ಮೈಸೂರು

ಶಿವಪಥವನು ಅರಿವಡೆ ಗುರುಪಥವೆ ಮೊದಲು :ಎನ್. ನಾಗಶ್ರೀ ತ್ಯಾಗರಾಜ್

ಮೈಸೂರು, ಅ.26:- ಶಿವಪಥವನು ಅರಿವಡೆ ಗುರುಪಥವೆ ಮೊದಲು ಎಂದು ಬಸವಣ್ಣನವರು ಹೇಳಿದ್ದು ಸರ್ವತ್ರವಾದುದು ಎಂದು ಖ್ಯಾತ ವಾಗ್ಮಿಗಳು ಹಾಗೂ ಚಿಕ್ಕಮಗಳೂರಿನ ಡಿಜಿಸಿಎ ಪಾಲಿಟೆಕ್ನಿಕ್‍ನ ಹಿರಿಯ ಶ್ರೇಣಿ ಉಪನ್ಯಾಸಕರಾದ  ಎನ್. ನಾಗಶ್ರೀ ತ್ಯಾಗರಾಜ್‍ರವರು ಹೇಳಿದರು.
ನಿನ್ನೆ   ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ  ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-47’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ “ಸನ್ಮಾರ್ಗ-ಗುರು” ಕುರಿತು ಉಪನ್ಯಾಸ ನೀಡಿದರು.

ಗುರು ಅಖಂಡಮಂಡಲಾಕಾರ, ಸನ್ಮಾರ್ಗಗಳನ್ನು ತೋರುವವನು. ಗುರುವಿಗೆ ನಮ್ರತೆಯಿಂದ ಇದ್ದರೆ ಜೀವನದಲ್ಲಿ ಎಲ್ಲವೂ ದೊರೆಯತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರುವ ಮಾರ್ಗದರ್ಶಿ. ಲೌಕಿಕ ಜೀವನದಲ್ಲೂ ಈ ಗುರುವಿನ ಪಾತ್ರ ಬಹಳ ಮಹತ್ವದ್ದು. ತಪ್ಪುಗಳನ್ನು ಮನ್ನಿಸುವ ಶಕ್ತಿ ಗುರುವಿಗೆ ಮಾತ್ರ ಇದೆ. ಗುರು ನಾನಾ ರೂಪಗಳಲ್ಲಿ ನಮ್ಮ ಮುಂದೆ ಇದ್ದಾನೆ. ತಂದೆ, ತಾಯಿ, ಶಿಕ್ಷಕ, ಶರಣರು, ಸಂತರು, ಆಧ್ಯಾತ್ಮಿಕ ದಾರ್ಶನಿಕರೆಲ್ಲರೂ ಗುರುಗಳೆ. ಬದುಕಿನಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಗುರುವಿನ ಮಾರ್ಗದರ್ಶನ ಸದಾ ಅಗತ್ಯ. ನಾವು ಸ್ನೇಹ ಮಾಡುವವರ ಸಂಗದ ಮೇಲೆ ಸಮಾಜ ನಮ್ಮ ನಡವಳಿಕೆಯನ್ನು ನಿರ್ಧರಿಸುತ್ತದೆ. ಗುರು ನಕಾರಾತ್ಮಕತೆಯನ್ನು ತೊಡೆದು ಹಾಕಿ ಸಕಾರಾತ್ಮಕ ಚಿಂತನೆಗಳನ್ನು ಬೋಧಿಸುತ್ತಾನೆ. ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಒಬ್ಬ ವ್ಯಕ್ತಿಯ ಸಂಪೂರ್ಣ ಏಳ್ಗೆಗೆ ಗುರುವೇ ಕಾರಣ ಎಂದು ತಿಳಿಸಿದರು.
ಉಪನ್ಯಾಸದ ನಂತರ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಆನ್‍ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು.  ರೂಪಾ ರವೀಶ್ ಪ್ರಾರ್ಥಿಸಿದರು.  ಹೊನ್ನಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: