ಮೈಸೂರು

ಮಳೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮನೆಗೆ ಮಾಜಿ ಶಾಸಕ ಎಂ.ಕೆ.ಎಸ್ ಭೇಟಿ : ಸಾಂತ್ವನ

ಮೈಸೂರು, ಅ.25:-ನಿನ್ನೆ ದಿನ ಸುರಿದ ಭಾರೀ ಮಳೆಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಸಿದ್ದಾರ್ಥ ಬಡಾವಣೆಯ ದೊಡ್ಡಮೋರಿಯಲ್ಲಿ ಅಮಾಯಕನೊಬ್ಬ ಬಿದ್ದು ಕೊಚ್ಚಿ ಹೋಗಿರುವ ವಿಷಯ ತಿಳಿದು ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ಕೊಚ್ಚಿ ಹೋಗಿರುವ ವ್ಯಕ್ತಿಯ ಪತ್ನಿಯಿಂದ ಮಾಹಿತಿ ಪಡೆದು ಸಾಂತ್ವನ ಹೇಳಿದರು.

ಇದೇ ವೇಳೆ ಜಿಲ್ಲಾಧಿಕಾರಿಗಳು,ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಜಿಲ್ಲಾಡಳಿತ,ಪಾಲಿಕೆಯ ನಿರ್ಲಕ್ಷ್ಯದಿಂದಲೇ ಈ ಅನಾಹುತ ಸಂಭವಿಸಿದೆ. ಆದ್ದರಿಂದ ಪರಿಹಾರವನ್ನು ಕೂಡಲೇ ಕುಟುಂಬಸ್ಥರಿಗೆ ನೀಡಬೇಕೆಂದು ಒತ್ತಾಯಿಸಿದರು.ಈ ವೇಳೆ ಸ್ಥಳೀಯ ಮುಖಂಡರಾದ ಪ್ರದೀಪ್ ಕುಮಾರ್,ಸೋಮು,ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿ,ಸಿಬ್ಬಂದಿಗಳು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಇತ್ತೀಚಿಗೆ ಶಾಸಕರಾದ ಎಸ್ ಎ ರಾಮದಾಸ್ ರವರು ಮೈಸೂರಿಗೆ ಬರುವ ಎಲ್ಲಾ ಸಚಿವರಿಂದಲೂ ಕೃಷ್ಣರಾಜ ಕ್ಷೇತ್ರ ಮಾದರಿ ಕ್ಷೇತ್ರ ಎಂದು ಹೊಗಳಿಸಿಕೊಂಡು ಪುಟಗಟ್ಟಲೇ ಜಾಹೀರಾತು ಹಾಕಿಸಿಕೊಂಡು ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ. ಅಪರಾಧ ಮುಕ್ತ ಕ್ಷೇತ್ರ ಎಂದು ಬಡಾಯಿ ಕೊಚ್ಚಿಕೊಳ್ಳುವುದು ಒಂದೆಡೆ ಆದರೆ ಮತ್ತೊಂದೆಡೆ ಇದೇ ಕ್ಷೇತ್ರದಲ್ಲಿ 9 ಮರ್ಡರ್ ಸಂಭವಿಸಿದೆ.ಇನ್ನೂ ಕ್ಷೇತ್ರ ಪೂರ್ತಿ ಸುಂದರ ಮತ್ತು ಸುರಕ್ಷಿತ ರಸ್ತೆಗಳು ನಿರ್ಮಾಣವಾಗಿದೆ ಎಂದು ಸುಳ್ಳು ಹೇಳುವುದು ಕ್ಷೇತ್ರದೆಲ್ಲೆಡೆ ಎಲ್ಲೆಡೆ ರಸ್ತೆಗಳು ಡಾಂಬರ್ ಕಿತ್ತು ಬೃಹತ್ ಗುಂಡಿಯಿಂದ ಕೂಡಿವೆ. ಮಳೆ ಬಂದ ಕೂಡಲೇ ಕನಕಗಿರಿ,ಗುಂಡುರಾವ್ ನಗರ,ಭೈರವೇಶ್ವರ ನಗರ,ಜೆಸಿ ನಗರ,ಕಾರಂಜಿ ಬಡಾವಣೆ,ಸೂರ್ಯ ಬಡಾವಣೆ,ಶ್ರೀರಾಂಪುರ ಎಲ್ಲಾ ಕಡೆ ಮೋರಿಗಳೆಲ್ಲಾ ಮುಚ್ಚಿಹೋಗಿದ್ದು ರಸ್ತೆಯೆಲ್ಲಾ ನೀರು ತುಂಬಿ ಮನೆಗಳಿಗೆಲ್ಲಾ ನೀರು ನುಗ್ಗಿ ಜಲಾವೃತ್ತಗೊಂಡು ಜನ ಹಿಡಿ ಶಾಪ ಹಾಕುತ್ತಿದ್ದಾರೆ.ಜಿಲ್ಲಾಡಳಿತ,ಪಾಲಿಕೆ ಎಲ್ಲವೂ ನಿದ್ರಾವಸ್ಥೆಯಲ್ಲಿವೆ.ಇದಕ್ಕೆ ನಿನ್ನೆ ಸಂಭವಿಸಿರುವ ಅನಾಹುತವೇ ಸಾಕ್ಷಿ. ಸಿದ್ದಾರ್ಥ ಬಡಾವಣೆ,ಜೆಸಿ ನಗರ,ಕುರುಬಾರಳ್ಳಿ ಈ ಭಾಗದಲ್ಲಿ ಮೋರಿಗಳೆಲ್ಲವೂ ಕಸ ಮತ್ತು ನಿರುಪಯುಕ್ತ ವಸ್ತುಗಳಿಂದ ತುಂಬಿ ನಾರುತ್ತಿದ್ದು ನೀರು ರಸ್ತೆಗಳ ಮೇಲೆ ಬಂದು ರಸ್ತೆ ಮತ್ತು ಮೋರಿಯ ವ್ಯತ್ಯಾಸ ತಿಳಿಯಲು ಕಷ್ಠಕರವಾದ ಸ್ಥಿತಿ ಬಂದಿದೆ. ಅಧಿಕಾರಿಗಳೆಲ್ಲಾ ಕಣ್ಣುಮುಚ್ಚಿ ಕುಳಿತಿದ್ದಾರೆ.

ಇದನ್ನೆಲ್ಲಾ ಮರೆತು ಶಾಸಕರು ಕ್ಷೇತ್ರದಲ್ಲಿ ತಲೆದೋರಿರುವ ನೂರಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದೆ ಬರೀ ಸುಳ್ಳು ಹೇಳಿಕೊಂಡು ಕೃಷ್ಣರಾಜ ಕ್ಷೇತ್ರ ಮಾದರಿ ಕ್ಷೇತ್ರ,ಅಪರಾಧ ಮುಕ್ತ ಕ್ಷೇತ್ರ,ಸುಂದರ ಸುರಕ್ಷಿತ ರಸ್ತೆಗಳ ಕ್ಷೇತ್ರ ಎಂದು ಜಾಹಿರಾತು ಕೊಟ್ಟುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: