ್ಲಿ ಕವಲಂದೆ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಡಿಪಿಆರ್ ಕೂಡ ಸಿದ್ದವಾಗಿದ್ದು, ಶೀಘ್ರದಲ್ಲೇ ಮಂಜೂರಾತಿ ಸಿಗಲಿದೆ. 80 ಕೋಟಿ ರೂ. ವೆಚ್ಚದ ನುಗು ನೀರಾವರಿ ಯೋಜನೆಗೆ ಕೂಡ ಮಂಜೂರಾತಿ ಸಿಕ್ಕಿದೆ ಎಂದೂ ವಿವರಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: