ಕರ್ನಾಟಕಪ್ರಮುಖ ಸುದ್ದಿ

ಶಾಲೆ ಆರಂಭ ; ಮಕ್ಕಳಲ್ಲಿ ಸಂಭ್ರಮ

ರಾಜ್ಯ(ಮಡಿಕೇರಿ) ಅ.25:- ರಾಜ್ಯಾದ್ಯಂತ ಸೋಮವಾರ 1 ರಿಂದ 5ನೇ ತರಗತಿವರೆಗಿನ ಶಾಲೆಗಳು ಆರಂಭವಾಗಿದೆ. ಮಕ್ಕಳು ಸಂತೋಷದಿಂದ ಶಾಲೆಗೆ ಆಗಮಿಸಿದ್ದಾರೆ. ಶಿಕ್ಷಕರು ಮಕ್ಕಳನ್ನು ತುಂಬು ಹೃದಯದಿಂದ ಬರ ಮಾಡಿಕೊಂಡರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ ಅವರು ಮಾತನಾಡಿ, 18 ತಿಂಗಳ ನಂತರ ಶಾಲೆಗಳು ಪುನರ್ ಆರಂಭವಾಗಿದೆ. ಮಕ್ಕಳು ಸಂಭ್ರಮದಿಂದ ಶಾಲೆಗೆ ಆಗಮಿಸಿದ್ದಾರೆ ಎಂದರು.
ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 5 ನೇ ತರಗತಿ ವರೆಗೆ ಒಟ್ಟು 17,716 ಬಾಲಕರು ಹಾಗೂ 16,963 ಬಾಲಕಿಯರು ಇದ್ದು, ಒಟ್ಟು 18,120 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶಾಲೆ ಆರಂಭಗೊಳ್ಳುವುದು ಪೋಷಕರ ಒತ್ತಾಸೆಯಾಗಿತ್ತು, ಅದಕ್ಕೆ ಇಲಾಖೆಯೂ ಸ್ಪಂದಿಸಿದೆ. ಅಕ್ಟೋಬರ್ 25 ರಿಂದ 30ರ ವರೆಗೆ 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಧ ದಿನ ತರಗತಿ ನಡೆಯಲಿದೆ. ನವೆಂಬರ್ 2 ರಿಂದ ಬೆಳಗ್ಗೆಯಿಂದ ಸಂಜೆವರೆಗೆ ತರಗತಿಗಳು ನಡೆಯಲಿದ್ದು, ಬಿಸಿ ಊಟ ಇರುತ್ತದೆ ಎಂದು ಮಂಜುನಾಥ ಅವರು ತಿಳಿಸಿದರು.
ಮಡಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ ವತ್ಸಲ ಅವರು ಮಾತನಾಡಿ, ಮಕ್ಕಳು ಖುಷಿಯಿಂದ ಶಾಲೆಗೆ ಬಂದಿದ್ದಾರೆ. ಕೆಲ ವಿದ್ಯಾರ್ಥಿಗಳನ್ನು ಪೋಷಕರೇ ಕರೆತಂದು ಶಾಲೆಗೆ ಬಿಟ್ಟಿದ್ದಾರೆ. ನಮಗೂ ವಿದ್ಯಾರ್ಥಿಗಳೊಂದಿಗಿನ ಒಡನಾಟ ದೂರವಾಗಿತ್ತು, ಶಾಲಾ ಪುನರ್ ಆರಂಭ ಆಗಿರುವುದು ಸಂತಸದ ವಿಷಯವಾಗಿದೆ. ಕೋವಿಡ್ ಮಾರ್ಗಸೂಚಿಯ ಅನ್ವಯ, ಮಕ್ಕಳು ಶಾಲೆಗೆ ಬರುವ ಮುನ್ನವೇ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಒಂದು ಬೆಂಚಿನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: