ಕರ್ನಾಟಕಪ್ರಮುಖ ಸುದ್ದಿಮೈಸೂರು

ಜೆಡಿಎಸ್ ಮುಳುಗಿಸಲು ಹೊರಟವರ ಸ್ಥಿತಿ ಏನಾಗಿದೆ ಎಂಬ ಇತಿಹಾಸವಿದೆ : ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕೆ ವಾಗ್ದಾಳಿ

ಮೈಸೂರು,ಅ.24:- ಪಕ್ಷ ಬಿಟ್ಟು ಹೋಗುವವರನ್ನು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಉಳಿದುಕೊಳ್ಳುತ್ತೇನೆ ಅನ್ನೋರನ್ನು ಹೋಗು ಅಂದರೆ ಹುಚ್ಚು ಹಿಡಿದಿದೆ ಅಂತಾರೆ. ಆದರೆ ಹೋಗೋರನ್ನು ಹಿಡಿದುಕೊಳ್ಳಲು ಆಗಲಿದೆಯಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗುಬ್ಬಿ ಶಾಸಕರು ಕುಮಾರಸ್ವಾಮಿ ಇಮೇಜ್ ಹಾಳಾಗಿದೆ ಅಂತಾರೆ. ಇಮೇಜ್ ಇಲ್ಲದವನಿಂದ ಏನ್ ಅನುಕೂಲ. ಇಮೇಜ್ ಇರೋರ್ ಹತ್ತಿರ ಹೋಗುತ್ತಾರೆ ಬಿಡಿ. ಪಕ್ಷ ಬಿಟ್ಟು ಹೋಗುತ್ತೇನೆ ಅನ್ನೋರ ಬಗ್ಗೆ ನಾನು ಮಾತನಾಡಲ್ಲ ಎಂದರು. 2023 ಕ್ಕೆ 123 ಸ್ಥಾನ ಗೆಲ್ಲುತ್ತೇವೆ ಅಂತ ಹೇಳಿದ್ದಾನೆ. ಅವರ ಖುಷಿಗೆ ಹೇಳುಕೊಳ್ಳುತ್ತಾರೆ ಅಂತ ಹೇಳಬಹುದು. ಯಾವುದೂ ಅಸಾಧ್ಯವಿಲ್ಲ. ದುಡಿಮೆಗೆ ಪ್ರತಿಫಲ ಇದೆ. ಪಕ್ಷ ಗೆಲ್ಲಲ್ಲು ಪ್ರಶಾಂತ್ ಕಿಶೋರ್ ತರುತ್ತಿಲ್ಲ. ನಮ್ಮ ಜೊತೆ ಇರುವ ಯುವಕರು ವಾಲೆಂಟರಿಯಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ಪಕ್ಷದ ಹತ್ತಿರವು ಹೋಗದೆ ನಾವೇ ಗೆಲ್ಲುತ್ತೇವೆ. ಬೈ ಎಲೆಕ್ಷನ್ ನಿಂದ ಯಾರು ಗೆದ್ದು ಬೀಗಿದರೂ ಪ್ರಯೋಜನ ಇಲ್ಲ. ಗುಂಡ್ಲುಪೇಟೆ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರು. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದರು. ಇದರಿಂದ ಯಾರು ಬೀಗಬಾರದು. ಜೆಡಿಎಸ್ ನಲ್ಲಿ ದೊಡ್ಡ ಮಟ್ಟದ ಲೀಡ್ ಗಳಿಲ್ಲ. ಕಾರ್ಯಕರ್ತರೇ ನಮಗೆ ಲೀಡರ್ ಗಳು. 90 ವರ್ಷದ ದೇವೆಗೌಡರು, ನಾನು ಇಬ್ಬರೇ ಹೋರಾಟ ಮಾಡುತ್ತಿದ್ದೇವೆ. ನಾಳೆ ಮತ್ತೆ ಎರಡು ದಿನಗಳ ಕಾಲ ಸಿಂಧಗಿ, ಹಾನಗಲ್ ಉಪ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯ ಬಿ ಟೀಂ ಅಂತ ಜೆಡಿಎಸ್ ವಿರುದ್ದ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಜೆಡಿಎಸ್ ಮುಳುಗೇ ಹೋಯ್ತು ಅಂತ ಹೇಳ್ತಾರೆ. ಹಿಂದಿನ ಬೆಳವಣಿಗೆಯನ್ನು ನೋಡಿದರೆ ಜೆಡಿಎಸ್ ಎಂತೆಂತ ಸವಾಲುಗಳನ್ನು ಎದುರಿಸಿದೆ. ಕಾಂಗ್ರೆಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ ಪರಿಣಾಮ ನಮ್ಮ ಪಕ್ಷ ನೆಲ ಕಚ್ಚುವಂತಾಗಿದೆ. ಇದರಲ್ಲೇನು ಎರಡು ಮಾತಿಲ್ಲ,ಪಕ್ಷವನ್ನು ನೆಲ ಕಚ್ಚಿಸಲು ಹೊರಟಿದ್ದಾರೆ. ಜೆಡಿಎಸ್ ನ್ನು ಮುಳುಗಿಸುತ್ತೇನೆ ಅಂತ ಹೊರಟವರ ಸ್ಥಿತಿ ಏನಾಗಿದೆ ಅಂತ ಇತಿಹಾಸ ಇದೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ನಾವೆಲ್ಲಾ ಬೆಂಬಲ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದರು ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಸಾಲ ಮನ್ನಾ ಮಾಡಲು ಅವರೇನು ಸಹಕಾರ ಕೊಡಲಿಲ್ಲ. ನನಗೆ ಹಲವಾರು ಷರತ್ತುಗಳನ್ನು ವಿಧಿಸಿ ಬಜೆಟ್ಗೆ ಸಹಕಾರ ಕೊಡಲಿಲ್ಲ. ಹಾನಗಲ್, ಸಿಂಧಗಿಯಲ್ಲಿ ಸಾಲಮನ್ನಾ ಯೋಜನೆಯನ್ನು ನೆನಪಿಸಿಕೊಳ್ಳುತ್ತಾರೆ. ಬಿಜೆಪಿಯವರು ಸ್ವಚ್ಛ ಭಾರತ ಅಂತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಜನ ಚೊಂಬು ಹಿಡಿದು ಬಹಿರ್ದೆಸೆಗೆ ಹೋಗೋದು ತಪ್ಪಿಲ್ಲ. ನಮ್ಮದು ಪ್ಯಾಮಿಲಿ ಪಾರ್ಟಿ ಅಂತೀರಾ. ಪಾರ್ಟಿ ವರ್ಕರ್ ಯಾರು ಇರಲಿಲ್ಲವ. ರಾಜಕಾರಣದಲ್ಲಿ ಇಲ್ಲದವರನ್ನು ತಂದು ಮಗನನ್ನು ಶಾಸಕರಾಗಿ ಮಾಡಿದ್ದೀರಿ. ಎಲ್ಲರ ಮನೆ ದೋಸೆ ತೂತೆ. ಇದನ್ನು ತಿಳಿದುಕೊಳ್ಳಬೇಕು ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದರು.

ನಾವು ದುಡ್ಡು ಖರ್ಚು ಮಾಡಿದ್ದು. ಜನ ಸೇರಿಸುವುದು ನಾವು. ಆದರೆ ಕುರ್ಚಿ ಹಾಕಿದ ಮೇಲೆ ಬಂದು ಭಾಷಣ ಮಾಡುತ್ತಿದ್ದರು. ನಾನು ಜೆ.ಡಿ.ಎಸ್ ಪಕ್ಷ ಕಟ್ಟಿದ್ದು ಅಂತಾರೆ. ಬ್ಯಾನರ್ ನಲ್ಲಿ ಪೋಟೊ ಇಲ್ಲ ಅಂತ ಕಾರ್ಯಕ್ರಮಕ್ಕೆ ಬರಲಿಲ್ಲ. ಮುಖ್ಯಮಂತ್ರಿ ಗಿರಿಯನ್ನು ಬೇರೆಯವರಿಗೆ ಬಿಟ್ಟುಕೊಡುತ್ತಾರಾ. ಕಾಲಿನ ಮೇಲೆ ಕಾಲಾಕ್ಕೊಂಡು ದೇವೆಗೌಡರನ್ನು ಒದ್ದುಕೊಂಡು ಕುಳಿತುಕೊಳ್ಳುತ್ತಿದ್ದರು. ಇದನ್ನೆಲ್ಲ ನಾವು ನೋಡಿದ್ದೇವೆ ಎಂದು ಕಿಡಿಕಾರಿದರು.
ರಾಜ್ಯದ ಸಂಪೂರ್ಣ ಗಮನ ಉಪಚುನಾವಣೆ ಮೇಲಿದೆ. ಎಲ್ಲರೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ ರಾಜ್ಯದ ಹಲವಾರು ಪ್ರದೇಶದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ವಿಧಾನಸೌಧದ ಕಚೇರಿ ಬಾಗಿಲು ಹಾಕಿದ್ದಾರೆ. ಒಂದೊಂದು ಭೂತಿಗೆ ಸಚಿವರನ್ನು ನೇಮಕಮಾಡಿದ್ದಾರೆ. ವಿರೋಧ ಪಕ್ಷದವರು ಅದೇ ರೀತಿ ಮಾಡಿದ್ದಾರೆ. ಆದರೆ ನಮ್ಮಲ್ಲಿ ದೊಡ್ಡ ನಾಯಕರಿಲ್ಲ. ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಆದರೆ ಅದನ್ನೇ ಸರ್ಕಾರ ಮರೆತಿದೆ. ಜನರ ಸಂಕಷ್ಟಕ್ಕಿಂತ ಚುನಾವಣೆ ಗೆಲುವನ್ನೇ ಪ್ರತಿಷ್ಠೆಯಾಗಿಸಿದ್ದಾರೆ. ಎರಡು ಪಕ್ಷದವರು ಹಣ ಚೆಲ್ಲುತ್ತಿದ್ದಾರೆ ಅಂತ ಅವರೇ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಪಕ್ಷದ ಮೇಲೆ ಯಾವುದೇ ಆರೋಪ ಇಲ್ಲ. ಕೇವಲ ಅಲ್ಪಸಂಖ್ಯಾತರನ್ನು ನಿಲ್ಲಿಸಿದ್ದಾರೆ ಅನ್ನೋ ಆರೋಪ ಮಾಡುತ್ತಿದ್ದಾರೆ ಎಂದರು.
ನಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ನವರು ಅಪಪ್ರಚಾರ ಮಾಡಿದ್ದರು. ಆದರೆ ಇವರ ಜೊತೆಯಲ್ಲೆ ಸರ್ಕಾರ ಮಾಡಿದ್ವಿ. ಇವರ ಜೊತೆ ಸರ್ಕಾರ ಮಾಡಿದ್ದಕ್ಕೆ ನಮ್ಮ ಪಕ್ಷವನ್ನು ನೆಲಕಚ್ಚಿಸಿದ್ದಾರೆ. ಆದರೆ ಯಾರಿಂದಲೂ ಜೆ.ಡಿ.ಎಸ್ ಮುಗಿಸಲು ಸಾಧ್ಯವಿಲ್ಲ. ಉಪಚುನಾವಣೆಯಲ್ಲಿ ಐದು ದಿನ ಪ್ರಚಾರ ಮಾಡಿದ್ದೇನೆ. ದೇವೇಗೌಡರ ಪಕ್ಷಕ್ಕೆ ಮೋಸ ಮಾಡಲ್ಲ ಅಂತ ಅಲ್ಲಿನ ಜನ ಹೇಳುತ್ತಾರೆ. ರೈತರಿಗೆ ಸಾಲಮನ್ನಾ ಮಾಡಿದ್ದೇವೆ. ಸಾಲ ಮನ್ನಾ ಮಾಡಲಿಕ್ಕೆ ಕಾಂಗ್ರೆಸ್ ಬೆಂಬಲ ಕೊಡಲಿಲ್ಲ. ಭಾಗ್ಯ ಕಾರ್ಯಕ್ರಮಗಳನ್ನು ನಿಲ್ಲಿಸಬಾರದು. ಬಜೆಟ್ ಮಂಡನೆ ಮಾಡಬಾರದು ಎಂದರು. ಇವರ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಪಕ್ಷಕ್ಕೆ ತೊಂದರೆಯಾಗಿದೆ. ನಮಗೆ ಶಕ್ತಿ ಇದ್ದ ಕಡೆ ಹಿನ್ನೆಡೆಯಾಗಿದೆ. ನಮ್ಮ ಪಕ್ಷವನ್ನು ತಳಹಂತದಿಂದ ಕಟ್ಟಬೇಕಿದೆ ಎಂದರು.
ನನ್ನ ಲೆವಲ್ಲಿಗೆ ಜಮೀರ್ ಬಗ್ಗೆ ಮಾತನಾಡಬೇಕಾ? ನಾನು ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ನಾಲ್ಕು ವಾರ್ಡ್ ಗಳಲ್ಲಿ ಕಸದ ಟೆಂಡರ್ ತೆಗೆದುಕೊಂಡೆ. ಕಸದ ಟೆಂಡರ್ ತೆಗೆದುಕೊಂಡು ವೃತ್ತಿ ಮಾಡುತ್ತಿದ್ದೆ. ದೇವೆಗೌಡರು ಬೇಡ ಅಂದಾಗ ಅದನ್ನು ಬಿಟ್ಟೆ. ಮೈಸೂರಿನಲ್ಲಿ ಚಿತ್ರದ ಹಂಚಿಕೆದಾರನಾಗಿ ಕೆಲಸ ಮಾಡಿದೆ. ನಾನು ನನ್ನ ತಂದೆ ನೆರಳಲ್ಲಿ ಬೆಳೆಯಲಿಲ್ಲ. ಬಡ್ಡಿ ದುಡ್ಡು ತೆಗೆದುಕೊಂಡು ದುಡಿದಿದ್ದೇನೆ. ನಾನು ತಂದೆಯ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಇಂದಿನ ರಾಜಕಾರಣಿಗಳ ರೀತಿ ಹಣ ಮಾಡಿಲ್ಲ. ಕುಮಾರಸ್ವಾಮಿ ಹಿನ್ನೆಲೆ ಇವುಗಳಿಗೇನು ಗೊತ್ತು. ಸಿನಿಮಾ ದುಡ್ಡನ್ನು ಕಾವೇರಿ ಹೋರಾಟಕ್ಕೆ ಕೊಟ್ಟಿದ್ದೇನೆ. ಇದು ನನ್ನ ಬದುಕು. ಆನೆ ಹೋಗುತ್ತಿದ್ರೆ ನಾಯಿ ಬೊಗಳುತ್ತವೆ ಇದಕ್ಕೆ ಉತ್ತರ ಕೊಡೋಕೆ ಆಗುತ್ತಾ? ನಾನು ಕಂಡವರ ಸೂಟ್ ಕೇಸ್ ಗೆ ಕೈ ಹಾಕಿದ್ದೇನೆ ಅಂತ ಇಟ್ಟುಕೊಳ್ಳೋಣ. ಆದರೆ ದೇವೆಗೌಡರ ಸೂಟ್ ಕೇಸ್ ತಗೆದುಕೊಳ್ಳೋಕೆ ಬಂದಿದ್ದಾರೆ ಅಂತಾರೆ. ನಾಲಿಗೆ ಇದೆ ಅಂತ ಹೊಲಸು ಮಾತನಾಡಿದರೆ ಅದಕ್ಕೆ ಉತ್ತರ ಕೊಡೋಕೆ ಆಗುತ್ತಾ ಎಂದು ಜಮೀರ್ ಗೆ ತಿರುಗೇಟು ನೀಡಿದರು.
ಎಲ್ಲವನ್ನು ದೇವರು ನೋಡಿಕೊಳ್ಳುತ್ತಾನೆ. ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಅವರಿಗೆ ಅಲ್ಲನ ಮೇಲೆ ನಂಬಿಕೆ ಇದ್ದರೆ ಅಲ್ಲಾ ನೋಡಿಕೊಳ್ಳುತ್ತಾನೆ ಎಂದರು.

ಸಿಂಧಗಿಯಲ್ಲಿ ಗೆಲ್ಲುವ ಎಲ್ಲಾ ವಾತಾವರಣ ಇದೆ. ನಮ್ಮ ಕುಟುಂಬದಿಂದ ಎಲ್ಲಾ ಪ್ರಯತ್ನಮಾಡುತ್ತಿದ್ದೇವೆ.ಅಲ್ಲಿನ ಅಭ್ಯರ್ಥಿ ನಮ್ಮ ಪಕ್ಷದವರೆ, ನಾವು ಬೇರೆ ಪಕ್ಷದಿಂದ ಹೈಜಾಕ್ ಮಾಡಿಲ್ಲ. ಕಾಂಗ್ರೆಸ್ ಸೋಲಿಸಬೇಕು ಬಿಜೆಪಿ ಸೋಲಿಸಬೇಕು ಎಂಬುದಿಲ್ಲ. ನಮ್ಮ ಪಕ್ಷವನ್ನು ಮುಂದಿನ ಬಾರಿ 123 ಕ್ಷೇತ್ರ ಗೆಲ್ಲುವುದು ಟಾರ್ಗೆಟ್ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: