ಕರ್ನಾಟಕಪ್ರಮುಖ ಸುದ್ದಿಮೈಸೂರು

ದೇಶದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವುದು ಆರ್ ಎಸ್ ಎಸ್ ನ ಅಂತಿಮ ಗುರಿಯಾಗಲಿ : ವಿ.ಶ್ರೀನಿವಾಸ್ ಪ್ರಸಾದ್

ಮೈಸೂರು,ಅ.23:- ದೇಶದಲ್ಲಿ ಸಾಮರಸ್ಯದ ಕೊರತೆ ಇದೆ. ಅಸಮಾನತೆ, ಅಸ್ಪೃಶ್ಯತೆ, ಅನಕ್ಷರತೆ ತುಂಬಿ ತುಳುಕುತ್ತಿದೆ ಸಾಮಾಜಿಕ ಸಾಮರಸ್ಯ ಮೂಡಿಸುವುದು ಆರ್‌ಎಸ್‌ಎಸ್‌ನ ಅಂತಿಮ ಗುರಿಯಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭ್ಯುದಯಕ್ಕೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಸಲಹೆ ನೀಡಿದರು.
ನಗರದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಇಂದು ಮ.ವೆಂಕಟರಾಮು ಅಭಿನಂದನಾ ಸಮಿತಿ ಹಾಗೂ ಪ್ರಲಕ್ಷ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಮ.ವೆಂಕಟರಾಮು ಅವರ ಅಭಿನಂದನಾ ಕಾರ್ಯಕ್ರಮ ಹಾಗೂ ಸಾಮರಸ್ಯದ ಸಹೃದಯಿ ಮ.ವೆಂಕಟರಾಮು ಗ್ರಂಥ ಬಿಡುಗಡೆ’ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಸಮಾಜದಲ್ಲಿ ಸಾಮಾಜಿಕ . ಕೊಪ್ಪಳ ಜಿಲ್ಲೆಯಲ್ಲಿ ದಲಿತ ಮಗುವೊಂದು ದೇವಸ್ಥಾನದೊಳಗೆ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಲಾಗಿದೆ. ಇದು ಬೇರೆಯವರಿಗೆ ಸಹಜವಾಗಿ ಕಾಣಬಹುದು. ಆದರೆ, ದಲಿತರಾದ ನಮಗೆ ಅದರ ನೋವು ಏನೆಂಬುದು ಗೊತ್ತು. ಹೀಗಾಗಿ, ಆರ್‌ಎಸ್‌ಎಸ್‌ ಕಾರ್ಯಕರ್ತರು ವಿವೇಕಾನಂದರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಾಗಬೇಕು. ಪ್ರತಿಯೊಬ್ಬ ವ್ಯಕ್ತಿಗೆ ಗೌರವ ಸಿಗುವಂತೆ ಮಾಡಬೇಕು’ ಎಂದರು.
ಆರ್‌ಎಸ್‌ಎಸ್‌ ಗೆ ಜಗತ್ತಿನಲ್ಲೇ ಶಿಸ್ತಿನ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ. ರಾಜಕೀಯ ಕಾರಣಕ್ಕೆ ಕೆಲವರು ಆರ್‌ಎಸ್‌ಎಸ್‌ ಬಗ್ಗೆ ಟೀಕಿಸುತ್ತಾರೆ. ಅದಕ್ಕೆ ಕಿವಿಗೊಡುವ ಅಗತ್ಯವಿಲ್ಲ’ ಎಂದರು.
‘ನಾನು, ಮ.ವೆಂಕಟರಾಮು ಅಶೋಕಪುರಂನಲ್ಲಿ ಹುಟ್ಟಿ ಬೆಳೆದವರು. ಶಿಶುವಿಹಾರದಿಂದ ಲೋಯರ್‌ ಸೆಕೆಂಡರಿವರೆಗೂ ಒಟ್ಟಿಗೆ ಓದಿದವರು. ವಿದ್ಯಾರ್ಥಿ ಪರಿಷತ್‌ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೆವು. 1972ರಲ್ಲಿ ರಾಜಕೀಯಕ್ಕೆ ಬಂದ ಬಳಿಕ ಆರ್‌ಎಸ್‌ಎಸ್‌ನಿಂದ ಹೊರಗೆ ಬಂದೆ. ನನಗೆ ಕೋಪ ಜಾಸ್ತಿ. ಆದರೆ, ಮ.ವೆಂಕಟರಾಮು ಶಾಂತ ಸ್ವಭಾವದ ವ್ಯಕ್ತಿ’ ಎಂದು ಬಣ್ಣಿಸಿದರು.
‘ನಾನು ರಾಜಕೀಯ ಪ್ರವೇಶಿಸಿ ಮುಂದಿನ ಎರಡೂವರೆ ವರ್ಷಕ್ಕೆ 50 ವರ್ಷಗಳು ತುಂಬುತ್ತವೆ. ಈವರೆಗೆ ವೃತ್ತಿ ಧರ್ಮವನ್ನು ಎತ್ತಿ ಹಿಡಿದಿದ್ದೇನೆ. ಎಳ್ಳಷ್ಟು ಆಪಾದನೆ ಇಲ್ಲದೆ ಗೌರವಯುತವಾಗಿ ನಿವೃತ್ತನಾಗಬೇಕೆಂದು ಬಯಸಿದ್ದೇನೆ. ಯಾರೂ ಬೆರಳು ಎತ್ತಿ ತೋರಿಸದಂತೆ ಕೆಲಸ ಮಾಡುತ್ತಿದ್ದೇನೆ’ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಕಾರ್ಯವಾಹ  ದತ್ತಾತ್ರೇಯ ಹೊಸಬಾಳೆ ಆಶಯ ನುಡಿಗಳಾಡಿ ‘ಯುವ ಪೀಳಿಗೆಯು ರಾಷ್ಟ್ರ ಧರ್ಮ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮ.ವೆಂಕಟರಾಮು ಅಂತಹ ಹಿರಿಯರ ಸಾಮಾಜಿಕ ಮೌಲ್ಯ, ಧ್ಯೇಯ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಬೇರೆಯವರಿಗೆ ನೋವು ಕೊಡದೆ, ಸಮಾಜ ದುಷ್ಟರಿಗೆ ತಲೆ ಭಾಗದೆ ಧೈರ್ಯ, ಸ್ವಾಭಿಮಾನದಿಂದ ಬದುಕಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್‌ಎಸ್‌ಎಸ್‌ ದಕ್ಷಿಣ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌, ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ವಾಮನರಾವ್ ಬಾಪಟ್, ಉಪಾಧ್ಯಕ್ಷರಾದ ತೋಂಟದಾರ್ಯ, ಜಗನ್ನಾಥ ಶೆಣೈ, ‘ಸಾಮರಸ್ಯದ ಸಹೃದಯಿ ಮ.ವೆಂಕಟರಾಮು ಗ್ರಂಥ’ದ ಪ್ರಧಾನ ಸಂಪಾದಕ ವಿ.ರಂಗನಾಥ್‌ ಇದ್ದರು.

Leave a Reply

comments

Related Articles

error: