ಕರ್ನಾಟಕಪ್ರಮುಖ ಸುದ್ದಿ

ಬೈಲಾಗಳನ್ನು ಸರ್ಕಾರದ ಆದೇಶದಂತೆ ತಿದ್ದುಪಡಿ ಮಾಡಬೇಕು : ಹೆಚ್.ಟಿ.ಮಂಜು

ರಾಜ್ಯ(ಮಂಡ್ಯ)ಅ.26:-  ಹಾಲು ಉತ್ಪಾದಕರ ಸಹಕಾರ ಸಂಘಗಳ ಬೈಲಾಗಳನ್ನು ಸರ್ಕಾರದ ಆದೇಶದಂತೆ ತಿದ್ದುಪಡಿ ಮಾಡಿಕೊಳ್ಳಬೇಕೆಂದು ಮನ್ಮುಲ್ ನಿರ್ದೇಶಕರಾದ ಹೆಚ್ ಟಿ ಮಂಜು ಅವರು ತಿಳಿಸಿದರು

ಪಟ್ಟಣದಲ್ಲಿರುವ ಮನ್ಮುಲ್ ಉಪ ಕಚೇರಿಯಲ್ಲಿ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಸ್ತುತ 2021-22 ನೇ ಸಾಲಿನಲ್ಲಿ ಸರ್ಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಬೈಲಾಗಳಿಗೆ ಹಲವಾರು ಮಾರ್ಪಾಡುಗಳನ್ನು ತಂದಿದೆ ಎಂದರು.

ಆದ್ದರಿಂದ ಡೈರಿ ಕಾರ್ಯದರ್ಶಿಗಳು ಸರ್ಕಾರ ತಂದಿರುವ ಬೈಲಾಗಳ ಮಾಹಿತಿಯನ್ನು ಪಡೆದು ಸಹಕಾರ ಸಂಘಗಳ ಷೇರುದಾರರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳ ಕರ್ತವ್ಯಗಳು,ಜವಾಬ್ದಾರಿಗಳ ಬಗ್ಗೆ ತಿಳಿಸಲಾಗಿರುವುದರಿಂದ ಕೂಡಲೇ ಇವುಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕೆಂದು ಹೇಳಿದರು.

ಇನ್ನೋರ್ವ ಮನ್ಮುಲ್ ಹಿರಿಯ ನಿರ್ದೇಶಕರಾದ ಡಾಲು ರವಿ ಮಾತನಾಡಿ ನೂತನ ಬೈಲಾ ನಿಯಮದ ಪ್ರಕಾರ ಸಹಕಾರ ಸಂಘಗಳಲ್ಲಿ ಚುನಾಯಿತರಾದ ಸದಸ್ಯರು ಒಟ್ಟು 5 ವರ್ಷಗಳ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ನಡಾವಳಿ ಪುಸ್ತಕದಲ್ಲಿ ಸಹಿ ಹಾಕಿರಬೇಕು ಹಾಗೂ ಎರಡು ವರ್ಷಗಳ ಕಾಲ ಸಂಘದಲ್ಲಿ ವ್ಯವಹಾರ ಮಾಡದಿದ್ದಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಕಳೆದುಕೊಳ್ಳುತ್ತಾರೆ.ಆದ್ದರಿಂದ ನಿರ್ದೇಶಕರು ಸಂಘದಲ್ಲಿ ಕನಿಷ್ಠ ವ್ಯವಹಾರಗಳನ್ನು ಮಾಡಬೇಕು ಜತೆಗೆ ಹೊಸ ಬೈಲಾ ನಿಯಮಗಳ ಬಗ್ಗೆ ಮಾಹಿತಿ ಪಡೆದು ತಮ್ಮ ಬೈಲಾಗಳಿಗೆ ಅಳವಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ನಿಧನ ಹೊಂದಿದ ರಾಸುಗಳ ಮಾಲಿಕರಿಗೆ ರಾಸುಗಳ ವಿಮಾ ಚೆಕ್ ,ಮರಣ ಹೊಂದಿದ ಹಾಲು ಉತ್ಪಾದಕರಿಗೆ ಚೆಕ್ ವಿತರಣೆ ಹಾಗೂ ಮೇವು ಕತ್ತರಿಸುವ ಯಂತ್ರ,ನೆಲಹಾಸು,ಹಾಲು ಕರೆಯುವ ಯಂತ್ರಗಳಿಗೆ ಸಹಾಯಧನ ಚೆಕ್ ಗಳನ್ನು ಮನ್ಮುಲ್ ನಿರ್ದೇಶಕರಾದ ಕೆ ಜಿ ತಮ್ಮಣ್ಣ ಅವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕರಾದ ಕೆ ಜಿ ತಮ್ಮಣ್ಣ,ಸಹಕಾರ ಸಂಘಗಳ ಉಪ ನಿಬಂಧಕ ನಾಗಭೂಷಣ್,ಮನ್ಮುಲ್ ಉಪ ವ್ಯವಸ್ಥಾಪಕರಾದ ಮೋಹನಕುಮಾರ್, ಮನ್ಮುಲ್ ಮಾರ್ಗ ವಿಸ್ತರಣಾಧಿಕಾರಿಗಳಾದ ನಾಗಪ್ಪ ಅಲ್ಲಿಬಾದಿ, ಗುರುರಾಜ್ ,ಶಿವಶಂಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: