ಮೈಸೂರು

ತಂತ್ರಜ್ಞಾನ  ಉದ್ದಿಮೆಗೆ ಸಂಬಂಧಿಸಿದ ‘ದಿ ಬಿಗ್ ಟೆಕ್ ಷೋ ಮೈಸೂರು’ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು,ಅ.25:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ   ಇಂದು  ತಂತ್ರಜ್ಞಾನ  ಉದ್ದಿಮೆಗೆ ಸಂಬಂಧಿಸಿದ ‘ದಿ ಬಿಗ್ ಟೆಕ್ ಷೋ ಮೈಸೂರು’ ಕಾರ್ಯಕ್ರಮ ಆರಂಭವಾಗಿದೆ.

ಖಾಸಗಿ ಹೋಟೆಲ್ ನಲ್ಲಿ  ಹಮ್ಮಿಕೊಳ್ಳಲಾದ  ಒಂದು ದಿನದ  ಕಾರ್ಯಕ್ರಮವನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್    ಅವರು ವರ್ಚ್ಯುಯಲ್ ಆಗಿ  ಉದ್ಘಾಟಿಸಿದರು.

ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ ಒಡೆಯರ್ ಮತ್ತು ರಾಜ್ಯದ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಜಂಟಿಯಾಗಿ ದೀಪಬೆಳಗುವ ಮೂಲಕ ಉದ್ಘಾಟಿಸಿದರು. ಸಚಿವರು  ಸರ್ಕಾರದ ಕಾರ್ಯಕ್ರಮಗಳು ಹಾಗೂ ಉಪಕ್ರಮಗಳಾದ ‘ಬಿಯಾಂಡ್ ಬೆಂಗಳೂರು’, ‘ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್-ಕೆಡಿಇಎಂ’, ‘ಮೇಕ್ ಇನ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಮತ್ತು ‘ಸ್ಟಾರ್ಟ್ ಅಪ್ ಇಂಡಿಯಾ’ಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹೊಸ ಉದ್ದಿಮೆಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು.

ಕಾರ್ಯಕ್ರಮದ ಭಾಗವಾಗಿ ಆಯ್ದ ಕಂಪನಿಗಳನ್ನು ಹಾಗೂ ನಗರ ಮೂಲದ ಉದ್ಯಮ ಪ್ರವರ್ತಕರನ್ನು ಸನ್ಮಾನಿಸಲಾಯಿತು. ಜೊತೆಗೆ, ಕೆಡಿಇಎಂ ಹಾಗೂ ಭೇರುಂಡ ಫೌಂಡೇಷನ್, ಕೆಡಿಇಎಂ ಹಾಗೂ ಐಸ್ಯಾಕ್ ನಡುವೆ ಒಡಂಬಡಿಕೆಗಳು ಏರ್ಪಡಲಿವೆ. ಕೆಡಿಇಎಂ ಮೈಸೂರು ಶಾಖೆಯು ಸೈಬರ್ ಭದ್ರತೆಗೆ ಸಂಬಂಧಿಸಿದ ಉತ್ಕೃಷ್ಠತಾ ಕೇಂದ್ರದ ಸ್ಥಾಪನೆಗಾಗಿ ಪ್ರಸ್ತಾವ ಸಲ್ಲಿಸಲಿದೆ.

ನಗರವು ಇಡೀ ದೇಶದಲ್ಲೇ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ   ಕೇಂದ್ರವಿರುವ ರಾಜಧಾನಿಯಲ್ಲದ ಮೊತ್ತಮೊದಲ ನಗರವಾಗಿದೆ. ಜೊತೆಗೆ, ಇದು ರಾಜ್ಯದಲ್ಲಿ ಸಾಫ್ಟ್ ವೇರ್ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದು, ಮಾಹಿತಿ ತಂತ್ರಜ್ಞಾನ ವಲಯವಾಗಿ ವಿಕಾಸಗೊಳ್ಳುತ್ತಿದೆ. ಪ್ರಮುಖ ಶೈಕ್ಷಣಿಕ ಕೇಂದ್ರವೂ ಆಗಿರುವ ನಗರವು ಎಲೆಕ್ಟ್ರಾನಿಕ್ ವ್ಯವಸ್ಥೆ ವಿನ್ಯಾಸ ಹಾಗೂ ತಯಾರಿಕೆಯಲ್ಲೂ (ಇ.ಎಸ್.ಡಿ.ಎಂ.) ದೃಢವಾದ ಹೆಜ್ಜೆಗಳನ್ನು ಊರಿ ಮುನ್ನಡೆಯುತ್ತಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ಸೋಮವಾರ ನಡೆಯುವ ಕಾರ್ಯಕ್ರಮವು ಗಮನಾರ್ಹವಾಗಿದೆ. ಸಂಜೆ 4.30ರವರೆಗೂ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ,  ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ಉದ್ಯಮ ವಲಯಕ್ಕೆ ಸಂಬಂಧಿಸಿದ ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: