ಕರ್ನಾಟಕಪ್ರಮುಖ ಸುದ್ದಿ

ಬಾಕಿ ಇರುವವರಿಗೆ ಲಸಿಕೆ ಹಾಕಿ ಶೇ.100 ರಷ್ಟು ಗುರಿಸಾಧನೆ ಮಾಡಿ: ನವೀನ್ ರಾಜ್ ಸಿಂಗ್

ರಾಜ್ಯ(ಹಾಸನ)ಅ.26 :- ಕೋವಿಡ್-19 ಪಾಸಿಟಿವಿಟಿ ದರ ಹೆಚ್ಚಳವಾಗದಂತೆ ನಿಗಾವಹಿಸಿ ಬಾಕಿ ಇರುವವರಿಗೆ ಲಸಿಕೆ ಹಾಕಿ ಶೇ.100 ರಷ್ಟು ಗುರಿಸಾಧನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ಮತ್ತಿತರ ವಿಷಯಗಳ ಕುರಿತು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಹಾಗೂ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಕೋವಿಡ್ ಸಕ್ರಿಯ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನಹರಿಸಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಂಕಿತರಿಂದ ಇತರರಿಗೆ ರೋಗ ಹರಡಂತೆ ಎಚ್ಚರವಹಿಸಿ ಹೋಂ ಐಸೋಲೇಶನ್‍ನಲ್ಲಿರುವವರ ಬಗ್ಗೆಯೂ ಸಹ ನಿರಂತರ ಮಾಹಿತಿ ಪಡೆದು ಅಗತ್ಯ ಚಿಕಿತ್ಸೆ ಮಾತ್ರೆಗಳನ್ನು ಒದಗಿಸುವಂತೆ ಹೇಳಿದರು.
ಈಗಾಗಲೇ ಲಭ್ಯವಿರುವ ಎಲ್ಲಾ ಸಾಧನ-ಸಲಕರಣೆಗಳನ್ನು ಸುಸ್ಥಿತಿಯಲ್ಲಿರಿಸಿ ಯಾವುದೇ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲು ಸದಾ ಸಿದ್ದವಾಗಿರುವಂತೆ ತಿಳಿಸಿದರು.
ವಿದ್ಯಾರ್ಥಿಗಳು, ಮಕ್ಕಳಿಗೆ ಸೋಂಕು ಹರಡದಂತೆ ಎಚ್ಚರವಹಿಸಬೇಕು ಮತ್ತು ಶಾಲಾ-ಕಾಲೇಜುಗಳಲ್ಲಿ ಸೋಂಕಿನ ಲಕ್ಷಣ ಇರುವವರನ್ನು ತಪಾಸಣೆಗೆ ಒಳಪಡಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕಡಿಮೆ ಗುರಿಸಾಧನೆಯಾಗಿರುವ ತಾಲ್ಲೂಕುಗಳಲ್ಲಿ ಲಸಿಕಾ ಕಾರ್ಯ ಚುರುಕೊಗೊಳಿಸಿ ಲಸಿಕೆ ಹಾಕಿಸಿಕೊಳ್ಳದೇ ಇರುವವರ ಹೆಸರು ವಿಳಾಸಗಳೊಂದಿಗೆ ಲೈನ್‍ಲಿಸ್ಟ್ ತಯಾರಿಸಿ, ಲಸಿಕೆ ಪಡೆಯಲು ಹಿಂಜರಿಯುತ್ತಿರುವವರನ್ನು ಗುರುತಿಸಿ ಅರಿವು ಮೂಡಿಸಿ ಲಸಿಕೆ ನೀಡುವಂತೆ ಸೂಚಿಸಿದರು.
ಹಾಸನಾಂಭೆ ದೇವಾಲಯ ದರ್ಶನಕ್ಕೆ ಲಸಿಕೆ ಪಡೆದಿರುವ ಮಾಹಿತಿ ನೀಡಿದರೆ ಮಾತ್ರ ಪ್ರವೇಶ ನೀಡುವ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಕ್ರಮವಹಿಸಿ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ತಿಳಿಸಿದರಲ್ಲದೇ, ಲಸಿಕೆ ಪಡೆಯದೇ ಇರುವವರಿಗೆ ಹಾಗೂ ಎರಡನೇ ಡೋಸ್ ಬಾಕಿ ಇರುವವರನ್ನು ಗುರುತಿಸಿ ಲಸಿಕೆ ನೀಡಲು ಅಗತ್ಯ ವ್ಯವಸ್ಥೆ ಮಾಡಿ, ಎಲ್ಲಾ 10 ದಿನಗಳ ಕಾಲ ವೈಧ್ಯಕೀಯ ತಂಡಗಳನ್ನು ದೇವಾಲಯದ ಆವರಣದಲ್ಲಿ ನಿಯೋಜಿಸುವಂತೆ ನವೀನ್ ರಾಜ್ ಸಿಂಗ್ ತಿಳಿಸಿದರು.
ಸಂತೆಗಳು ನಡೆಯುವ ಸ್ಥಳಗಳಲ್ಲಿ ಲಸಿಕೆ ನೀಡುವಂತೆ ವ್ಯವಸ್ಥೆ ಮಾಡಲು ತಿಳಿಸಿದ ಅವರು ಚಲನ ಚಿತ್ರ ಮಂದಿರಗಳಲ್ಲಿ ಕೋವಿಡ್ ಸಂರಕ್ಷಣಾ ಕ್ರಮವನ್ನು ಅನುಸರಿಸದ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದರು.
ಫ್ರೂಟ್ ನೋಂದಣಿ ಹಾಗೂ ಬೆಳೆ ಸಮೀಕ್ಷೆಯಲ್ಲಿ ನಿಗಧಿಪಡಿಸಿರುವ ಗುರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದರಲ್ಲದೇ, ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರವಹಿಸಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ 1 ತಿಂಗಳೊಳಗೆ ಪರಿಹಾರ ವಿತರಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಕಳೆದ ಏಳು ದಿನಗಳಲ್ಲಿ 25ಸಾವಿರಕ್ಕೂ ಅಧಿಕ ಮಂದಿಗೆ ತಪಾಸಣೆ ನಡೆಸಲಾಗಿದ್ದು, ನಿಗಧತ ಗುರಿಗಿಂತ ಹೆಚ್ಚಾಗಿ ತಪಾಸಣೆ ಮಾಡಲಾಗಿದೆ ಎಂದರು.
ಲಸಿಕೆಯನ್ನು ಕೇವಲ ಮೇಳದ ದಿನಗಳಲ್ಲಿ ಮಾತ್ರವಲ್ಲದೇ, ಎಲ್ಲಾ ದಿನಗಳಲ್ಲಿಯೂ ನಿರಂತರವಾಗಿ ನೀಡುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಃನಾಧಿಕಾರಿ ಬಿ.ಎ.ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್, ಹಿಮ್ಸ್ ನಿರ್ದೇಶಕರಾದ ಡಾ .ರವಿಕುಮಾರ್, ಆರ್.ಸಿ.ಹೆಚ್. ಅಧಿಕಾರಿ ಡಾ.ಕಾಂತ್‍ರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ, ಭೂದಾಖಲೆಗಳ ಉಪನಿರ್ದೆಶಕರಾದ ಹೇಮಲತ, ಜಂಟಿ ಕೃಷಿ ನಿರ್ದೆಶಕರಾದ ರವಿ, ತಹಸೀಲ್ದಾರ್‍ಗಳಾದ ನಟೇಶ್, ಮೋಹನ್ ಕುಮಾರ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: